ರಾಜಸ್ಥಾನ: ಪತಿ ವಿರುದ್ಧ ಪತ್ನಿ, ಮಾವನ ವಿರುದ್ಧ ಸೊಸೆಯಂದಿರ ಸ್ಪರ್ಧೆ
ಜೈಪುರ, ನವೆಂಬರ್ 14: ಮುಂಬರುವ ರಾಜಸ್ಥಾನ ವಿಧಾನಸಭಾ ಚುನಾವಣೆಯು ನಾಲ್ಕು ಸ್ಥಾನಗಳಲ್ಲಿ ಕುತೂಹಲಕಾರಿ ಸ್ಪರ್ಧೆಗೆ ಸಾಕ್ಷಿಯಾಗಲಿದೆ. ಈ ಕ್ಷೇತ್ರಗಳಲ್ಲಿ ಸಂಬಂಧಿಕರು ಪರಸ್ಪರ ಸ್ಪರ್ಧಿಸುತ್ತಿದ್ದಾರೆ. ಅಂದರೆ ಸ್ವಃತ ಗಂಡನ ವಿರುದ್ಧ ಪತ್ನಿ ಹಾಗೂ ಮಾವನ ವಿರುದ್ಧ ಸೊಸೆಯಂದಿರೇ ಕಣಕ್ಕೆ ಇಳಿದಿದ್ದಾರೆ.
ಹರಿಯಾಣ ಮೂಲದ ಜನನಾಯಕ್ ಜನತಾ ಪಕ್ಷದ ಅಭ್ಯರ್ಥಿ ರೀಟಾ ಚೌಧರಿ ಅವರು ಸಿಕರ್‌ನ ದಂತ ರಾಮಗಢದಿಂದ ಸ್ಪರ್ಧಿಸುತ್ತಿದ್ದಾರೆ. ಅವರು ಆಡಳಿತ ಪಕ್ಷದಿಂದ ಮತ್ತೊಮ್ಮೆ ಕಣಕ್ಕಿಳಿದಿರುವ ತಮ್ಮ ಪತಿ ಹಾಲಿ ಕಾಂಗ್ರೆಸ್ ಶಾಸಕ ವೀರೇಂದ್ರ ಚೌಧರಿ ವಿರುದ್ಧ ಅವರು ಕಣಕ್ಕಿಳಿದಿದ್ದಾರೆ.

2018 ರ ವಿಧಾನಸಭಾ ಚುನಾವಣೆಯಲ್ಲಿ, ಮಾಜಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಾರಾಯಣ್ ಸಿಂಗ್ ಅವರ ಪುತ್ರ ವೀರೇಂದ್ರ ಚೌಧರಿ ಅವರು ತಮ್ಮ ಬಿಜೆಪಿ ಪ್ರತಿಸ್ಪರ್ಧಿಯನ್ನು ಕೇವಲ 920 ಮತಗಳಿಂದ ಸೋಲಿಸಿದ್ದರು. ಈಗ ತಮ್ಮ ಪತ್ನಿ ವಿರುದ್ಧ ಕಣಕ್ಕಿಳಿದಿದ್ದಾರೆ. ಈ ಬಗ್ಗೆ ಅವರ ಪತ್ನಿ ರೀಟಾ ಮಹಿಳಾ ಸಬಲೀಕರಣ ಮತ್ತು ಕುಡಿಯುವ ನೀರಿನಂತಹ ವಿಷಯಗಳ ಮೇಲೆ ಅವರ ಗಮನವಿದೆ ಎಂದು ಪಿಟಿಐಗೆ ತಿಳಿಸಿದ್ದಾರೆ.
ಆಕೆಯ ಕುಟುಂಬವು ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಿದೆ. ಆಗಸ್ಟ್‌ನಲ್ಲಿ ರೀಟಾ ಚೌಧರಿ ದುಷ್ಯಂತ್ ಚೌತಾಲಾ ಅವರ ಜೆಜೆಪಿಗೆ ಸೇರ್ಪಡೆಗೊಂಡರು ಮತ್ತು ಅದರ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡರು. 2018ರಲ್ಲಿ ಕಾಂಗ್ರೆಸ್ ಟಿಕೆಟ್ ಸಿಗುವ ನಿರೀಕ್ಷೆ ಹೊಂದಿದ್ದ ಅವರು, ಪಕ್ಷ ತನ್ನ ಪತಿಯನ್ನು ಆಯ್ಕೆ ಮಾಡಿದ ಬಳಿಕ ಆಕೆಯ ನಿರೀಕ್ಷೆ ಹುಸಿಯಾಯಿತು. ಅಂದಿನಿಂದ, ರೀಟಾ ಚೌಧರಿ ತಮ್ಮದೇ ಆದ ನೆಲೆಯನ್ನು ಬಲಪಡಿಸಲು ಪ್ರಾರಂಭಿಸಿದರು.
