ಇಡೀ ಭಾರತವೇ ನನ್ನ ಮನೆ: ದೆಹಲಿಯ ಸರ್ಕಾರಿ ಬಂಗಲೆ ಮರಳಿ ಪಡೆದ ಬಳಿಕ ರಾಹುಲ್ ಗಾಂಧಿ ಫಸ್ಟ್ ರಿಯಾಕ್ಷನ್
ನವದೆಹಲಿ, ಆಗಸ್ಟ್ 08: 'ಮೋದಿ ಉಪನಾಮೆ' ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ವಿಧಿಸಲಾಗಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರ ಸಂಸದ ಸ್ಥಾನವನ್ನು ಮರುಸ್ಥಾಪಿಸಲಾಗಿದೆ. ಇದಾದ ಒಂದು ದಿನದ ಬಳಿಕ ದೆಹಲಿಯ ಸರ್ಕಾರಿ ಬಂಗಲೆಯನ್ನು ರಾಹುಲ್ ಗಾಂಧಿ ಅವರು ಮರಳಿ ಪಡೆದಿದ್ದಾರೆ.
ಈ ಕುರಿತಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, 'ಇಡೀ ಭಾರತವೇ ನನ್ನ ಮನೆ' ಎಂದು ಹೇಳಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯ ತುಘಲಕ್ ಲೇನ್‌ನಲ್ಲಿರುವ ಹಳೆಯ ಬಂಗಲೆಯನ್ನು ಲೋಕಸಭೆಯ ಸದನ ಸಮಿತಿಯು ರಾಹುಲ್ ಗಾಂಧಿ ಅವರಿಗೆ ಮಂಜೂರು ಮಾಡದೆ.
ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿ ಅವರಿಗೆ ಎರಡು ವರ್ಷದ ಶಿಕ್ಷೆಯನ್ನು ಘೋಷಿಸಿತ್ತು. ಆ ಬಳಿಕ ಮಾರ್ಚ್‌ನಲ್ಲಿ ಸಂಸದರಾಗಿ ಅನರ್ಹಗೊಂಡರು. ಪ್ರೋಟೋಕಾಲ್‌ಗೆ ಅನುಗುಣವಾಗಿ ರಾಹುಲ್ ಗಾಂಧಿ ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡಿದ್ದರು.
ಅನರ್ಹಗೊಂಡ ಸಂಸದರು ಸರ್ಕಾರಿ ವಸತಿಗೆ ಅರ್ಹರಲ್ಲ. ಅವರಿಗೆ ಅಧಿಕೃತ ನಿವಾಸವನ್ನು ಖಾಲಿ ಮಾಡಲು ಒಂದು ತಿಂಗಳ ಸಮಯವನ್ನು ನೀಡಲಾಗುತ್ತದೆ.

2005ರಿಂದ ಅವರು ತಂಗಿದ್ದ ಅಧಿಕೃತ ಬಂಗಲೆಯನ್ನು ಖಾಲಿ ಮಾಡುವಂತೆ ಲೋಕಸಭೆಯ ವಸತಿ ಸಮಿತಿ ಕೇಳಿಕೊಂಡಿತ್ತು.
ಏಪ್ರಿಲ್‌ನಲ್ಲಿ, ರಾಹುಲ್ ಗಾಂಧಿ ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡಿದರು.
ತಮ್ಮ ಅಧಿಕೃತ ನಿವಾಸದಿಂದ ಹೊರಬಂದ ರಾಹುಲ್ ಗಾಂಧಿ, 'ಸತ್ಯವನ್ನು ಮಾತನಾಡಿದ್ದಕ್ಕಾಗಿ ಶಿಕ್ಷಿಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು.
ಭಾರತದ ಜನರು ತಮಗೆ ನೀಡಿದ ಬಂಗಲೆಯನ್ನು ಕಿತ್ತುಕೊಂಡಿದ್ದರಿಂದ ನಾನು ಇನ್ನು ಮುಂದೆ ಆ ಮನೆಯಲ್ಲಿ ವಾಸಿಸಲು ಬಯಸುವುದಿಲ್ಲ ಎಂದು ನೋವು ಹಂಚಿಕೊಂಡಿದ್ದರು.

ರಾಹುಲ್ ಗಾಂಧಿ ಅವರ ದೋಷಾರೋಪಣೆಗೆ ಶುಕ್ರವಾರ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಅವರ ಹೇಳಿಕೆಗಳು ಉತ್ತಮ ಅಭಿರುಚಿಯಿಲ್ಲದಿದ್ದರೂ, ಸಂಸತ್ತಿನಿಂದ ಅವರನ್ನು ಅನರ್ಹಗೊಳಿಸುವುದು ಅವರ ಮತದಾರರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ.
ನ್ಯಾಯಾಲಯದ ಆದೇಶದ ನಂತರ, ವಯನಾಡ್ ಸಂಸದರು ಲೋಕಸಭೆಗೆ ಮರಳಿದ್ದಾರೆ. ಇದೇ ಸಂದರ್ಭದಲ್ಲಿ ಮಣಿಪುರ ಗಲಭೆಗಳ ಬಗ್ಗೆ ಹೇಳಿಕೆ ನೀಡಬೇಕೆಂದು ಪ್ರತಿಪಕ್ಷಗಳು ಪ್ರಧಾನಿ ಮೋದಿ ಅವರಿಗೆ ಒತ್ತಾಯಿಸುತ್ತಿವೆ. ಈ ಹಿನ್ನೆಲೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿವೆ. ಪ್ರಸ್ತುತ ಅವಿಶ್ವಾಸ ನಿರ್ಣಯದ ಕುರಿತು ಚರ್ಚೆ ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದೆ.
2019 ರ ಲೋಕಸಭೆ ಚುನಾವಣೆಗೂ ಮುನ್ನ ಕರ್ನಾಟಕದ ಕೋಲಾರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ, ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು. ಎಲ್ಲಾ ಕಳ್ಳರಿಗೆ 'ಮೋದಿ' ಎಂದ ಸಾಮಾನ್ಯ ಉಪನಾಮವಾಗಿ ಹೇಗೆ ಬರುತ್ತದೆ? ಎಂದು ಹೇಳಿದ್ದರು. ಇದೇ ವೇಳೆ, ಲಲಿತ್ ಮೋದಿ, ನೀರವ್ ಮೋದಿ ಅವರನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು.












Click it and Unblock the Notifications