ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ: ರಾಹುಲ್ ಗಾಂಧಿ ಬೆನ್ನಿಗೆ ನಿಂತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಮೋದಿಜಿ ಐದಾರು ದೇಶಗಳಿಗೆ ಹೋಗಿ ಅಲ್ಲಿ ಮಾತನಾಡುವಾಗ ಭಾರತದಲ್ಲಿ ಹುಟ್ಟಿದ್ದು ಪಾಪ ಎಂದು ನಮ್ಮ ದೇಶವನ್ನು ಅವಮಾನಿಸಿದ್ದಾರೆ
ನವದೆಹಲಿ, ಮಾರ್ಚ್ 15: ಬ್ರಿಟನ್‌ನಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿಯವರ ಹೇಳಿಕೆಗೆ "ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ" ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಕ್ಷಮೆಗೆ ಪಟ್ಟು ಹಿಡಿದಿರುವ ಬಿಜೆಪಿಯ ಬೇಡಿಕೆಯನ್ನು ತಳ್ಳಿಹಾಕಿ ರಾಹುಲ್ ಗಾಂಧಿಗೆ ಬೆಂಬಲ ನೀಡಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಕ್ಷಮೆ ಕೇಳಬೇಕು ಎಂದು ಒತ್ತಾಯಿಸುತ್ತಿರುವವು ನಾನು ಕೇಳುವ ಪ್ರಶ್ನೆಗೆ ಉತ್ತರಿಸಲಿ. ಮೋದಿಜಿ ಐದಾರು ದೇಶಗಳಿಗೆ ಹೋಗಿ ಅಲ್ಲಿ ಮಾತನಾಡುವಾಗ ಭಾರತದಲ್ಲಿ ಹುಟ್ಟಿದ್ದು ಪಾಪ ಎಂದು ನಮ್ಮ ದೇಶವನ್ನು ಅವಮಾನಿಸಿದ್ದಾರೆ. ಈಗ ಇವರೇ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುತ್ತಿದ್ದಾರೆ. ಬಿಜೆಪಿಯವರು ಇನ್ನೋಬ್ಬರು ಕ್ಷಮೆಯಾಚಿಸಬೇಕು ಎಂದು ಹೇಳುವುದರಲ್ಲಿ ಅರ್ಥವಿಲ್ಲ" ಎಂದಿದ್ದಾರೆ.

"ಈ ದೇಶದಲ್ಲಿ ಟಿವಿ ಚಾನೆಲ್‌ಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಸತ್ಯವನ್ನು ಮಾತನಾಡುವವರನ್ನು ಜೈಲಿಗೆ ಹಾಕಲಾಗುತ್ತಿದೆ ಆದ್ದರಿಂದ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಕೊನೆಗೊಳಿಸಲು ಮಾಡುತ್ತಿರುವ ಪ್ರಕ್ರಿಯೆ ಅಲ್ಲದೇ ಇನ್ನೇನು..? ಆದ್ದರಿಂದ ರಾಹುಲ್ ಗಾಂಧಿ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ. ಅವರು ಪ್ರಜಾಪ್ರಭುತ್ವದ ಬಗ್ಗೆ ಮಾತ್ರ ಮಾತನಾಡಿದ್ದಾರೆ" ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
"ರಾಹುಲ್ ರಾಂಧಿ ಕೇವಲ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದ್ದಾರೆ. ಜನರು ಚರ್ಚೆಗೆ ಹೋದಲ್ಲೆಲ್ಲಾ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ ಆದ್ದರಿಂದ ಈ ವಿಷಯವು ಈಗ ಅಪ್ರಸ್ತುತವಾಗಿದೆ" ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೇ ಲಂಡನ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸ ನೀಡಿದ ರಾಹುಲ್ ಗಾಂಧಿ, ಭಾರತದ ಪ್ರಜಾಪ್ರಭುತ್ವ ಒತ್ತಡದಲ್ಲಿದೆ ಮತ್ತು ವಿರೋಧದ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಪ್ರಸ್ತಾಪಿಸಿದ್ದರು.
ಈ ಹಿಂದೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಕ್ಷಮೆಯಾಚಿಸಬೇಕು ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದರು. ರಾಹುಲ್ ಗಾಂಧಿ ಅವರು ಸಂಸತ್ ಭವನಕ್ಕೆ ಬರಬೇಕು ಮತ್ತು ವಿದೇಶಿ ನೆಲದಲ್ಲಿ ಭಾರತೀಯ ಪ್ರಜಾಪ್ರಭುತ್ವವನ್ನು ಅವಮಾನಿಸಿದಕ್ಕಾಗಿ ಸ್ಪೀಕರ್ ಮತ್ತು ಸದನದ ಸದಸ್ಯರಲ್ಲಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಸಂಸದರು ಆಗ್ರಹಿಸುತ್ತಿದ್ದಾರೆ.

