ಒಂದೇ ವಾರದಲ್ಲಿ 271 ಮಂದಿ ಡ್ರಗ್ ಸ್ಮಗ್ಲರ್‌ಗಳನ್ನು ಬಂಧಿಸಿದ ಪಂಜಾಬ್ ಪೊಲೀಸರು
ಚಂಡೀಗಢ, ಡಿ. 19: ಪಂಜಾಬ್ ಪೊಲೀಸರು ಒಂದು ವಾರದಲ್ಲಿ 271 ಡ್ರಗ್ ಕಳ್ಳಸಾಗಣೆದಾರರನ್ನು ಬಂಧಿಸಿದ್ದು, ಹೆರಾಯಿನ್ ಸೇರಿದಂತೆ 370 ಕೆಜಿಗೂ ಅಧಿಕ ಮಾದಕ ದ್ರವ್ಯ ವಶಪಡಿಸಿಕೊಂಡಿದ್ದಾರೆ.
ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್ (ಎನ್‌ಡಿಪಿಎಸ್ ಕಾಯ್ದೆ) ಅಡಿಯಲ್ಲಿ 26 ವಾಣಿಜ್ಯ ಪ್ರಕರಣಗಳು ಸೇರಿದಂತೆ 192 ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಪಂಜಾಬ್ ಪೊಲೀಸರು ಕಳೆದ ವಾರ 271 ಮಾದಕವಸ್ತು ಕಳ್ಳಸಾಗಣೆದಾರರನ್ನು ಬಂಧಿಸಿದ್ದಾರೆ.
ಬಂಧಿತರಿಂದ 10 ಕೆಜಿ ಹೆರಾಯಿನ್, 13 ಕೆಜಿ ಅಫೀಮು, 5.5 ಕೆಜಿ ಗಾಂಜಾ, 343 ಕೆಜಿ ಗಸಗಸೆ ಪುಡಿ ಮತ್ತು 54,123 ಮಾತ್ರೆಗಳು, ಕ್ಯಾಪ್ಸುಲ್‌ಗಳು, ಇಂಜೆಕ್ಷನ್‌ಗಳು ಮತ್ತು 17.66 ಲಕ್ಷ ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಂಜಾಬ್ ಐಜಿಪಿ ಮಾಹಿತಿ ನೀಡಿದ್ದಾರೆ.

ಪಂಜಾಬ್‌ನಲ್ಲಿ ಮಾದಕವಸ್ತು ಕಳ್ಳಸಾಗಣೆ , ಮಾದಕವಸ್ತು ಬಳಕೆಯಲ್ಲಿ ಒಂದು ಕಾಲದಲ್ಲಿ ಅಗ್ರಸ್ಥಾನದಲ್ಲಿತ್ತು. ಇದಕ್ಕಾಗಿಯೇ "ಉಡ್ತಾ ಪಂಜಾಬ್" ಎಂಬ ಅಡ್ಡಹೆಸರನ್ನು ಸಹ ನೀಡಲಾಗಿತ್ತು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಪಂಜಾಬ್ ಸರ್ಕಾರವು ಡ್ರಗ್ ಮಾಫಿಯಾದ ಸಮಸ್ಯೆಯನ್ನು ನಿವಾರಿಸಲು ವಿಶೇಷ ಕಾರ್ಯಪಡೆ (STF) ಅನ್ನು ಸ್ಥಾಪಿಸಿದ್ದರೂ ಸಹ, ಇನ್ನೂ ಮಾದಕ ದ್ರವ್ಯಗಳನ್ನು ಕಳ್ಳಸಾಗಣೆ ಮಾಡುವವರ ಜಾಲ ಗಟ್ಟಿಯಾಗಿದೆ.
ಆದರೂ, ಈ ವರ್ಷ ಪ್ರಕಟವಾದ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್‌ಸಿಆರ್‌ಬಿ) ವರದಿಯ ಪ್ರಕಾರ, ಪಂಜಾಬ್ ರಾಜ್ಯವು ಮಾದಕವಸ್ತು ಬಳಕೆ ಮತ್ತು ಕಳ್ಳಸಾಗಣೆಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ ಎಂಬ ಅಂಶವನ್ನು ಬಹಿರಂಗಪಡಿಸಿದೆ.

ಅಂಕಿಅಂಶಗಳ ಪ್ರಕಾರ, ಪಂಜಾಬ್ ಮೂರನೇ ಸ್ಥಾನದಲ್ಲಿದ್ದರೆ, ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾದ ಪ್ರಕರಣಗಳ ಸಂಖ್ಯೆಯಲ್ಲಿ ಕ್ರಮವಾಗಿ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರವು ಅಗ್ರ ಸ್ಥಾನಗಳನ್ನು ಪಡೆದುಕೊಂಡಿವೆ.
ಪಂಜಾಬ್‌ನ ಮಾದಕವಸ್ತು ವ್ಯಾಪಾರವು ವರ್ಷಕ್ಕೆ ಸುಮಾರು 7,500 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಮಾದಕ ವ್ಯಸನದಿಂದ ಹಲವಾರು ಕುಟುಂಬಗಳು ತಮ್ಮ ಸದಸ್ಯರನ್ನು ಕಳೆದುಕೊಂಡಿವೆ. ಇದಕ್ಕಾಗಿಯೇ ಮಕ್ಬೂಲಪುರ ಗ್ರಾಮವನ್ನು ಅನಾಥರು ಮತ್ತು ವಿಧವೆಯರ ಗ್ರಾಮ ಎಂದು ಕರೆಯಲಾಗುತ್ತದೆ.
ಇನ್ನೂ, ಈ ತಿಂಗಳು, ಸುಪ್ರಿಂಕೋರ್ಟ್ ಡ್ರಗ್ಸ್ ಸಮಸ್ಯೆಯ ಮೇಲೆ ಕಣ್ಣಿಡಲು ಮತ್ತು ಹೆಚ್ಚುತ್ತಿರುವ ಕಳ್ಳಸಾಗಣೆಯನ್ನು ಗಂಭೀರವಾಗಿ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.












Click it and Unblock the Notifications