ರೈಲು ಪ್ರಯಾಣಿಕರಿಗೆ ಶುಭ ಸುದ್ದಿ: ಸಂಚರಿಸುವಾಗಲೇ ರೈಲು ಕ್ಲೀನ್; AI ತಂತ್ರಜ್ಞಾನದ ಮೂಲಕ ನಿಗಾ
ನವದೆಹಲಿ: ಭುವನೇಶ್ವರ-ಬೆಂಗಳೂರು ಪ್ರಶಾಂತಿ ಎಕ್ಸ್‌ಪ್ರೆಸ್ ಸೇರಿದಂತೆ ಅದರ ವಿವಿಧ ಆರು ಪ್ರಮುಖ ದೀರ್ಘ-ದೂರದ ರೈಲು ಸೇವೆಗಳನ್ನು ಹೊಸ ರಾಷ್ಟ್ರೀಯ ಸುಧಾರಣೆಗೆ ಆಯ್ಕೆ ಆಗಿವೆ. ಇದರ ಬೆನ್ನಲ್ಲೆ ಪೂರ್ವ ಕರಾವಳಿ ರೈಲ್ವೆಯು (ECoR) ರೈಲುಗಳು ಶುಚೀಕರಣ, ನೈರ್ಮಲ್ಯ ಕಾಪಾಡಲು ಪ್ರಮುಖ ಬದಲಾವಣೆ ತರಲು ಸಜ್ಜಾಗಿದೆ. ಇದಕ್ಕೆ ಸಂಬಂಧಿಸಿದ ಉಪಕ್ರಮಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಚಾಲನೆ ನೀಡಿದ್ದಾರೆ.
'ಉತ್ತಮ ಆನ್‌ಬೋರ್ಡ್ ಸೇವೆಗಳು' ಶೀರ್ಷಿಕೆಯಡಿ ಉಪಕ್ರಮ ಅನುಷ್ಠಾನಕ್ಕೆ ತರಲಾಗುತ್ತಿದೆ. 2026 ರ ಸಮಗ್ರ '52 ವಾರಗಳಲ್ಲಿ 52 ಸುಧಾರಣೆಗಳು' ಹೆಸರಿನಡಿ ನೀಡಿರುವ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಯಿತು. ಈ ನಿಯಮಗಳಡಿ ರೈಲುಗಳ ಶುಚಿತ್ವದಲ್ಲಿ ಆಧುನಿಕ ಸ್ಪರ್ಶ ನೀಡಲಾಗುತ್ತಿದೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ಮೂಲಕ ಈವರೆಗೆ ಇದ್ದ ಸಾಂಪ್ರದಾಯಿಕ ರೈಲು ಸ್ವಚ್ಛಗೊಳಿಸುವ ವಿಧಾನಗಳಿಗೆ ತಿಲಾಂಜಲಿ ಹಾಡಲು ರೈಲ್ವೆ ಇಲಾಖೆ ಮುಂದಾಗಿದೆ. ಆದರೆ ಸದ್ಯಕ್ಕೆ ಇದು ಭಾರತಾದ್ಯಂತ ಜಾರಿ ಆಗದೇ, ದೇಶದ ಅತಿ ಹೆಚ್ಚು ಜನರು ಸಂಚರಿಸುವ 80 ರೈಲುಗಳಲ್ಲಿ ಅನುಷ್ಠಾನಕ್ಕೆ ತರಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಮುಂದಿನ ಮೂರೇ ವರ್ಷಗಳಲ್ಲಿ ದೇಶದ ಎಲ್ಲ ರೈಲುಗಳಿಗೆ ವಿಸ್ತರಣೆ ಆಗಲಿದ್ದು, ಆಗ ಆಧುನಿಕ ವ್ಯವಸ್ಥೆಯಡಿ ರೈಲುಗಳು ಶುಚಿಗೊಳ್ಳಲಿವೆ.

