ದುಬೈನಲ್ಲಿ ಅದೃಷ್ಟ ಖುಲಾಯಿಸಿದ ಭಾರತೀಯ ಟ್ರಕ್ ಚಾಲಕ: ಲಾಟರಿಯಲ್ಲಿ ಒಲಿದುಬಂತು ಬರೋಬ್ಬರಿ 1.3 ಕೋಟಿ ರೂ.!

ದುಬೈ : ಒಳ್ಳೆಯ ಭವಿಷ್ಯದ ಕನಸು ಹೊತ್ತು ಉದ್ಯೋಗ ಅರಸಿ ಗಲ್ಫ್ ರಾಷ್ಟ್ರಗಳಿಗೆ ಹೋಗುವ ಎಷ್ಟೋ ಭಾರತೀಯರ ಪೈಕಿ ಕೆಲವರ ಅದೃಷ್ಟ ರಾತ್ರೋರಾತ್ರಿ ಬದಲಾಗಿಬಿಡುತ್ತದೆ. ಅದೇ ರೀತಿ, ಕಳೆದ 18 ವರ್ಷಗಳಿಂದ ದುಬೈನಲ್ಲಿ ಟ್ರಕ್ ಚಾಲಕರಾಗಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ ಪಂಜಾಬ್ ಮೂಲದ 53 ವರ್ಷದ ಕುಲವಂತ್ ಸಿಂಗ್ ಅವರ ಜೀವನ ಈಗ ಸಂಪೂರ್ಣವಾಗಿ ಬದಲಾಗಿದೆ.

ಯುಎಇಯ ಪ್ರಸಿದ್ಧ ಅಬುಧಾಬಿ ಬಿಗ್ ಟಿಕೆಟ್ ಲಾಟರಿ ಡ್ರಾದಲ್ಲಿ ಅವರು ಬರೋಬ್ಬರಿ 5,00,000 ದಿರ್ಹಮ್ ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಅಂದಾಜು 1.3 ಕೋಟಿ ರೂ. ಬಹುಮಾನ ಗೆದ್ದು ಬೀಗಿದ್ದಾರೆ.

Punjab Truck Driver in Dubai Wins Rs 1 3 Crore Abu Dhabi Big Ticket Lottery Secures Family Future

ಅಬುಧಾಬಿ ಬಿಗ್ ಟಿಕೆಟ್‌ನಲ್ಲಿ ಒಲಿದ ಅದೃಷ್ಟ

ದುಬೈನ ಜಬೆಲ್ ಅಲಿ ಪ್ರದೇಶದಲ್ಲಿ ತಮ್ಮ ಕುಟುಂಬದೊಂದಿಗೆ ನೆಲೆಸಿರುವ ಕುಲವಂತ್ ಸಿಂಗ್, ಕೇವಲ ತಮ್ಮ ಅದೃಷ್ಟವನ್ನ ಮಾತ್ರ ನಂಬಿರಲಿಲ್ಲ, ಬದಲಾಗಿ ಸ್ನೇಹಿತರ ಸಾಥ್ ಕೂಡ ಪಡೆದಿದ್ದರು. ಕಳೆದ ಎರಡು ವರ್ಷಗಳಿಂದ ತಮ್ಮ ಐವರು ಸ್ನೇಹಿತರೊಂದಿಗೆ ಸೇರಿ ಅವರು ಪ್ರತಿ ತಿಂಗಳು ಲಾಟರಿ ಟಿಕೆಟ್ ಖರೀದಿಸುತ್ತಿದ್ದರು.

ಕೆಲವು ವರ್ಷಗಳ ಹಿಂದೆ ಆನ್‌ಲೈನ್ ವಿಡಿಯೋಗಳ ಮೂಲಕ ಈ ಲಾಟರಿ ಬಗ್ಗೆ ತಿಳಿದುಕೊಂಡಿದ್ದ ಅವರು, ಇತ್ತೀಚೆಗೆ ಖರೀದಿಸಿದ ಟಿಕೆಟ್‌ ತಮಗೆ ಇಷ್ಟು ದೊಡ್ಡ ಅದೃಷ್ಟ ತರುತ್ತದೆ ಎಂದು ಖಂಡಿತ ಊಹಿಸಿರಲಿಲ್ಲ.

