ರಫೇಲ್ ಒಪ್ಪಂದ: ಬಿಜೆಪಿ ಹಣಿಯಲು ಸಮಿತಿ ರಚಿಸಿದ ರಾಹುಲ್ ಗಾಂಧಿ
ನವದೆಹಲಿ, ಆಗಸ್ಟ್ 18: ರಫೇಲ್ ಒಪ್ಪಂದದ ವಿವಾದದಲ್ಲಿ ಬಿಜೆಪಿಯನ್ನು ಹಣಿಯಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಆರು ಸದಸ್ಯರ ಸಮಿತಿಯೊಂದನ್ನು ರಚಿಸಿದ್ದಾರೆ.
ಈ ಒಪ್ಪಂದದ ಕುರಿತು ದೇಶದಾದ್ಯಂತ ಪ್ರತಿಭಟನೆಗಳನ್ನು ನಡೆಸುವ ಮೂಲಕ ಕೆಳಮಟ್ಟದವರೆಗೂ ಈ ಬಗ್ಗೆ ಮಾಹಿತಿ ನೀಡಲು ರಾಹುಲ್ ಗಾಂಧಿ ಸುದ್ದಿಗೋಷ್ಠಿ ಆಯೋಜಿಸುವ ನಿರೀಕ್ಷೆಯಿದೆ.

ಈ ಸಮಿತಿಗೆ ಕಾಂಗ್ರೆಸ್‌ನ ಹಿರಿಯ ಮುಖಂಡ ಜೈಪಾಲ್ ರೆಡ್ಡಿ ಅಧ್ಯಕ್ಷರಾಗಿದ್ದಾರೆ.
ಈ ಸಮಿತಿಯಲ್ಲಿ ಪಕ್ಷದ ಹಿರಿಯ ಹಾಗೂ ಯುವ ಮುಖಂಡರು ಸೇರಿದ್ದಾರೆ. ರಣದೀಪ್ ಸುರ್ಜೀವಾಲ ಅವರ ಉಸ್ತುವಾರಿಯಲ್ಲಿ ಸದಸ್ಯರು ಕಾರ್ಯನಿರ್ವಹಿಸಲಿದ್ದಾರೆ.
ಶಕ್ತಿ ಸಿಂಗ್ ಗೋಹಿಲ್, ಅರ್ಜುನ್ ಮೊಡ್ವಾಡಿಯಾ, ಪವನ್ ಖೇರಾ, ಪ್ರಿಯಾಂಕಾ ಚತುರ್ವೇದಿ ಮತ್ತು ಜೈವೀರ್ ಶರ್ಗಿಲ್ ಸಮಿತಿಯ ಇತರೆ ಸದಸ್ಯರಾಗಿದ್ದಾರೆ.
ಶನಿವಾರ ನಡೆದ ಸಭೆಯಲ್ಲಿ ರಫೇಲ್ ಒಪ್ಪಂದ ವಿಚಾರದಲ್ಲಿ ಜಂಟಿ ಸಂಸದೀಯ ಸಮಿತಿ ರಚನೆಗೆ ಒತ್ತಾಯಿಸುವ ಮೂಲಕ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುವುದರ ಮಹತ್ವದ ಬಗ್ಗೆ ರಾಹುಲ್ ಗಾಂಧಿ ಒತ್ತಿ ಹೇಳಿದರು.
ರಫೇಲ್ ಹಗರಣದ ಕುರಿತು ಸುಮಾರು 50 ಕಾಂಗ್ರೆಸ್ ಮುಖಂಡರು ಕೆಲವೇ ದಿನಗಳಲ್ಲಿ 100ಕ್ಕೂ ಹೆಚ್ಚು ನಗರಗಳಲ್ಲಿ ಸುದ್ದಿಗೋಷ್ಠಿಗಳನ್ನು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications