ತೆಲಂಗಾಣದಲ್ಲಿ ಪುನರಾವರ್ತನೆಯಾಗುತ್ತಾ ಇಂದಿರಾ ಮ್ಯಾಜಿಕ್?
ಹೈದರಾಬಾದ್, ಜೂನ್ 2: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಂಗಾರೆಡ್ಡಿ ಜಿಲ್ಲೆಗೆ ಗುರುವಾರ ಭೇಟಿ ನೀಡಿದ್ದಾರೆ. ಅವರ ಭೇಟಿಯನ್ನು 1979ರ ಇಂದಿರಾಗಾಂಧಿ ಭೇಟಿಗೆ ಹೋಲಿಸಲಾಗುತ್ತಿದೆ.
1979ರ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ತೆಲಂಗಾಣ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧೀ ಭೇಟಿಯನ್ನೂ ಅದೇ ದೃಷ್ಠಿಯಲ್ಲಿ ನೋಡುತ್ತಿದ್ದಾರೆ.

1977ರಲ್ಲಿ ಜನತಾ ಪಕ್ಷದ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋದ ಸಂದರ್ಭದಲ್ಲಿ ಇಂದಿರಾ ಗಾಂಧೀ ಇದೇ ತೆಲಂಗಾಣದಲ್ಲಿ ರ್ಯಾಲಿಯೊಂದನ್ನು ಹಮ್ಮಿಕೊಂಡಿದ್ದರು. ಇದಾದ ಬಳಿಕ 1980ರಲ್ಲಿ ಇಂದಿರಾ ಗಾಂಧಿ ಮತ್ತೆ ಅಧಿಕಾರಕ್ಕೆ ಬಂದಿದ್ದರು. ಆ ಸಂದರ್ಭದಲ್ಲಿ ಅವರು ಇದೇ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಬರುವ ಮೇಡಕ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದು ಜಯಶಾಲಿಯಾಗಿದ್ದರು.
ರಾಹುಲ್ ಗಾಂಧಿಯ ರ್ಯಾಲಿಯಲ್ಲೂ ಜನ ಸಾಗರವೇ ಸೇರಿತ್ತು. ಅವತ್ತು ಇಂದಿರಾ ರ್ಯಾಲಿ ನೋಡಿದವರು ಅದೇ ರೀತಿ ರಾಹುಲ್ ಕೂಡಾ ಮ್ಯಾಜಿಕ್ ಮಾಡಲಿದ್ದಾರೆ ಎಂದು ನಂಬಿದ್ದಾರೆ.
ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರುವ ಕಾಂಗ್ರೆಸ್ ರಾಜಕಾರಣಿ ನರಸಯ್ಯ, "ತಾನು ಇಂದಿರಾ ಗಾಂಧಿ 1979ರಲ್ಲಿ ರ್ಯಾಲಿ ಮಾಡಿದಾಗ 25 ವರ್ಷದವನಾಗಿದ್ದೆ. ರ್ಯಾಲಿಯಲ್ಲಿ ಇಂದಿರಾ ಗಾಂಧಿ ಕೆಲಸ ಕೊಡಿಸುವ ಭರವಸೆ ನೀಡಿದ್ದರು. ಅದರಂತೆ ಮೇಡಕ್ ಕ್ಷೇತ್ರವನ್ನು ಗೆದ್ದುಕೊಂಡ ನಂತರ ಹಲವು ಕೈಗಾರಿಕೆಗಳನ್ನು ಜಿಲ್ಲೆಗೆ ಪರಿಚಯಿಸಿದ್ದರು. ಲಕ್ಷಗಟ್ಟಲೆ ಉದ್ಯೋಗಳು ಸೃಷ್ಟಿಯಾಗಿದ್ದವು," ಎಂದು ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಸದ್ಯ ಅದೇ ಮ್ಯಾಜಿಕನ್ನು ರಾಹುಲ್ ಗಾಂಧಿ ಮಾಡುತ್ತಾರಾ ಕಾದು ನೋಡಬೇಕು.












Click it and Unblock the Notifications