"ನಾವು ಗೆದ್ದಿದ್ದೇವೆ ಎಂಬ ಸುದ್ದಿ ತಿಳಿದಾಗ ನನಗೆ ಮತ್ತು ನನ್ನ ಸ್ನೇಹಿತರಿಗೆ ತುಂಬ ಸಂತೋಷವಾಯಿತು. ನಾವೆಲ್ಲರೂ ಸೇರಿ ಪ್ರತಿ ತಿಂಗಳು ಟಿಕೆಟ್ ಖರೀದಿಸುತ್ತಿದ್ದೆವು. ಈಗ ಈ ಸಿಹಿ ಸುದ್ದಿ ಕೇಳಿ ರೋಮಾಂಚನವಾಗಿದೆ" ಎಂದು ಕುಲವಂತ್ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಗೆದ್ದಿರುವ 1.3 ಕೋಟಿ ರೂಪಾಯಿ ಹಣವನ್ನ ಗುಂಪಿನ ಎಲ್ಲಾ ಐದು ಸದಸ್ಯರಿಗೂ ಸಮಾನವಾಗಿ ಹಂಚಲಾಗುತ್ತದೆ. ತಮ್ಮ ಪಾಲಿಗೆ ಬರುವ ಹಣವನ್ನ ಕುಟುಂಬದ ಭವಿಷ್ಯಕ್ಕಾಗಿ ಹಾಗೂ ತಾಯ್ನಾಡಿನಲ್ಲಿ ಒಂದು ಸುಂದರ ಸ್ವಂತ ಮನೆ ನಿರ್ಮಾಣಕ್ಕಾಗಿ ಬಳಸುವುದಾಗಿ ಕುಲವಂತ್ ಹೇಳಿಕೊಂಡಿದ್ದಾರೆ.

ಮಗನ ಜನ್ಮದಿನದ ಸಂಖ್ಯೆ ತಂದುಕೊಟ್ಟ 26 ಲಕ್ಷ ರೂ.

ಈ ಬಾರಿಯ ಸಿರೀಸ್ 291 ಲಾಟರಿ ಡ್ರಾದಲ್ಲಿ ಕುಲವಂತ್ ಸಿಂಗ್ ಮಾತ್ರವಲ್ಲದೆ, ಇತರ ಭಾರತೀಯ ಪ್ರವಾಸಿಗರಿಗೂ ಅದೃಷ್ಟ ಒಲಿದಿದೆ. ಅಜ್ಮಾನ್‌ನಲ್ಲಿ ಕಳೆದ ಏಳು ವರ್ಷಗಳಿಂದ ನೆಲೆಸಿರುವ ಕೇರಳ ಮೂಲದ 30 ವರ್ಷದ ಇಂಜಿನಿಯರ್ ಮುಹಮ್ಮದ್ ಇಜಾಸ್ ಸಿ. ಕೂಡ 1,00,000 ದಿರ್ಹಮ್ ಅಂದರೆ ಅಂದಾಜು 26 ಲಕ್ಷ ರೂ. ಗೆದ್ದಿದ್ದಾರೆ.

ಆರು ತಿಂಗಳ ಹಿಂದೆಯಷ್ಟೇ ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್ ಮೂಲಕ ಬಿಗ್ ಟಿಕೆಟ್ ಬಗ್ಗೆ ತಿಳಿದುಕೊಂಡಿದ್ದ ಇವರು, ತಮ್ಮ 10 ಜನರ ಗುಂಪಿನೊಂದಿಗೆ ಸೇರಿ ಟಿಕೆಟ್ ಖರೀದಿಸಿದ್ದರು.

