ರೈಲ್ವೆ ಬಜೆಟ್ 2016 : ಮಾಜಿ ರೈಲ್ವೆ ಸಚಿವರು ಹೇಳುವುದೇನು?
ಬೆಂಗಳೂರು, ಫೆಬ್ರವರಿ 26 : ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಮಂಡನೆ ಮಾಡಿದ 2016-17ನೇ ಸಾಲಿನ ರೈಲ್ವೆ ಬಜೆಟ್‌ಗೆ ರಾಜಕೀಯ ಪಕ್ಷಗಳು, ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾಜಿ ರೈಲ್ವೆ ಸಚಿವರು ಬಜೆಟ್ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ರೈಲ್ವೆ ಸಚಿವರಾಗಿ ಎರಡನೇ ಬಾರಿಗೆ ಬಜೆಟ್ ಮಂಡನೆ ಮಾಡಿರುವ ಸುರೇಶ್ ಪ್ರಭು ಅವರು ಹೊಸ ಯೋಜನೆಗಳನ್ನು ಘೋಷಣೆ ಮಾಡುವುದಕ್ಕಿಂತ, ಹಳೆಯ ಘೋಷಣೆಗಳನ್ನು ಕಾರ್ಯಗತಗೊಳಿಸಲು ಒತ್ತು ನೀಡಿದ್ದಾರೆ. [ರೈಲ್ವೆ ಬಜೆಟ್ ಪ್ರಮುಖ ಅಂಶಗಳು]
ಮಾಜಿ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಅವರು, 'ರೈಲು ಸೇವೆ ಜನರಿಗೆ ಹತ್ತಿರವಾಗುವಂತೆ ಎಲ್ಲಾ ವರ್ಗಕ್ಕೂ ಬಜೆಟ್ ನಲ್ಲಿ ಆದ್ಯತೆ ನೀಡಲಾಗಿದೆ. ಪ್ರಗತಿಪರ ಮತ್ತು ದೂರದರ್ಶಿತ್ವದ ಬಜೆಟ್' ಎಂದು ಬಣ್ಣಿಸಿದ್ದಾರೆ. [ರೈಲ್ವೆ ಬಜೆಟ್ 2016-17 : ಕರ್ನಾಟಕಕ್ಕೆ ಸಿಕ್ಕಿದ್ದೇನು?]
ಮಾಜಿ ರೈಲ್ವೆ ಸಚಿವರಾದ ಲಾಲೂ ಪ್ರಸಾದ್ ಯಾದವ್, ನಿತೀಶ್ ಕುಮಾರ್, ಪವನ್ ಕುಮಾರ್ ಬನ್ಸಾಲ್ ಬಜೆಟ್‌ನಲ್ಲಿ ಹೊಸದೇನು ಇಲ್ಲ ಎಂದು ಟೀಕಿಸಿದ್ದಾರೆ. ಬಜೆಟ್ ಬಗ್ಗೆ ಯಾರು ಏನು ಹೇಳಿದರು? ಚಿತ್ರಗಳಲ್ಲಿ ನೋಡಿ...

