ಕಾವಲುಗಾರನೇ ಕಳ್ಳತನ ಮಾಡಿದ್ದಾನೆ: ಮೋದಿ ವಿರುದ್ಧ ರಾಹುಲ್ ವಾಗ್ದಾಳಿ
ಅಮೇಥಿ, ಸೆಪ್ಟೆಂಬರ್ 24: ತಮ್ಮ ಸ್ವಕ್ಷೇತ್ರ ಅಮೇಥಿಗೆ ಭೇಟಿ ನೀಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅಲ್ಲಿಯೂ ಸಹ ರಫೆಲ್ ಹಾಗೂ ಮೋದಿಯ ಬೆನ್ನು ಬಿಟ್ಟಿಲ್ಲ. ಅಮೇಥಿಯ ಅಂಗಳದಿಂದ ಮೋದಿ ಮೇಲೆ ಟೀಕೆಗಳ ಬಾಣ ಎಸೆದಿದ್ದಾರೆ.
ಅಮೇಥಿಯಲ್ಲಿ ಇಂದು ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದರು. ಕನ್ವರಿಯಾ (ಶಿವನ ಆರಾಧಕರು) ಬೃಹತ್ ಕಾರ್ಯಕ್ರಮಕ್ಕೂ ಭೇಟಿ ನೀಡಿ ಶಿವನ ಪೂಜೆಯನ್ನು ಮಾಡಿದ್ದಾರೆ.
ನಂತರ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು, 'ಮೋದಿ ಅವರು ತಮ್ಮನ್ನು ತಾವು 'ನಾನು ಪ್ರಧಾನಿ ಅಲ್ಲ ದೇಶದ ಕಾವಲುಗಾರ ಎಂದಿದ್ದರು, ಆದರೆ ಕಾವಲುಗಾರನೇ ಕಳ್ಳತನ ಮಾಡಿದ್ದಾನೆ' ಎಂದು ಮತ್ತೊಮ್ಮೆ ಮೋದಿ ಅವರನ್ನು ಕಳ್ಳ ಎಂದರು.

'ಮೋದಿ ಅವರು ಫ್ರಾನ್ಸ್‌ಗೆ ಹೋಗಿ, ಅನಿಲ್ ಅಂಬಾನಿ ಅವರಿಗೇ ರಫೇಲ್ ಒಪ್ಪಂದ ನೀಡಿ ಎಂದು ಒತ್ತಾಯ ಮಾಡಿದ್ದಾರೆ' ಎಂದು ರಾಹುಲ್ ಅವರು ಗುರುತರವಾದ ಆರೋಪ ಮಾಡಿದರು. ಎಚ್‌ಎಎಲ್‌ಗೆ ನೀಡಲಾಗಿದ್ದ ಒಪ್ಪಂದವನ್ನು ಆ ನಂತರ ಅನಿಲ್ ಅಂಬಾನಿ ಒಡೆತನದ ಸಂಸ್ಥೆಗೆ ನೀಡಲಾಯಿತು.
ರಫೇಲ್ ಡೀಲ್ ಬಗ್ಗೆ ತೀವ್ರವಾಗಿ ಕೇಂದ್ರ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿರುವ ರಾಹುಲ್ ಗಾಂಧಿ ಅವರು, 'ಮೋದಿ ಅವರು ಫ್ರಾನ್ಸ್‌ಗೆ ಹೋಗಿ ಮಾಡಿದ್ದಾದರೂ ಏನು ಎಂದು ಹೇಳಬೇಕು', ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಹೊಲ್ಯಾಂಡ್ ಮೋದಿ ಅವರನ್ನು ಕಳ್ಳ ಎಂದು ಕರೆದಿದ್ದಾರೆ ಹಾಗಾಗಿ ಈಗ ಮೋದಿ ಇದಕ್ಕೆ ಸ್ಪಷ್ಟನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ರಫೇಲ್ ಅವ್ಯವಹಾರದ ತನಿಕೆಗೆ ಒಂದು ಜಂಟಿ ಸಂಸದೀಯ ಸಮಿತಿ ಮಾಡಿದಲ್ಲಿ, ಎಲ್ಲ ಸತ್ಯಗಳು ಹೊರಗೆ ಬರುತ್ತವೆ ಎಂದ ಅವರು, ಮೋದಿ ಅವರು ದೊಡ್ಡ-ದೊಡ್ಡ ಭಾಷಣ ಮಾಡುತ್ತಾರೆ ಆದರೆ ರಫೇಲ್ ಬಗ್ಗೆ ಒಂದೂ ಮಾತಾಡುವುದಿಲ್ಲ. ಅಲ್ಲದೆ ಅವರೇ ನೇತೃತ್ವ ವಹಿಸಿ ಅನಿಲ್ ಅಂಬಾನಿ ಕೈಲಿ ಕಳ್ಳತನ ಮಾಡಿಸಿದ್ದಾರೆ ಎಂದು ಅವರು ದೂರಿದರು.
ಮೋದಿ ಅವರು ಎಚ್‌ಎಎಲ್‌ನಿಂದ ರಫೇಲ್ ಒಪ್ಪಂದವನ್ನು ಕಿತ್ತುಕೊಂಡು ಅನಿಲ್ ಅಂಬಾನಿ ಅವರಿಗೆ ನೀಡಿದರು. ಅನಿಲ್ ಅಂಬಾನಿ ತಮ್ಮ ಜೀವಮಾನದಲ್ಲೇ ಈವರೆಗೆ ಒಂದೂ ವಿಮಾನ ತಯಾರಿಸಿಲ್ಲ. ಸೈನಿಕರು ದೇಶಕ್ಕಾಗಿ ಪ್ರಾಣತ್ಯಾಗ ಮಾಡುತ್ತಾರೆ ಆದರೆ ಮೋದಿ ಅವರು ಸೈನಿಕರ, ಜನರ ಜೇಬಿನಿಂದ ದುಡ್ಡು ಗೆತೆದುಕೊಂಡು ಅನಿಲ್ ಅಂಬಾನಿ ಜೇಬಿಗೆ ಹಾಕಿದ್ದಾರೆ ಎಂದು ಅವರು ಟೀಕಾ ಪ್ರಹಾರ ನಡೆಸಿದರು.












Click it and Unblock the Notifications