Breaking: ವಿವಾದಿತ ಹೇಳಿಕೆ ಪ್ರಕರಣ: ನೂಪುರ್ ಶರ್ಮಾ ಬಂಧನಕ್ಕೆ ಸುಪ್ರೀಂ ತಡೆ
ನವದೆಹಲಿ, ಜುಲೈ 19: ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿ ಅಮಾನತುಗೊಂಡಿರುವ ಬಿಜೆಪಿ ವಕ್ತಾರ ನೂಪುರ್ ಶರ್ಮಾ ವಿರುದ್ಧ ಯಾವುದೇ ಬಲವಂತದ ಕ್ರಮಗಳು ಬೇಡ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ಪ್ರವಾದಿ ಮೊಹಮ್ಮದ್ ವಿರುದ್ಧದ ಹೇಳಿಕೆಗಾಗಿ ನೂಪುರ್ ಶರ್ಮಾ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ಅವರನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆಕೆಯ ವಿರುದ್ಧ ದಾಖಲಾಗಿರುವ ಅನೇಕ ಎಫ್‌ಐಆರ್‌ಗಳನ್ನು ಒಂದೆಡೆ ಸೇರಿಸುವಂತೆ ಆಕೆ ಮಾಡಿರುವ ಮನವಿಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯವು ವಿವಿಧ ರಾಜ್ಯಗಳಿಗೆ ತಿಳಿಸಿದೆ.
ತನ್ನ ವಿರುದ್ಧದ ಎಲ್ಲಾ ಒಂಬತ್ತು ಎಫ್‌ಐಆರ್‌ಗಳನ್ನು ಸೇರಿಸಲು ನೂಪುರ್ ಶರ್ಮಾ ಅವರ ಕೋರಿಕೆಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 10 ರಂದು ಕೈಗೆತ್ತಿಕೊಳ್ಳಲಿದೆ.

ದೂರು ದಾಖಲಾಗಿರುವ ದೆಹಲಿ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಕರ್ನಾಟಕ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಅಸ್ಸಾಂ ರಾಜ್ಯಗಳನ್ನು ನೂಪುರ್ ಶರ್ಮಾ ಮನವಿಗೆ ಉತ್ತರಿಸುವಂತೆ ಕೇಳಲಾಗಿದೆ.
ನೂಪುರ್ ಶರ್ಮಾ ಜೀವ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಬೇರೆ ಯಾವುದೇ ಕಾನೂನು ಆಶ್ರಯವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಆಕೆಯ ವಕೀಲರು ಇಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ನೂಪುರ್ ಶರ್ಮಾ ತಮ್ಮ ವಿರುದ್ಧ ದಾಖಲಾಗಿರುವ 9 ಎಫ್‌ಐಆರ್‌ಗಳಲ್ಲಿ ಬಂಧನಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದರು. ತನಗೆ ನಿರಂತರ ಬೆದರಿಕೆಗಳು ಬರುತ್ತಿದ್ದು, ಜೀವ ಬೆದರಿಕೆ ಹೆಚ್ಚಿದೆ. ತನ್ನನ್ನು ಬಂಧಿಸದಂತೆ ಸೂಚಿಸಬೇಕು. ತಮಗೆ, ಕುಟುಂಬಕ್ಕೆ ರಕ್ಷಣೆ ನೀಡುವಂತೆ ಅರ್ಜಿಯಲ್ಲಿ ತಿಳಿಸಿದ್ದರು.
ಹಲವಾರು ರಾಜ್ಯಗಳಲ್ಲಿ ಎಫ್‌ಐಆರ್‌ಗಳನ್ನು ಒಗ್ಗೂಡಿಸಿ ವಿಚಾರಣೆ ನಡೆಸುವಂತೆ ಕೋರಿ ಹಿಂಪಡೆದ ಅರ್ಜಿಯನ್ನು ಪುನರುಜ್ಜೀವನಗೊಳಿಸಬೇಕು ಎಂದು ನೂಪುರ್ ಶರ್ಮಾ ಒತ್ತಾಯಿಸಿದ್ದರು. ಜುಲೈ 1 ರಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆಬಿ ಪರ್ದಿವಾಲಾ ಅವರ ರಜಾಕಾಲದ ಪೀಠವು ಎಲ್ಲಾ ಎಫ್‌ಐಆರ್‌ಗಳನ್ನು ಒಟ್ಟುಗೂಡಿಸಲು ಮಾಡಿದ ಮನವಿಯನ್ನು ಪರಿಗಣಿಸಲು ನಿರಾಕರಿಸಿತ್ತು.
ಈ ಹಿನ್ನೆಲೆ ಇಂದು ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ಆಕೆಯ ಬಂಧನಕ್ಕೆ ತಡೆ ನೀಡಿದ್ದು, ಆಕೆಯ ವಿರುದ್ಧ ದಾಖಲಾಗಿರುವ ಅನೇಕ ಎಫ್‌ಐಆರ್‌ಗಳನ್ನು ಒಂದೆಡೆ ಸೇರಿಸುವಂತೆ ಆಕೆ ಮಾಡಿರುವ ಮನವಿಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯವು ವಿವಿಧ ರಾಜ್ಯಗಳಿಗೆ ತಿಳಿಸಿದೆ.












Click it and Unblock the Notifications