'ನಿರಾಶದಾಯಕ ಬಜೆಟ್'
ಮಾಜಿ ರೈಲ್ವೆ ಸಚಿವ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, 'ರೈಲ್ವೆ ಬಜೆಟ್ ನಿರಾಶದಾಯಕ' ಎಂದು ಹೇಳಿದ್ದಾರೆ. 'ಬಜೆಟ್‌ನಲ್ಲಿ ಸ್ವಚ್ಛತೆ, ಭದ್ರತೆ, ರೈಲುಗಳು ಸರಿಯಾದ ಸಮಯಕ್ಕೆ ಬರುವಂತೆ ಮಾಡಲು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ತೈಲ ಬೆಲೆ ಇಳಿಕೆಯಾಗಿದೆ. ಪ್ರಯಾಣದರ ಕಡಿಮೆ ಮಾಡಬೇಕಿತ್ತು' ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ಎಲ್ಲಾ ರಾಜ್ಯಗಳಿಗೂ ಸಮಪಾಲು
'ರೈಲ್ವೆ ಬಜೆಟ್‌ನಲ್ಲಿ ದೇಶದ ಎಲ್ಲಾ ರಾಜ್ಯಗಳಿಗೂ ಸಮಪಾಲು ನೀಡಲಾಗಿದೆ. ಎಲ್ಲಾ ವರ್ಗದ ಶ್ರೀಸಾಮಾನ್ಯರಿಗೆ ರೈಲು ಸೇವೆ ಹತ್ತಿರವಾಗುವಂತೆ ವಿಶೇಷ ಆದ್ಯತೆ ಕೊಡಲಾಗಿದೆ. ಇದು ಪ್ರಗತಿಪರ ಮತ್ತು ದೂರದರ್ಶಿತ್ವ ಹೊಂದಿರುವ ಬಜೆಟ್' ಎಂದು ಮಾಜಿ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ಹಣಕಾಸನ್ನು ತರುವುದು ಕಷ್ಟ
'ಹೊಸ ಯೋಜನೆಗಳಿಗೆ ಹಣವನ್ನು ತರಲು ಬಾಹ್ಯ ಮೂಲಗಳನ್ನು ಅವಲಂಬಿಸಬೇಕಾಗುತ್ತದೆ. ಯೋಜನೆಗಳನ್ನು ಜಾರಿ ಮಾಡುವುದು ಕಷ್ಟ. ಆದಾಯ ಸಂಗ್ರಹಣೆಗೆ ಬಜೆಟ್‌ನಲ್ಲಿ ಒತ್ತು ನೀಡಬೇಕಾಗಿತ್ತು' ಎಂದು ಮಾಜಿ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಬಜೆಟ್ ಜನರಿಗೆ ಮೋಸ ಮಾಡಿದೆ
'ದೇಶಾದ್ಯಂತ ಬಜೆಟ್ ಹಳಿ ತಪ್ಪಿದೆ. ಪ್ರಯಾಣಿಕರ ಭದ್ರತೆಗಾಗಿ ಕ್ರಮಗಳನ್ನು ಕೈಗೊಂಡಿಲ್ಲ. ಬಜೆಟ್ ಜನರಿಗೆ ಮೋಸ ಮಾಡಿದೆ' ಎಂದು ಮಾಜಿ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. 'ಇಲಾಖೆಗೆ ಹಣಕಾಸಿನ ನೆರವನ್ನು ನೀಡುವಂತೆ ಸರ್ಕಾರವನ್ನು ನಾನೆಂದೂ ಕೇಳಿರಲಿಲ್ಲ' ಎಂದು ಅವರು ಹೇಳಿದ್ದಾರೆ.

ಬಜೆಟ್‌ನಲ್ಲಿ ಹೊಸದೇನು ಇಲ್ಲ
'ಈ ಬಾರಿಯ ರೈಲ್ವೆ ಬಜೆಟ್‌ನಲ್ಲಿ ಹೊಸದೇನು ಇಲ್ಲ' ಎಂದು ಮಾಜಿ ರೈಲ್ವೆ ಸಚಿವ ಪವನ್ ಕುಮಾರ್ ಬನ್ಸಾಲ್ ಹೇಳಿದ್ದಾರೆ. 'ಎರಡು ಲೋಕೋಮೇಟಿವ್ ಇಂಜಿನ್ ಫ್ಯಾಕ್ಟರಿಗಳನ್ನು ಸ್ಥಾಪನೆ ಮಾಡುವ ಕುರಿತು ನಾನು ಸಚಿವನಾಗಿದ್ದಾಗಲೇ ತೀರ್ಮಾನ ಕೈಗೊಳ್ಳಲಾಗಿತ್ತು' ಇದರಲ್ಲಿ ಹೊಸತಿಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications