Haryana Assembly Election 2024: ಹರಿಯಾಣದಲ್ಲೂ ಸಿದ್ದರಾಮಯ್ಯ ವಿರುದ್ಧ ಮೋದಿ ಗುಡುಗು
ಹರಿಯಾಣ ವಿಧಾನಸಭೆ ಚುನಾವಣೆಯ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸೋನಿಪತ್‌ನಲ್ಲಿ ಬಿಜೆಪಿ ಪರ ಭರ್ಜರಿ ಪ್ರಚಾರ ಭಾಷಣ ಮಾಡಿದ್ದಾರೆ. ಅಲ್ಲಿಯೂ ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ ನಡೆಸುವ ಸಂದರ್ಭದಲ್ಲಿ ಕರ್ನಾಟಕ ಹಾಗೂ ಸಿಎಂ ಸಿದ್ದರಾಮಯ್ಯ ಅವರ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.
ಮೋದಿ ಅವರ ಬಾಯಲ್ಲೂ ಮುಡಾ ಕೇಸ್ ಬಂದಿದೆ. ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಖುದ್ದು ಹೈಕೋರ್ಟ್ ಆದೇಶಿಸಿದೆ. ಸಿದ್ದರಾಮಯ್ಯ ವಿರುದ್ಧ ತನಿಖೆಯಾಗಲೇಬೇಕು. ಒಂದು ಹೈಕಮಾಂಡ್ ಭ್ರಷ್ಟವಾದಾಗ ಅದರ ಅಧೀನದಲ್ಲಿರುವವರಿಗೆ ಲೂಟಿ ಹೊಡೆಯಲು ಒಂದು ಲೈಸೆನ್ಸ್ ನೀಡಿದಂತಾಗಲಿದೆ. ಕಾಂಗ್ರೆಸ್ ಆಡಳಿತ ಮಾಡಿರುವ ಯಾವ ರಾಜ್ಯವೂ ಸಹ ಅಭಿವೃದ್ಧಿ ಹೊಂದಿಲ್ಲ ಎಂದು ಭಾಷಣ ಮಾಡಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿ ವರ್ಷ ಕಳೆದಿದೆ. ಆ ರಾಜ್ಯದ ಪರಿಸ್ಥಿತಿ ಹೇಗಾಗಿದೆ ನೀವೇ ಒಮ್ಮೆ ನೋಡಿ. ಸ್ವತಃ ಅಲ್ಲಿನ ಸಿಎಂ ವಿರುದ್ಧವೇ ಭೂ ಹಗರಣದ ಆರೋಪ ಕೇಳಿ ಬಂದಿದೆ. ಕರ್ನಾಟಕ ಹೈಕೋರ್ಟ್‌ನಲ್ಲೂ ಸಿದ್ದರಾಮಯ್ಯ ಅವರಿಗೆ ಮುಖಭಂಗವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ರೀತಿ ಭ್ರಷ್ಟರನ್ನು ಒಳಗೊಂಡಿರುವ ಕಾಂಗ್ರೆಸ್ಪಕ್ಷಕ್ಕೆ ಹರಿಯಾಣದಲ್ಲಿ ನೀವು ಜಾಗ ಕೊಡುತ್ತೀರಾ? ಎಂದು ಮೋದಿ ಅಲ್ಲಿನ ಮತದಾರರನ್ನು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ದಲಿತರು, ಹಿಂದುಳಿದ ಜಾತಿಗಳಿಗೆ ಸೇರಿದ ಜನರಿಗೆ ನಿರಂತರವಾಗಿ ಮೋಸ ಮಾಡುತ್ತಾ ಬಂದಿದೆ. ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟವಿದೆ. ಇದು ಈ ಹಿಂದೆ ಮಾಡಿರುವ ಪಾಪದ ಫಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹರಿಯಾಣದಲ್ಲಿ ದಲಿತರಿಗೆ ಅನ್ಯಾಯವಾಗದ ಒಂದು ವರ್ಷವೂ ಇರಲಿಲ್ಲ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್‌ನ ಈ ನಾಟಕವನ್ನು ಹರಿಯಾಣದ ದಲಿತರು ನೋಡುತ್ತಿದ್ದಾರೆ. ಮೀಸಲಾತಿ ವಿರೋಧಿಸುವುದು ಕಾಂಗ್ರೆಸ್‌ನ ಡಿಎನ್‌ಎ. ಈಗಿನ ತಲೆಮಾರು ಕೂಡ ಮೀಸಲಾತಿ ತೆಗೆಯುವ ಬಗ್ಗೆಯೇ ಮಾತನಾಡುತ್ತಿದೆ. ಕಾಂಗ್ರೆಸ್‌ಗೆ ಮತ ಹಾಕುವುದು ಎಂದರೆ ಹರಿಯಾಣದ ಸ್ಥಿರತೆ, ಅಭಿವೃದ್ಧಿಯನ್ನು ಪಣಕ್ಕಿಡುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಭ್ರಷ್ಟಾಚಾರದ ತಾಯಿ: ಕಾಂಗ್ರೆಸ್ ಎಲ್ಲೇ ಅಧಿಕಾರಕ್ಕೆ ಬಂದರೂ ಭ್ರಷ್ಟಾಚಾರದಲ್ಲಿ ಮುಳುಗೆದ್ದಿದ್ದಾರೆ. ದೇಶದಲ್ಲಿ ಭ್ರಷ್ಟಾಚಾರಕ್ಕೆ ಜನ್ಮ ನೀಡಿದ ಮತ್ತು ಪೋಷಿಸಿದ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಮಾತ್ರ. ಹಾಗಾಗಿ ದೇಶದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರದ ತಾಯಿ ಎಂದು ಮೋದಿ ಆರೋಪ ಮಾಡಿದ್ದಾರೆ.

10 ವರ್ಷಗಳ ಹಿಂದೆ ಇದೇ ಹರಿಯಾಣವನ್ನ ಕಾಂಗ್ರೆಸ್ ಲೂಟಿ ಮಾಡಿತ್ತು. ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಥಿತಿ ಹೇಗಿದೆ ಎಂಬುದನ್ನು ಕಣ್ಣಾರೆ ನೋಡಿ. ಅಲ್ಲಿಯ ದಲಿತರ ಹಣದಲ್ಲೂ ಕಾಂಗ್ರೆಸ್ ಅಕ್ರಮ ಎಸಗಿದೆ. ಇಡೀ ದೇಶದಲ್ಲೇ ಕಾಂಗ್ರೆಸ್‌ಗಿಂತಲೂ ಭ್ರಷ್ಟಾಚಾರ ಪಕ್ಷ ಮತ್ತೊಂದಿಲ್ಲ. ಈ ಹರಿಯಾಣದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ವೀಕ್ ಆಗುತ್ತಿದೆ. ಮತ್ತೊಂದೆಡೆ ನಮ್ಮ ಬಿಜೆಪಿಗೆ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ. ಇಡೀ ಹರಿಯಾಣವೇ ಮತ್ತೊಮ್ಮೆ ಬಿಜೆಪಿ ಸರ್ಕಾರ ಎಂಬುದನ್ನು ಸಾರಿ ಹೇಳುತ್ತಿದೆ ಎಂದು ಹೇಳಿದ್ದಾರೆ.












Click it and Unblock the Notifications