ಮಕ್ಕಳಿಗೆ ಬಟ್ಟೆ ತರಲು ಹೋದವಳಿಗೆ ಒಲಿಯಿತು ಅದೃಷ್ಟ: ಕೇವಲ 7 ರೂ. ಟಿಕೆಟ್‌ನಿಂದ ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಮಹಿಳೆ

ಅದೃಷ್ಟ ಅನ್ನೋದು ಯಾವಾಗ, ಯಾವ ರೂಪದಲ್ಲಿ ಬಂದು ಬಾಗಿಲು ತಟ್ಟುತ್ತದೆ ಎಂದು ಯಾರಿಗೂ ಊಹಿಸಲು ಸಾಧ್ಯವಿಲ್ಲ. ಪಂಜಾಬ್‌ನ ಕೋಟ್ಕಾಪುರ ನಿವಾಸಿ ಬಿಮಲಾ ದೇವಿ ಅವರ ಜೀವನದಲ್ಲಿ ಆಗಿದ್ದೂ ಇದೇ. ತಮ್ಮ ಮಕ್ಕಳಿಗಾಗಿ ಹೊಸ ಬಟ್ಟೆ ಖರೀದಿಸಲು ಮಾರುಕಟ್ಟೆಗೆ ಹೋಗಿದ್ದ ಈ ಬಡ ಮಹಿಳೆಗೆ ಅದೃಷ್ಟಲಕ್ಷ್ಮಿ ಒಲಿದಿದ್ದಾಳೆ ನೋಡಿ.

ಹೌದು, ಕೇವಲ 7 ರೂಪಾಯಿ ನೀಡಿ ಅವರು ಖರೀದಿಸಿದ ಲಾಟರಿ ಟಿಕೆಟ್ ಅವರಿಗೆ ಬರೋಬ್ಬರಿ 1 ಕೋಟಿ ರೂಪಾಯಿಗಳ ಬಂಪರ್ ಬಹುಮಾನವನ್ನ ತಂದುಕೊಟ್ಟಿದೆ. ಆ ಮೂಲಕ ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಕುಟುಂಬವೊಂದು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿ ಬದಲಾಗಿದೆ.

Punjab Woman Wins Rs 1 Crore Lottery From A Rs 7 Ticket While buy clothes for her children

7 ರೂಪಾಯಿಯ ಲಾಟರಿ ಟಿಕೆಟ್ ತಂದ ಬಹುದೊಡ್ಡ ತಿರುವು

ಬಿಮಲಾ ದೇವಿ ಅವರ ಪತಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಕೂಲಿ ಕೆಲಸದಿಂದ ಬರುವ ಅಲ್ಪ ಆದಾಯದಲ್ಲೇ ಅವರು ತಮ್ಮ ಇಡೀ ಸಂಸಾರವನ್ನು ತೂಗಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇತ್ತು.

ಇತ್ತೀಚೆಗೆ ಬಿಮಲಾ ತಮ್ಮ ಮಕ್ಕಳಿಗಾಗಿ ಬಟ್ಟೆ ಖರೀದಿಸಲು ಮನೆಯಿಂದ ಹೊರಬಂದಿದ್ದರು. ರೈಲ್ವೆ ರಸ್ತೆಯಲ್ಲಿರುವ ರೈಲ್ವೆ ನಿಲ್ದಾಣದ ಬಳಿಯ ಸ್ಟಾರ್ ಲಾಟರಿ ಸ್ಟಾಲ್ ಎಂಬಲ್ಲಿ ಯಾವುದೇ ನಿರೀಕ್ಷೆಗಳಿಲ್ಲದೆ, ಕೇವಲ 7 ರೂಪಾಯಿ ಕೊಟ್ಟು ಲಾಟರಿ ಟಿಕೆಟ್ ಒಂದನ್ನು ಖರೀದಿಸಿದ್ದರು. ತಾನು ಖರೀದಿಸಿದ ಈ ಅತ್ಯಂತ ಸಣ್ಣ ಬೆಲೆಯ ಟಿಕೆಟ್ ಮರುದಿನವೇ ತನ್ನ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ ಎಂಬ ಸಣ್ಣ ಕಲ್ಪನೆಯೂ ಅವರಿಗೆ ಇರಲಿಲ್ಲ.

ಸಿಕ್ಕಿಂ ಸರ್ಕಾರದ ಲಾಟರಿಯಲ್ಲಿ 1 ಕೋಟಿ ಬಂಪರ್!

ಮರುದಿನ ಸಿಕ್ಕಿಂ ಸರ್ಕಾರ ಆಯೋಜಿಸಿದ್ದ ಲಾಟರಿ ಫಲಿತಾಂಶ ಪ್ರಕಟವಾಗಿತ್ತು. ಇದರಲ್ಲಿ ಬಿಮಲಾ ದೇವಿ ಅವರು ಖರೀದಿಸಿದ್ದ ಟಿಕೆಟ್‌ಗೆ ಬರೋಬ್ಬರಿ 1 ಕೋಟಿ ರೂಪಾಯಿಗಳ ಬಂಪರ್ ಬಹುಮಾನ ಬಂದಿತ್ತು. ಲಾಟರಿ ಸ್ಟಾಲ್ ನಡೆಸುತ್ತಿರುವ ನರೇಶ್ ಮೊಂಗಾ ಅವರು ಫಲಿತಾಂಶ ಪ್ರಕಟವಾದ ತಕ್ಷಣ ಈ ಕುಟುಂಬಕ್ಕೆ ಕರೆ ಮಾಡಿ ಈ ಸಿಹಿ ಸುದ್ದಿಯನ್ನ ಮುಟ್ಟಿಸಿದ್ದಾರೆ.

