ರೈಲ್ವೆ ಪ್ರಯಾಣ ದರ ಏರಿಕೆ ಜೇಟ್ಲಿ ಸಮರ್ಥನೆ
ನವದೆಹಲಿ, ಜೂ.22: ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈಲ್ವೆ ಪ್ರಯಾಣ ದರ ಏರಿಕೆ ಮಾಡುತ್ತಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿದ್ದು, ವಿಪಕ್ಷಗಳು ತೀವ್ರವಾಗಿ ಖಂಡಿಸಿವೆ. ಆದರೆ, ರೈಲ್ವೆ ಸಚಿವ ಸದಾನಂದ ಗೌಡರು ಕೈಗೊಂಡಿರುವ ನಿರ್ಣಯವನ್ನು ರಕ್ಷಣಾ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸಮರ್ಥಿಸಿಕೊಂಡಿದ್ದಾರೆ.ಬೆಲೆ ಏರಿಕೆ ಸತ್ಯಾಸತ್ಯತೆ ಬಗ್ಗೆ ತಮ್ಮ ಫೇಸ್ ಬುಕ್ ಪುಟದಲ್ಲಿ ಜೇಟ್ಲಿ ಬರೆದುಕೊಂಡಿದ್ದಾರೆ.
ಟಿಕೆಟ್ ದರ ಏರಿಕೆ ಮಾಡುವ ಮೂಲಕ ರೇಲ್ವೆ ಸಚಿವರು 'ಕಠಿಣ ಆದರೂ ಸೂಕ್ತ' ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ವಿಶ್ವದರ್ಜೆ ರೈಲು ವ್ಯವಸ್ಥೆ ಕಲ್ಪಿಸಲು ಬೆಲೆ ಏರಿಕೆ ಅನಿವಾರ್ಯ. ಕಳೆದ ಕೆಲ ವರ್ಷಗಳಿಂದ ರೇಲ್ವೆಯು ಭಾರಿ ನಷ್ಟದಲ್ಲಿದೆ. ತಾವು ಪಡೆವ ಸವಲತ್ತುಗಳಿಗೆ ಜನರೇ ಹಣ ನೀಡಿದರೆ ಮಾತ್ರವೇ ರೇಲ್ವೆ ಉಳಿಯಲು ಸಾಧ್ಯ ಎಂದು ಜೇಟ್ಲಿ ಹೇಳಿದ್ದಾರೆ.
ಜೂ.25ರಿಂದ ಜಾರಿಗೆ ಬರುವಂತೆ ರೈಲ್ವೆ ಪ್ರಯಾಣ ದರವನ್ನು 14.2% ಹಾಗೂ ಸರಕು ಸಾಗಣೆ ದರವನ್ನು 6.5% ಏರಿಸಲಾಗಿದ್ದು, ಇದರಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೈಲ್ವೆ ಇಲಾಖೆಗೆ 8,000 ಕೋಟಿ ರು ಹೆಚ್ಚುವರಿ ಆದಾಯ ಸಿಗಲಿದೆ.[ರೈಲ್ವೆ ಪ್ರಯಾಣ ದರ ಏರಿಕೆಗೆ ಅಸ್ತು]
ಸರ್ಕಾರದ ಮುಂದೆ ಎರಡೇ ಎರಡು ಆಯ್ಕೆಗಳಿತ್ತು.. ಒಂದೋ ಟಿಕೆಟ್ ದರ ಹೆಚ್ಚಳ ಮಾಡಿ ಉತ್ತಮ ಸೌಲಭ್ಯ ಕಲ್ಪಿಸುವುದು ಅಥವಾ ಸಾಲದ ಸುಳಿಯಲ್ಲಿ ಮುಳುಗಿ ರೇಲ್ವೆಯನ್ನು ರೋಗಗ್ರಸ್ತ ಎಂದು ಘೋಷಿಸುವುದು. ಹಾಗಾಗಿ ಸದಾನಂದ ಗೌಡರು ಟಿಕೆಟ್ ದರ ಹೆಚ್ಚಳ ಮಾಡಿ ರೇಲ್ವೆಯನ್ನು ಮೇಲೆತ್ತಲು ಯತ್ನಿಸಿದ್ದಾರೆ ಎಂದೂ ಜೇಟ್ಲಿ ಹೇಳಿದ್ದಾರೆ.[ದರ ಏರಿಕೆಗೆ ಸಾರ್ವತ್ರಿಕ ಖಂಡನೆ]

ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಫೆ.5, 2014ರಂದು ರೈಲ್ವೆ ಬೋರ್ಡ್ 10% ಪ್ರಯಾಣ ದರ ಹಾಗೂ 5% ಸರಕು ಸಾಗಣೆ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಅಂದಿನ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಆವರನ್ನು ಭೇಟಿ ಮಾಡಿ ಮೇ 1, 2014 ರಿಂದ ಪ್ರಯಾಣ ದರ ಏರಿಕೆ ಮಾಡಲು ನಿರ್ಣಯ ಕೈಗೊಂಡರು. ಈ ಬಗ್ಗೆ ರೈಲ್ವೆ ಬೋರ್ಡ್ ಮೇ 16, 2014ರಂದು ಪ್ರಕಟಣೆ ಹೊರಡಿಸಿತ್ತು.
ಆದರೆ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿರ್ಣಯ ಜಾರಿಗೊಂಡಿರಲಿಲ್ಲ. ಹಿಂದಿನ ಸರ್ಕಾರದ ನಿರ್ಣಯವನ್ನು ಮಾರ್ಪಾಟು ಮಾಡಿ ರೈಲ್ವೆ ಇಲಾಖೆ ಅಭಿವೃದ್ಧಿಗಾಗಿ ಈಗಿನ ರೈಲ್ವೆ ಸಚಿವ ಡಿವಿ ಸದಾನಂದ ಗೌಡ ಸಮರ್ಥವಾದ ನಿರ್ಣಯ ಕೈಗೊಂಡಿದ್ದಾರೆ ಎಂದು ಜೇಟ್ಲಿ ಹೇಳಿದ್ದಾರೆ. [ಪೂರ್ಣ ಪಾಠಕ್ಕಾಗಿ ಫೇಸ್ ಬುಕ್ ಪುಟ ನೋಡಿ]












Click it and Unblock the Notifications