ಅಮಿತ್ ಠಾಕ್ರೆಗೆ ತಡೆ: ಸಿನ್ನಾರ್ ಟೋಲ್ ಪ್ಲಾಜಾ ಧ್ವಂಸಗೊಳಿಸಿದ ಎಂಎನ್‌ಎಸ್ ಕಾರ್ಯಕರ್ತರು
ಭೋಪಾಲ್, ಜುಲೈ. 23: ಮಹಾರಾಷ್ಟ್ರದ ನಾಸಿಕ್‌ನ ಸಮೃದ್ಧಿ ಎಕ್ಸ್‌ಪ್ರೆಸ್‌ವೇಯಲ್ಲಿರುವ ಟೋಲ್ ಪ್ಲಾಜಾವನ್ನು ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಪಕ್ಷದ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ. ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರ ಪುತ್ರ ಎಂಎನ್‌ಎಸ್ ನಾಯಕ ಅಮಿತ್ ಠಾಕ್ರೆ ಅವರನ್ನು ಟೋಲ್ ಬಳಿ ತಡೆದ ನಂತರ ಪಕ್ಷದ ಕಾರ್ಯಕರ್ತರು ಘರ್ಷನೆ ನಡೆಸಿದ್ದಾರೆ.
ಶನಿವಾರ ತಡರಾತ್ರಿ ಬೂತ್ ಮೇಲೆ ದಾಳಿ ಮಾಡಿದ ಎಂಎನ್‌ಎಸ್ ಪಕ್ಷದ ಕಾರ್ಯಕರ್ತರು ದೊಣ್ಣೆ, ಕಟ್ಟಿಗೆಗಳು, ಬ್ಯಾಟ್‌ಗಳಿಂದ ಸಿನ್ನಾರ್ ಟೋಲ್ ಪ್ಲಾಜಾದಲ್ಲಿ ದಾಂಧಲೆ ನಡೆಸಿದ್ದಾರೆ. ತಮ್ಮ ನಾಯಕರನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ಕಾಯಿಸಿದ ಕಾರಣ ಕಾರ್ಯಕರ್ತರು ಕೋಪಗೊಂಡಿದ್ದರು.

ಅಮಿತ್ ಠಾಕ್ರೆ ಅವರ ಬೆಂಗಾವಲು ಪಡೆ, ಇತರ ಎಂಎನ್‌ಎಸ್ ಪದಾಧಿಕಾರಿಗಳು, ಶನಿವಾರ ಸಂಜೆ ಅಹ್ಮದ್‌ನಗರದಿಂದ ಸಮೃದ್ಧಿ ಎಕ್ಸ್‌ಪ್ರೆಸ್‌ವೇ ಮೂಲಕ ಸಿನ್ನಾರ್‌ಗೆ ಹಿಂತಿರುಗುತ್ತಿದ್ದಾಗ, ಟೋಲ್ ಪ್ಲಾಜಾ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಗುರುತಿನ ಚೀಟಿಗಳನ್ನು ಹಾಜರುಪಡಿಸಲು ಸಹ ಅವರಿಗೆ ಸೂಚಿಸಲಾಗಿದೆ. ಹೀಗಾಗಿ ಅವರ ಪಕ್ಷದ ಕಾರ್ಯಕರ್ತರು ಅಧಿಕಾರಿಗಳ ಮೇಲೆ ಕಿಡಿಕಾರಿದ್ದಾರೆ.
ಭಾನುವಾರ ಮುಂಜಾನೆ 2:30 ರ ಸುಮಾರಿಗೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಾರ್ಯಕರ್ತರು ಎಂದು ಹೇಳಲಾದ ಗುಂಪೊಂದು ಟೋಲ್ ಪ್ಲಾಜಾವನ್ನು ಧ್ವಂಸಗೊಳಿಸಿದ್ದಿ, ಅಲ್ಲಿದ್ದ ಸಿಬ್ಬಂದಿ ಕ್ಷಮೆಯಾಚಿಸಬೇಖು ಎಂದು ಆಗ್ರಹಿಸಿದೆ. ಟೋಲ್ ಬೂತ್ ನೌಕರರು ತಮ್ಮ ನಾಯಕನನ್ನು ಕಾಯುವಂತೆ ಮಾಡುವುದು ಅಸಭ್ಯವಾಗಿದೆ ಎಂದು ಆರೋಪಿಸಿದ್ದಾರೆ.
ಮೂರು ಕಾರುಗಳಲ್ಲಿ ಎಂಎನ್‌ಎಸ್ ಕಾರ್ಯಕರ್ತರು ಸ್ಥಳಕ್ಕೆ ತಲುಪಿದ್ದಾರೆ ಎನ್ನಲಾಗಿದೆ. ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಬಗ್ಗೆ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ, ಆದರೆ ಪೊಲೀಸರು ವಿಡಿಯೋ ಆಧಾರದ ಮೇಲೆ ತನಿಖೆ ನಡೆಸಿದ್ದಾರೆ. ಇನ್ನೂ ಯಾವುದೇ ದೂರು ಬಂದಿಲ್ಲ ಮತ್ತು ಟೋಲ್ ಆಡಳಿತವು ದೂರು ನೀಡಲು ಅಥವಾ ಘಟನೆಯ ಬಗ್ಗೆ ಮಾತನಾಡಲು ನಿರಾಕರಿಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಮತ್ತು ಸಿಸಿಟಿವಿ ಇತ್ಯಾದಿಗಳನ್ನು ಪರಿಶೀಲಿಸಿದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ನಮಗೆ ಯಾವುದೇ ದೂರು (ಟೋಲ್ ಪ್ಲಾಜಾ ಸಿಬ್ಬಂದಿಯಿಂದ) ಬಂದಿಲ್ಲ. ಆದರೆ ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ" ಎಂದು ವಾವಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.












Click it and Unblock the Notifications