ಹೂಡಾ ವಿವಾದದ ಹೇಳಿಕೆ : ಮೋದಿ ಮೇಲೆ ಮತ್ತೆ ರಾಹುಲ್ ವಾಗ್ದಾಳಿ
ನವದೆಹಲಿ, ಡಿಸೆಂಬರ್ 08 : ಸರ್ಜಿಕಲ್ ಸ್ಟ್ರೈಕ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ವೈಯಕ್ತಿಕ ಆಸ್ತಿಯಂತೆ ಮಾಡಿಕೊಂಡಿದ್ದಾರೆ ಎಂದು ಟೀಕಿಸುತ್ತಲೇ ಇರುವ ರಾಹುಲ್ ಗಾಂಧಿ ಅವರಿಗೆ, ಪ್ರಧಾನಿ ಮೇಲೆಯೇ 'ಸರ್ಜಿಕಲ್ ಸ್ಟ್ರೈಕ್' ನಡೆಸಲು ಕಾರಣವೊಂದು ಸಿಕ್ಕಂತಾಗಿದೆ.
"ಜೆನರಲ್ (ಡಿಎಸ್ ಹೂಡಾ) ಅವರು ನಿಜವಾದ ಸೈನಿಕನಂತೆ ಮಾತನಾಡಿದ್ದಾರೆ. ಭಾರತ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತದೆ. ಮಿಸ್ಟರ್ 36 (56 ಅಂತ ಓದಿಕೊಳ್ಳಿ) ಅವರಿಗೆ ಮಿಲಿಟರಿಯನ್ನು ತಮ್ಮ ವೈಯಕ್ತಿಕ ಆಸ್ತಿಯಂತೆ ಅಂದುಕೊಳ್ಳಲು ಸ್ವಲ್ಪವೂ ನಾಚಿಕೆಯಿಲ್ಲ. ಅವರು ಸರ್ಜಿಕಲ್ ಸ್ಟ್ರೈಕ್ ಅನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡರು ಮತ್ತು ಅನಿಲ್ ಅಂಬಾನಿ ಅವರ ಆಸ್ತಿಯನ್ನು 30 ಸಾವಿರ ಕೋಟಿಯಷ್ಟು ಹೆಚ್ಚಿಸಲು ರಫೇಲ್ ಡೀಲ್ ಅನ್ನು ಬಳಸಿಕೊಂಡರು" ಎಂದು ರಾಹುಲ್ ಗಾಂಧಿ ವಾಗ್ದಾಳಿ ಮಾಡಿದ್ದಾರೆ.
Spoken like a true soldier General. India is so proud of you. Mr 36 has absolutely no shame in using our military as a personal asset. He used the surgical strikes for political capital and the Rafale deal to increase Anil Ambani’s real capital by 30,000 Cr. #SurgicalStrike https://t.co/IotXWBsIih
— Rahul Gandhi (@RahulGandhi) 8 December 2018
ಎರಡು ವರ್ಷಗಳ ಹಿಂದೆ 2016ರ ಸೆಪ್ಟೆಂಬರ್ 29ರಂದು ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಭಾರತದ ಸೇನೆ ಪಾಕಿಸ್ತಾನದ ಉಗ್ರರನ್ನು ಸದೆಬಡಿದಿತ್ತು. ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಭಾರತದ 19 ಸೈನಿಕರನ್ನು ಕೊಂದು ಹಾಕಿದ್ದಕ್ಕೆ ಪ್ರತಿಯಾಗಿ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿ ಸೇಡು ತೀರಿಸಿಕೊಂಡಿತ್ತು. ಭಾರತದ ಸೇನಾ ಸಾಹಸಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು.

ಆದರೆ, ಈ ಸರ್ಜಿಕಲ್ ಸ್ಟ್ರೈಕ್ ನ ಲೈವ್ ವಿಡಿಯೋ ಫೀಡ್ ಉಸ್ತುವಾರಿ ವಹಿಸಿಕೊಂಡಿದ್ದ ಲೆಫ್ಟಿನೆಂಟ್ ಜೆನರಲ್ (ನಿವೃತ್ತ) ಡಿಎಸ್ ಹೂಡಾ ಅವರು, ಸರ್ಜಿಕಲ್ ಸ್ಟ್ರೈಕ್ ಮುಖ್ಯವಾಗಿತ್ತು ಮತ್ತು ಮಾಡಲೇಬೇಕಿತ್ತು. ಆದರೆ ಇದಕ್ಕೆ ಅನಗತ್ಯವಾಗಿ ಹೆಚ್ಚಿನ ಪ್ರಚಾರ ನೀಡಲಾಗುತ್ತಿದೆ, ಅದನ್ನು ರಾಜಕೀಯವಾಗಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಅವರು ಮಾತುತ್ತಿರುವುದು ಸರಿಯೋ ತಪ್ಪೋ ಎಂಬುದರ ವಿವರಣೆಗಾಗಿ ರಾಜಕಾರಣಿಗಳನ್ನೇ ಕೇಳಬೇಕು ಎಂದು ಹೇಳಿಕೆ ನೀಡಿರುವುದರಿಂದ ವಿವಾದ ಸೃಷ್ಟಿಯಾಗಿದೆ.
ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಲವಾರು ಬಾರಿ ಸಾರ್ವಜನಿಕ ಭಾಷಣಗಳಲ್ಲಿ ಪ್ರಸ್ತಾಪಿಸಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ರಾಷ್ಟ್ರದ ದೊಡ್ಡ ಸಾಧನೆ, ಇದಕ್ಕೆ ದೇಶ ಹೆಮ್ಮೆಯಿಂದ ಬೀಗಬೇಕು, ಅದನ್ನು ಮುಚ್ಚಿಕೊಂಡಿರಬಾರದು ಎಂದಿದ್ದರು. ಆದರೆ, ಇದಕ್ಕೆ ಕ್ಯಾತೆ ತೆಗೆದಿರುವ ಕಾಂಗ್ರೆಸ್ ನಾಯಕರು, ಮೇಲಿಂದ ಮೇಲೆ ಇದನ್ನು ಪ್ರಸ್ತಾಪಿಸುವುದರಿಂದ ಮಿಲಿಟರಿ ಮಾಡಿದ ಸಾಧನೆಗೆ ರಾಜಕೀಯ ಲಾಭ ಪಡೆದಂತಾಗುತ್ತದೆ ಎಂದು ಟೀಕಿಸುತ್ತಿದ್ದಾರೆ.
ಲೆಫ್ಟಿನೆಂಟ್ ಜೆನರಲ್ ಹೂಡಾ ಅವರ ವಿವಾದದ ಕಿಡಿಗೆ ಪ್ರತಿಕ್ರಿಯೆ ನೀಡಿರುವ ಸೇನಾ ಮುಖ್ಯಸ್ಥ ಜೆನರಲ್ ಬಿಪಿನ್ ರಾವತ್ ಅವರು, ಈ ಹೇಳಿಕೆ ಅವರ ವೈಯಕ್ತಿಕವಾದದ್ದು, ಇದಕ್ಕೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಈ ಕಾರ್ಯಾಚರಣೆ ನಡೆಸಿದಾಗ ಭಾಗಿಯಾದ ಅಧಿಕಾರಿಗಳಲ್ಲಿ ಹೂಡಾ ಕೂಡ ಒಬ್ಬರು. ಆದ್ದರಿಂದ ಅವರ ಮಾತನ್ನು ನಾನು ಗೌರವಿಸುತ್ತೇನೆ ಎಂದು ರಾವತ್ ಹೇಳಿದ್ದಾರೆ.












Click it and Unblock the Notifications