ಧೋಲ್‌ಪುರ ವಿಧಾನಸಭಾ ಕ್ಷೇತ್ರವು ಒಂದೇ ಕುಟುಂಬದ ಇಬ್ಬರು ಸದಸ್ಯರ ನಡುವೆ ಕುತೂಹಲಕಾರಿ ಸ್ಪರ್ಧೆಗೆ ಸಾಕ್ಷಿಯಾಗಿದೆ. ಆದರೆ ಇದರಲ್ಲಿ ಟ್ವಿಸ್ಟ್ ಇದೆ. ಸ್ಪರ್ಧಿಸಿದ್ದ ಇಬ್ಬರೂ ಅಭ್ಯರ್ಥಿಗಳು ಈಗ ಪಕ್ಷ ಬದಲಾಯಿಸಿದ್ದಾರೆ. 2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಶೋಭಾರಾಣಿ ಕುಶ್ವಾ ಅವರು ತಮ್ಮ ಸೋದರ ಮಾವ ಶಿವಚರಣ್ ಕುಶ್ವಾ ಅವರನ್ನು ಸೋಲಿಸುವ ಮೂಲಕ ಸ್ಥಾನವನ್ನು ಗೆದ್ದಿದ್ದಾರೆ. ಹಿಂದಿನ ವರ್ಷ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಕಾರಣ ಬಿಜೆಪಿ ಪಕ್ಷದಿಂದ ಉಚ್ಛಾಟಿಸಲಾಗಿತ್ತು.
ಬಳಿಕ ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು ಮತ್ತು ಅದೇ ಸ್ಥಾನದಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಆಕೆಯ ಸೋದರ ಮಾವ ಶಿವಚರಣ್ ಕುಶ್ವಾ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. "ಸಂಬಂಧಗಳು ಮತ್ತು ರಾಜಕೀಯ ಸ್ಪರ್ಧೆಗಳು ಸಂಪೂರ್ಣವಾಗಿ ವಿಭಿನ್ನ ಅಂಶಗಳಾಗಿವೆ. ಅವುಗಳು ತಮ್ಮದೇ ಆದ ಸ್ಥಾನವನ್ನು ಹೊಂದಿವೆ. ಆದ್ದರಿಂದ ಚುನಾವಣಾ ಕದನದಲ್ಲಿ ನಾವು ನಮ್ಮ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು 'ಸಾಲಿ' ಮತ್ತು 'ಜಿಜಾ' ಅಲ್ಲ, "ಎಂದು ಅವರು ಪಿಟಿಐಗೆ ತಿಳಿಸಿದರು.
ನಾಗೌರ್ ಕ್ಷೇತ್ರದಲ್ಲಿ ಮಾಜಿ ಕಾಂಗ್ರೆಸ್ ಸಂಸದೆ ಜ್ಯೋತಿ ಮಿರ್ಧಾ ಅವರು ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿರುವ ಅವರ ಮಾವ ಹರೇಂದ್ರ ಮಿರ್ಧಾ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿಸಿದ್ದಾರೆ. ಈ ಸ್ಥಾನವನ್ನು ಬಿಜೆಪಿಯ ಮೋಹನ್ ರಾಮ್ ಚೌಧರಿ ಅವರು 2018 ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಬೀಬುರ್ ರೆಹಮಾನ್ ಲಂಬಾ ಅವರನ್ನು 13,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದರು.
ಜುಂಜುನ ಖೇತ್ರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಧರಂಪಾಲ್ ಗುರ್ಜರ್ ಸ್ಪರ್ಧಿಸಿದ್ದಾರೆ. ಅವರ ಸಹೋದರ ದಾತಾರಾಮ್ ಗುರ್ಜರ್ ಅವರ ಪುತ್ರಿ ಮನಿಶಾ ಗುರ್ಜರ್ ಬಿಜೆಪಿ ಪಕ್ಷದಿಂದ ಟಿಕೆಟ್ ನಿರಾಕರಿಸಿದ ನಂತರ ಬಂಡಾಯವೆದ್ದು ಕಾಂಗ್ರೆಸ್ ಸೇರಿದರು. ಈಗ ಅವರು ತಮ್ಮ ಚಿಕ್ಕಪ್ಪನ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ನವೆಂಬರ್ 25 ರ ಚುನಾವಣೆಯಲ್ಲಿ 1875 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 183 ಮಹಿಳೆಯರು ಮತ್ತು 1,692 ಪುರುಷರು. ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications