ಗೃಹಲಕ್ಷ್ಮಿ: ಕರ್ನಾಟಕದ ಯೋಜನೆ ಛತ್ತೀಸ್‌ಗಢ ರಾಜ್ಯದಲ್ಲೂ ಜಾರಿಗೆ?
2023ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರಲು ಪ್ರಮುಖ ಕಾರಣ ಗ್ಯಾರಂಟಿ ಯೋಜನೆಗಳು. ಅದ್ರಲ್ಲೂ ಪ್ರಮುಖವಾಗಿ ಗೃಹಲಕ್ಷ್ಮಿ ಯೋಜನೆ ಇಡೀ ದೇಶದ ಗಮನ ಸೆಳೆದಿತ್ತು. ರಾಜ್ಯದ ಪ್ರತಿ ಕುಟುಂಬದ ಯಜಮಾನಿಗೆ ಈ ಯೋಜನೆ ಮೂಲಕ ಪ್ರತಿ ತಿಂಗಳು 2000 ರೂಪಾಯಿ ಸಹಾಯಧನ ಒದಗಿಸಲು ಯೋಜನೆ ಜಾರಿ ಮಾಡಲಾಗಿದೆ. ಆದರೆ ಇದೀಗ ಕರ್ನಾಟಕದ ಈ ಯೋಜನೆ, ದೇಶಾದ್ಯಂತ ಮಾದರಿ ಆಗುತ್ತಿದೆ.
ಹೌದು ಕರ್ನಾಟಕದಲ್ಲಿ ಜಾರಿಗೆ ಬಂದಿರುವ ಗ್ಯಾರಂಟಿ ಯೋಜನೆಗಳು ಇದೀಗ ಪಂಚರಾಜ್ಯ ಚುನಾವಣೆಯಲ್ಲಿ ಕೂಡ ದೊಡ್ಡ ಸದ್ದು ಮಾಡುತ್ತಿವೆ. ಅದರಲ್ಲೂ ನಕ್ಸಲ್ ಪೀಡಿತವಾದ ರಾಜ್ಯ ಛತ್ತೀಸ್‌ಗಢ ರಾಜ್ಯದಲ್ಲೂ ಉಚಿತ ಕೊಡುಗೆಗಳ ದೊಡ್ಡ ಯುದ್ಧ ಆರಂಭವಾಗಿದೆ. ಈ ಸಮಯದಲ್ಲೇ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಛತ್ತೀಸ್‌ಗಢ ರಾಜ್ಯದಲ್ಲಿ ತಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಜಾರಿಯಲ್ಲಿ ಇರುವ ಯೋಜನೆಯನ್ನ ಜಾರಿಗೆ ತರುವ ವಾಗ್ದಾನ ನೀಡಿದ್ದಾರೆ.

