ಭಾರತವನ್ನು ವಶಕ್ಕೆ ಪಡೆಯುವುದು ಪ್ರವಾದಿಗಳ ಕನಸು: ಲಷ್ಕರ್ ಇ ತೈಬಾ
ನವದೆಹಲಿ, ಜುಲೈ 24: ಪ್ರವಾದಿ ಮಹಮದ್ ಗಾಗಿ ಪವಿತ್ರ ಯುದ್ಧ ಮಾಡಬೇಕಿದೆ ಎಂದು ಲಷ್ಕರ್ ಇ ತೈಬಾ ಭಾನುವಾರ ಹೇಳಿದೆ. ಉಗ್ರ ಸಂಘಟನೆಯ ಪ್ರಕಾರ, ಈ ಪವಿತ್ರ ಯುದ್ಧದಲ್ಲಿ ಭಾರತವನ್ನು ವಶಕ್ಕೆ ಪಡೆಯುವುದು ಪ್ರವಾದಿಗಳ ಕನಸು.
ಪಶ್ಚಿಮದಿಂದ ಹೊರಟ ಸೈನ್ಯವು ಇಸ್ಲಾಮ್ ಗಾಗಿ ಭಾರತವನ್ನು ವಶಕ್ಕೆ ಪಡೆಯಬೇಕು ಎಂದು ಪ್ರವಾದಿ ಹೇಳಿದ್ದರು. -ಇವು ಭಾನುವಾರ ಇಸ್ಲಾಮಾಬಾದ್ ನಲ್ಲಿ ನಡೆದ ಲಷ್ಕರ್ ಇ ತೈಬಾ ಕಮ್ಯಾಂಡರ್ ಗಳ ಸಮಾವೇಶದಲ್ಲಿ ಚರ್ಚೆಯಾದ ಪ್ರಮುಖ ಅಂಶಗಳು.

ಈ ಸಮಾವೇಶದಲ್ಲಿ ಪವಿತ್ರ ಯುದ್ಧದ ಬಗ್ಗೆ ಮಾತನಾಡುತ್ತಾ, ಮೊದಲ ಪ್ರಾಶಸ್ತ್ಯ ಕಾಶ್ಮೀರ ವಶಪಡಿಸಿಕೊಳ್ಳುವುದಕ್ಕೆ. ಇದು ಸಾಧ್ಯವಾದರೆ ಭಾರತದ ನಕ್ಷೆಯೇ ಬದಲಾಗುತ್ತದೆ ಎಂದು ಚರ್ಚೆ ನಡೆದಿದೆ.
ಪನಾಮ ಪೇಪರ್ಸ್ ಹಗರಣದಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ಪದಚ್ಯುತಿ ಸಾಧ್ಯತೆಯಿದ್ದು, ನವಾಜ್ ಷರೀಫ್ ಸೋದರ ಪ್ರಧಾನಿ ಆಗುವ ಸೂಚನೆ ಸಿಕ್ಕಿದೆ. ಆಗ ಸೈನ್ಯದ ಹಿಡಿತದಲ್ಲಿ ಪಾಕಿಸ್ತಾನ ಇರುತ್ತದೆ ಎಂಬುದು ಲಷ್ಕರ್ ಇ ತೈಬಾದ ನಿರೀಕ್ಷೆ.
ಕಾಶ್ಮೀರದ ವಿಚಾರವಾಗಿ ನವಾಜ್ ಷರೀಫ್ ನಡೆದುಕೊಳ್ಳುತ್ತಿರುವ ರೀತಿಗೆ ಅಸಮಾಧಾನ ವ್ಯಕ್ತಪಡಿಸಿರುವ ಲಷ್ಕರ್ ಇ ತೈಬಾ, ಈ ವಿವಾದವನ್ನು ಸೈನ್ಯವು ಚೆನ್ನಾಗಿ ನಿಭಾಯಿಸುತ್ತದೆ ಎಂಬ ನಂಬಿಕೆ ವ್ಯಕ್ತಪಡಿಸಿದೆ. ಕಾಶ್ಮೀರವನ್ನು ಉಳಿಸಿಕೊಳ್ಳಲು ಸೇನೆ ಮಧ್ಯಪ್ರವೇಶಿಸಬೇಕು ಎಂದು ಸಂಘಟನೆ ಹೇಳಿದೆ.
ತಮ್ಮ ಸಂಘಟನೆಯ ನಾಯಕ ಹಫೀಜ್ ಸಯೀದ್ ನ ಗೃಹಬಂಧನದಿಂದ ತಕ್ಷಣವೇ ಬಿಡುಗಡೆ ಮಾಡುವಂತೆ ಇದೇ ಸಂದರ್ಭದಲ್ಲಿ ಒತ್ತಾಯಿಸಲಾಯಿತು.
ಪಾಕಿಸ್ತಾನದ ಉದಯ ಆಗುವ ಮುಂಚೆಯೇ ಕಾಶ್ಮೀರಿಗಳು ಹಿಂದೂಗಳ ವಿರುದ್ಧ ಹೋರಾಡುತ್ತಿದ್ದರು. ಇಸ್ಲಾಮ್ ಮತ್ತು ಕಾಶ್ಮೀರ ಹಾಗೂ ಇಸ್ಲಾಮ್ ಮತ್ತು ಪಾಕಿಸ್ತಾನ ಬೇರೆಬೇರೆಯಲ್ಲ ಎಂದು ಕಾಶ್ಮೀರ ವಿವಾದದ ವಿಚಾರವಾಗಿ ಸಂಘಟನೆ ಹೇಳಿದೆ.












Click it and Unblock the Notifications