ವಿಶೇಷವೆಂದರೆ, ಮುಹಮ್ಮದ್ ಅವರು ತಮ್ಮ ಮಗನ ಹುಟ್ಟಿದ ದಿನಾಂಕ ಮತ್ತು ವರ್ಷವನ್ನ ಆಧರಿಸಿ ಟಿಕೆಟ್ ಸಂಖ್ಯೆಯನ್ನ ಆಯ್ಕೆ ಮಾಡಿದ್ದರು. "ನನ್ನ ಮಗನ ಹುಟ್ಟುಹಬ್ಬದ ಸಂಖ್ಯೆ ನನಗೆ ಈ ದೊಡ್ಡ ಬಹುಮಾನ ತಂದುಕೊಟ್ಟಿದ್ದು ನನ್ನ ಪಾಲಿಗೆ ಅತ್ಯಂತ ವಿಶೇಷ ಕ್ಷಣ. ಈ ಗೆಲುವು ನನಗೆ ಭಾವನಾತ್ಮಕವಾಗಿ ಬಹಳ ಹತ್ತಿರವಾಗಿದೆ" ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಹಣವನ್ನು ತಮ್ಮ ಮಗನ ಉಜ್ವಲ ಭವಿಷ್ಯಕ್ಕಾಗಿ ಮೀಸಲಿಡುವುದಾಗಿ ಅವರು ತಿಳಿಸಿದ್ದಾರೆ.

ಲಾಟರಿ ಗೆದ್ದ ಇತರ ಭಾರತೀಯರು

ಇದೇ ಲಾಟರಿ ಡ್ರಾದಲ್ಲಿ ಸೆಟ್ವನ್ ಕುಮಾರ್ ಚೌಹಾಣ್ ಎಂಬ ಮತ್ತೊಬ್ಬ ಭಾರತೀಯ ಕೂಡ 1,00,000 ದಿರ್ಹಮ್ ಅಂದರೆ 26 ಲಕ್ಷ ರೂಪಾಯಿ ಬಹುಮಾನ ಪಡೆದುಕೊಂಡಿದ್ದಾರೆ. ಇದರ ಜೊತೆಗೆ, ಒಮಾನ್‌ನಲ್ಲಿ ಕಳೆದ 10 ವರ್ಷಗಳಿಂದ ಡಾಕ್ಯುಮೆಂಟ್ ಕಂಟ್ರೋಲರ್ ಆಗಿ ಕೆಲಸ ಮಾಡುತ್ತಿರುವ ಕೇರಳದ 54 ವರ್ಷದ ಅಜಿತ್ ಕುಮಾರ್ ವನ್ನಾರತ್ ಅವರು ಬರೋಬ್ಬರಿ 2,50,000 ದಿರ್ಹಮ್ (ಅಂದಾಜು 65 ಲಕ್ಷ ರೂ.) ಬಹುಮಾನವನ್ನ ತಮ್ಮದಾಗಿಸಿಕೊಂಡಿದ್ದಾರೆ.

ಅಜಿತ್ ಅವರು ತಮ್ಮ 10 ಸ್ನೇಹಿತರ ಗುಂಪಿನೊಂದಿಗೆ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಲಾಟರಿಯಲ್ಲಿ ಅದೃಷ್ಟ ಪರೀಕ್ಷೆ ಮಾಡುತ್ತಿದ್ದರು. "ಗೆದ್ದ ಹಣವನ್ನು ಎಲ್ಲರಿಗೂ ಸಮಾನವಾಗಿ ಹಂಚಲಾಗುವುದು" ಎಂದು ಅವರು ತಿಳಿಸಿದ್ದಾರೆ.

ಗಲ್ಫ್ ನ್ಯೂಸ್ ವರದಿಯ ಪ್ರಕಾರ, ಸಿರೀಸ್ 291ರ ಡ್ರಾದಲ್ಲಿ ಒಟ್ಟು ಐವರು ಭಾರತೀಯರು ಸುಮಾರು 1.95 ಮಿಲಿಯನ್ ದಿರ್ಹಮ್ ಅಂದರೆ ಅಂದಾಜು 5 ಕೋಟಿ ರೂ. ಮೌಲ್ಯದ ಸಾಂತ್ವನ ಬಹುಮಾನಗಳನ್ನ ಗೆದ್ದಿದ್ದಾರೆ. ಒಟ್ಟಿನಲ್ಲಿ, ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಮಧ್ಯಮ ವರ್ಗದ ಭಾರತೀಯ ಕುಟುಂಬಗಳಿಗೆ ಈ ಲಾಟರಿಗಳು ಹೊಸ ಭರವಸೆ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+