ಪ್ರಿಯಾಂಕಾ ಗಾಂಧಿ ಹೇಳಿದ್ದೇನು?
ಅಷ್ಟಕ್ಕೂ ಕಾಂಗ್ರೆಸ್ ಅಭ್ಯರ್ಥಿಗಳ ಪರ ಈಗ ಪ್ರಿಯಾಂಕಾ ಗಾಂಧಿ ಛತ್ತೀಸ್‌ಗಢ ರಾಜ್ಯದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಅಲ್ಲದೆ ಛತ್ತೀಸ್‌ಗಢ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಅಂತ ಕಾಂಗ್ರೆಸ್ ಪಕ್ಷದ ಕೇಂದ್ರ ನಾಯಕರು ಶ್ರಮ ವಹಿಸುತ್ತಿದ್ದಾರೆ. ಇದೇ ಸಮಯದಲ್ಲಿ ಕಾಂಗ್ರೆಸ್ ಹೊಸ ಅಸ್ತ್ರ ಪ್ರಯೋಗ ಮಾಡಿ, ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ, ಕರ್ನಾಟಕದಂತೆ ಛತ್ತೀಸ್‌ಗಢದಲ್ಲೂ ಗೃಹಲಕ್ಷ್ಮಿ ಯೋಜನೆ ಜಾರಿಗೆ ತರುತ್ತೇವೆ ಎಂದಿದೆ ಕಾಂಗ್ರೆಸ್. ಈ ಬಗ್ಗೆ ಪ್ರಿಯಾಂಕಾ ಗಾಂಧಿ ವಿಶೇಷ ಘೋಷಣೆ ಹೊರಡಿಸಿ ಚುನಾವಣಾ ಅಖಾಡದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
2ನೇ ಹಂತದ ಮತದಾನಕ್ಕೆ ಕೌಂಟ್‌ಡೌನ್
ಈಗಾಗಲೇ ಮೊದಲ ಹಂತದ ಮತದಾನ ಮುಗಿಸಿರುವ ಛತ್ತೀಸ್‌ಗಢ ರಾಜ್ಯದಲ್ಲಿ ನವೆಂಬರ್ 17ರಂದು 2ನೇ ಹಂತದ ಚುನಾವಣೆ ನಡೆಯಲಿದೆ. ಹೀಗಾಗಿ, ತೀವ್ರ ಕುತೂಹಲ ಕೆರಳಿಸಿದೆ ಈ ಚುನಾವಣೆ. ಇದೀಗ ಪ್ರಿಯಾಂಕಾ ಗಾಂಧಿ ಹೊಸ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಅತ್ತ ಬಿಜೆಪಿ ಕೂಡ ಛತ್ತೀಸ್‌ಗಢ ಚುನಾವಣೆಯಲ್ಲಿ ಭರ್ಜರಿ ಆಶ್ವಾಸನೆಗಳನ್ನ ನೀಡಿದೆ. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಫೈಟ್ ಬಲು ಜೋರಾಗಿದೆ. ಚುನಾವಣೆಯಲ್ಲಿ ಯಾರು ಗೆಲುವು ಸಾಧಿಸುತ್ತಾರೆ? ಯಾರಿಗೆ ಸೋಲು ಎದುರಾಗುತ್ತೆ? ಎಂಬ ಚರ್ಚೆ ಇದೀಗ ದೇಶದ ಮೂಲೆ ಮೂಲೆಯಲ್ಲೂ ಜೋರಾಗಿದೆ.
ಬಿಜೆಪಿ ಕೊಟ್ಟಿರುವ ಭರವಸೆ ಏನು?
ಛತ್ತೀಸ್‌ಗಢ ಜನರಿಗೆ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ್ರೆ 500 ರೂ.ಗೆ ಸಿಲಿಂಡರ್ ಕೊಡುವ ಭರವಸೆ ಸೇರಿದಂತೆ ಹಲವು ವಾಗ್ದಾನ ನೀಡಲಾಗಿದೆ. ಬಿಜೆಪಿ ಪಕ್ಷದ ಪ್ರಣಾಳಿಕೆಯಲ್ಲಿ, ಹಲವು ಭರವಸೆ ನೀಡಿ ಸಂಚಲನ ಸೃಷ್ಟಿ ಮಾಡಿದೆ. ಪ್ರಣಾಳಿಕೆಯಲ್ಲಿ ಹೇಳಿರುವಂತೆ ಪ್ರತಿ ವಿವಾಹಿತ ಮಹಿಳೆಗೆ ವಾರ್ಷಿಕ 12 ಸಾವಿರ ನೀಡುವುದಾಗಿ ಘೋಷಿಸಲಾಗಿದೆ. ಇದಿಷ್ಟೇ ಅಲ್ಲ ಹಲವಾರು ಸವಲತ್ತುಗಳನ್ನು ಇದರ ಜೊತೆಗೆ ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ. ಅಲ್ಲದೆ ಸದ್ಯಕ್ಕೆ ಛತ್ತೀಸ್‌ಗಢ ರಾಜ್ಯವನ್ನು ಪ್ರಮುಖವಾಗಿ ಕಾಡುತ್ತಿರುವ ನಿರುದ್ಯೋಗದ ಸಮಸ್ಯೆಗೂ ಮುಕ್ತಿ ಕೊಡುವ ಭರವಸೆ ನೀಡಿದೆ ಬಿಜೆಪಿ.

2 ವರ್ಷದಲ್ಲಿ 1 ಲಕ್ಷ ಹುದ್ದೆ!
ಪ್ರತಿ ಎಕರೆಗೆ 21 ಕ್ವಿಂಟಾಲ್ ಭತ್ತ ಖರೀದಿ ಮಾಡುವುದರ ಜತೆ ಕ್ವಿಂಟಲ್‌ಗೆ 3,100 ರೂಪಾಯಿ ಬೆಂಬಲ ಬೆಲೆ ನೀಡುವ ಭರವಸೆ ನೀಡಲಾಗಿದೆ. ಹಾಗೂ 2 ವರ್ಷದಲ್ಲಿ 1 ಲಕ್ಷ ಖಾಲಿ ಹುದ್ದೆ ನೇಮಕಾತಿಗೂ ಪ್ರಕಟಣೆ ಹೊರಡಿಸುವುದು & ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 18 ಲಕ್ಷ ಮನೆ ನಿರ್ಮಿಸಲಾಗುವುದು ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಅಲ್ಲದೆ ಇನ್ನು ಹಲವು ಬಂಪರ್ ನೀಡಲಾಗಿದ್ದು, ಈಗ ಪ್ರಿಯಾಂಕಾ ಗಾಂಧಿ ಅವರು ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ. ಹೀಗಾಗಿ ಛತ್ತೀಸ್‌ಗಢ ಚುನಾವಣೆ ಸಖತ್ ಗಮನ ಸೆಳೆದಿದೆ.












Click it and Unblock the Notifications