"ನಮ್ಮ ಪ್ರಜಾಪ್ರಭುತ್ವವು ಉತ್ತಮ ತತ್ವಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ಅವರು ವಿದೇಶಿ ನೆಲದಲ್ಲಿ ಭಾರತೀಯ ಸಂಸತ್ತನ್ನು ಅವಮಾನಿಸಿದ್ದಾರೆ. ರಾಹುಲ್ ಗಾಂಧಿ ನಮ್ಮ ಸಂಸತ್ತಿನ ಬಗ್ಗೆ ಮಾಡಿದ ಹೇಳಿಕೆಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅವರು ಸದನಕ್ಕೆ ಬಂದು ಸ್ಪೀಕರ್ ಮತ್ತು ಸಂಸದರಲ್ಲಿ ಕ್ಷಮೆಯಾಚಿಸಬೇಕು ಎಂದು ನಾನು ಮತ್ತೊಮ್ಮೆ ಒತ್ತಾಯಿಸುತ್ತೇನೆ" ಎಂದು ಪಿಯೂಷ್ ಗೋಯಲ್ ಹೇಳಿದ್ದಾರೆ.
ರಾಹುಲ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಸಚಿವ ಪ್ರಲ್ಹಾದ್ ಜೋಶಿ, 'ಭಾರತದ ಪ್ರಜಾಪ್ರಭುತ್ವ ಸೇರಿದಂತೆ ದೇಶದ ಆಂತರಿಕ ವಿಚಾರಗಳ ಬಗ್ಗೆ ವಿದೇಶ ಶಕ್ತಿಗಳ ಮುಂದೆ ರಾಹುಲ್ ಗಾಂಧಿ ಬಾಯಿಗೆ ಬಂದಂತೆ ಮಾತಾಡಿದ್ದಾರೆ. ಸದನದಲ್ಲಿ ವಿಪಕ್ಷಗಳ ಮೈಕ್ ಗಳು ಆಫ್ ಮಾಡಿ ಪ್ರತಿಪಕ್ಷಗಳ ಧ್ವನಿಯನ್ನ ದಮನ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಲೋಕಸಭೆಯ ಸ್ಪೀಕರ್ ವಿರುದ್ಧವೇ ರಾಹುಲ್ ಗಾಂಧಿ ವಿದೇಶಗಳ ನೆಲದಲ್ಲಿ ಮಾತಾಡಿದ್ದಾರೆ" ಎಂದು ಕಿಡಿಕಾರಿದ್ದಾರೆ.
"ಸದನದಲ್ಲಿ ಯಾವತ್ತು ವಿಪಕ್ಷಗಳ ಮೈಕ್ ಆಫ್ ಆಗಿಲ್ಲ. ಆಧಾರ ರಹಿತ ಆರೋಪವನ್ನ ವಿದೇಶಗಳಲ್ಲಿ ರಾಹುಲ್ ಗಾಂಧಿ ಮಾಡಿದ್ದು, ಸದನ ಗೌರವಕ್ಕೆ ಧಕ್ಕೆ ತಂದಿದ್ದಾರೆ. ರಾಹುಲ್ ಗಾಂಧಿ ಅವರು ಸದನಕ್ಕೆ ಬಂದು ಕ್ಷಮೆ ಕೇಳಬೇಕು" ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಹಲವು ಬಿಜೆಪಿ ಸಂಸದರು ರಾಹುಲ್ ಗಾಂಧಿ ಅವರ ಹೇಳಿಕೆಯನ್ನ ತೀವ್ರವಾಗಿ ಖಂಡಿಸಿದ್ದಾರೆ.












Click it and Unblock the Notifications