ಈ ವಿಷಯ ಕೇಳುತ್ತಿದ್ದಂತೆ ಬಿಮಲಾ ದೇವಿ ಹಾಗೂ ಅವರ ಕುಟುಂಬದವರ ಖುಷಿಗೆ ಪಾರವೇ ಇರಲಿಲ್ಲ. ಆನಂದಭಾಷ್ಪದೊಂದಿಗೆ ಲಾಟರಿ ಅಂಗಡಿಗೆ ಓಡೋಡಿ ಬಂದ ಕುಟುಂಬಸ್ಥರಿಗೆ, ಅಂಗಡಿ ಮಾಲೀಕ ನರೇಶ್ ಮೊಂಗಾ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಖುಷಿಯ ಭರದಲ್ಲಿ ಕುಟುಂಬದ ಸದಸ್ಯರು ಪಂಜಾಬಿ ಶೈಲಿಯ ಭಾಂಗ್ರಾ ನೃತ್ಯ ಮಾಡಿ ಸಂಭ್ರಮಪಟ್ಟಿದ್ದಾರೆ.

ಸುತ್ತಮುತ್ತಲಿನ ಪರಿಚಯಸ್ಥರು ಹಾಗೂ ನೆರೆಹೊರೆಯವರು ಬಂದು ಕುಟುಂಬಕ್ಕೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.

ಮಕ್ಕಳ ಭವಿಷ್ಯಕ್ಕೆ ಸಿಕ್ಕ ಹೊಸ ಭರವಸೆ

ಈ ಅನಿರೀಕ್ಷಿತ ಗೆಲುವಿನ ಕುರಿತು ಮಾತನಾಡಿದ ಬಿಮಲಾ ದೇವಿ, "ಪತಿಯ ಕೂಲಿ ಹಣದಿಂದ ಕುಟುಂಬದ ಖರ್ಚುಗಳನ್ನ ನಿಭಾಯಿಸುವುದು ನಮಗೆ ಎಂದಿಗೂ ಸುಲಭವಾಗಿರಲಿಲ್ಲ. ದಿನನಿತ್ಯದ ಜೀವನ ನಡೆಸುವುದೇ ಒಂದು ದೊಡ್ಡ ಸವಾಲಾಗಿತ್ತು. ಆದರೆ ಈಗ ಒಲಿದು ಬಂದಿರುವ ಈ ಹಣ ನಮ್ಮ ಕುಟುಂಬದ ಆರ್ಥಿಕ ಸಂಕಷ್ಟಗಳಿಗೆ ಬಹುದೊಡ್ಡ ಪರಿಹಾರ ನೀಡಲಿದೆ. ನಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ಇದೊಂದು ಹೊಸ ಭರವಸೆಯನ್ನು ತಂದಿದೆ" ಎಂದು ಹೇಳಿದ್ದಾರೆ.

ಸ್ವಂತ ಉದ್ಯೋಗ ಆರಂಭಿಸುವ ಆಲೋಚನೆ

ಬಂದಿರುವ 1 ಕೋಟಿ ರೂಪಾಯಿ ಹಣವನ್ನ ನಿಖರವಾಗಿ ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ಕುಟುಂಬ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. "ಮನೆಯ ಇತರ ಸದಸ್ಯರೊಂದಿಗೆ ಹಾಗೂ ಹಿರಿಯರೊಂದಿಗೆ ಕೂತು ಚರ್ಚಿಸಿ ಮುಂದಿನ ಹೆಜ್ಜೆ ಇಡುತ್ತೇವೆ. ನಮ್ಮ ಆರ್ಥಿಕ ಪರಿಸ್ಥಿತಿಯನ್ನ ಶಾಶ್ವತವಾಗಿ ಸುಧಾರಿಸಿಕೊಳ್ಳಲು ಹಾಗೂ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಭವಿಷ್ಯವನ್ನು ಕಲ್ಪಿಸಲು ಒಂದು ಸಣ್ಣ ಸ್ವಂತ ಉದ್ಯೋಗ ಆರಂಭಿಸುವ ಆಲೋಚನೆ ಇದೆ" ಎಂದು ಬಿಮಲಾ ದೇವಿ ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ತಿಳಿಸಿದ್ದಾರೆ.

ಕಳೆದ ಆರು ತಿಂಗಳಿನಿಂದ ಲಾಟರಿ ವ್ಯಾಪಾರ ನಡೆಸುತ್ತಿರುವ ನರೇಶ್ ಮೊಂಗಾ ಮಾತನಾಡಿ, "ನನ್ನ ಅಂಗಡಿಯಲ್ಲಿ ಈ ಹಿಂದೆಯೂ ಲಕ್ಷಾಂತರ ರೂಪಾಯಿ ಮೌಲ್ಯದ ಬಹುಮಾನ ಗೆದ್ದ ಹಲವು ಟಿಕೆಟ್‌ಗಳು ಮಾರಾಟವಾಗಿವೆ. ಆದರೆ, ರೈಲ್ವೆ ನಿಲ್ದಾಣದ ಬಳಿಗೆ ಅಂಗಡಿ ಸ್ಥಳಾಂತರಿಸಿದ ನಂತರ ಇದೇ ಮೊದಲ ಬಾರಿಗೆ 1 ಕೋಟಿ ರೂಪಾಯಿಗಳ ಬೃಹತ್ ಮೊತ್ತದ ಬಹುಮಾನವೊಂದು ನನ್ನ ಅಂಗಡಿಯ ಟಿಕೆಟ್‌ಗೆ ಒಲಿದಿರುವುದು ಅತ್ಯಂತ ಖುಷಿಯ ವಿಚಾರ" ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+