ರೈಲು ಸಂಚಾರದುದ್ದಕ್ಕೂ ಶುಚಿ ಕಾರ್ಯ
ಈ ಹೊಸ ಬದಲಾವಣೆಯಿಂದ ನಿರ್ದಿಷ್ಟ ನಿಲ್ದಾಣದಲ್ಲಿ ಮಾತ್ರ ಶುಚಿಗೊಳಿಸುವ ರೈಲುಗಳು ಎಲ್ಲ ನಿಲ್ದಾಣಗಳಲ್ಲಿ ನಿರಂತರ ಶುಚಿಗೊಳಿಸುವ ವ್ಯವಸ್ಥೆಯಡಿ ಬರಲಿವೆ. ಅಲ್ಲದೇ ತ್ವರಿತ ಶುಚಿಗೊಳಿಸುವಿಕೆ ಸಾಧ್ಯವಾಗುತ್ತದೆ. ವೃತ್ತಿಪರ ತಂಡಗಳು (ಆನ್‌ಬೋರ್ಡ್ ತಂಡ) ರೈಲಿನ ಪ್ರಯಾಣದುದ್ದಕ್ಕೂ ಇರುತ್ತಾರೆ. ಸುಧಾರಣೆಯು ಮೊದಲ ಬಾರಿಗೆ ಸಾಮಾನ್ಯ (ಕಾಯ್ದಿರಿಸದ) ಬೋಗಿಗಳನ್ನು ವೃತ್ತಿಪರ ಶುಚಿಗೊಳಿಸುವ ವೇಳಾಪಟ್ಟಿಯಲ್ಲಿ ಸಂಪೂರ್ಣವಾಗಿ ಸಂಯೋಜಿಸಲಾಗಿದೆ. ಕಾಯ್ದಿರಿಸಿದ ವಿಭಾಗಗಳ ಮೇಲೆ ಕೇಂದ್ರೀಕರಿಸಿದ್ದ ಶುಚಿಗೊಳಿಸುವ ತಂಡಗಳು, ಈಗ ಗೊತ್ತುಪಡಿಸಿದ ನಿಲ್ದಾಣಗಳಲ್ಲಿ ಸಾಮಾನ್ಯ ಬೋಗಿಗಳನ್ನೂ ಶುಚಿಗೊಳಿಸುತ್ತಾರೆ. ರೈಲುಗಳಲ್ಲಿ ನೈರ್ಮಲ್ಯತೆ ಕಾಪಾಡುತ್ತಾರೆ. ಎಲ್ಲ ವರ್ಗದ ಪ್ರಯಾಣದಲ್ಲಿ ನೈರ್ಮಲ್ಯ ಮಾನದಂಡಗಳು ಒಂದೇ ತೆರನಾಗಿರುತ್ತವೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ಆನ್‌ಬೋರ್ಡ್ ತಂಡದಿಂದ ಇತರ ಸಮಸ್ಯೆಗಳಿಗೆ ಪರಿಹಾರ
ಶುಚಿಗೊಳಿಸುವ ಸಿಬ್ಬಂದಿಯನ್ನು ವಿವಿಧ ಕಾರ್ಯ ನಿರ್ವಹಣೆಗೆ ಘಟಕಗಳಾಗಿ ಮಾಡಲಾಗುತ್ತದೆ. ಅಂದರೆ ಬರೀ ನೈರ್ಮಲ್ಯದೆಡೆ ಗಮನಹರಿಸುವ ಜೊತೆಗೆ ಬೆಳಕಿನ ವೈಫಲ್ಯಗಳು ಅಥವಾ ನೀರು ಸರಬರಾಜು ಸಮಸ್ಯೆ, ಸಣ್ಣ ವಿದ್ಯುತ್, ಯಾಂತ್ರಿಕ ಲೋಪದೋಷಗಳನ್ನು ನಿವಾರಿಸುವಷ್ಟು ಸಾಮರ್ಥ್ಯ ಹೊಂದಿವರಾಗಿರುತ್ತಾರೆ. ಜೊತೆಗೆ ರೈಲಿನಲ್ಲಿ ಕಸ ವಿಲೇವಾರಿ, ನಿಯಮಿತ ಶೌಚಾಲಯ ತಪಾಸಣೆ, ಇನ್ನಿತರ ಶುಚಿತ್ವವನ್ನು ಆಗಾಗ್ಗೆ ಮೇಲ್ವಿಚಾರಣೆ ಮಾಡುತ್ತಿರುತ್ತಾರೆ.
ರೈಲು ಪ್ರಯಾಣದಲ್ಲಿ ಗುಣಮಟ್ಟ ತರಲು ತಂತ್ರಜ್ಞಾನ-ಚಾಲಿತ ಮೇಲ್ವಿಚಾರಣೆ ಮಾಡಲು ತೀರ್ಮಾನಿಸಲಾಗಿದೆ. ನೈಜ ಸಮಯದಲ್ಲಿ ಸ್ವಚ್ಛತೆಯನ್ನು ನಿರ್ಣಯಿಸಲು ನಿಯಂತ್ರಣ ಕೇಂದ್ರಗಳು, ಎಐ ಸಹಾಯ, ಎಐ ಆಧಾರಿತ ಪರಿಶೀಲನಾ ವ್ಯವಸ್ಥೆ, ಅದರ ಮೇಲೆ ಅಧಿಕಾರಿಗಳ ನಿಗಾ ವಹಿಸುವುದು, ತ್ವರಿತವಾಗಿ ಲೋಪದೋಷ ಸರಿಪಡಿಸುವುದೆಲ್ಲವು ಈ ಉಪಕ್ರಮದಲ್ಲಿದೆ. ಪ್ರಯಾಣಿಕರಿಗೆ ಶುಚಿತ್ವದಕ್ಕೆ ಧಕ್ಕೆ ಉಂಟಾದಲ್ಲಿ ದಂಡ ಕ್ರಮ ಜರುಗಿಸಲು ಈ ತಂತ್ರಜ್ಞಾನ ಸಹಾಯಕ್ಕೆ ಬರುತ್ತದೆ.
ರೈಲು ಸಂಚಾರ ಆರಂಭಿಸಿದ ನಿಲ್ದಾಣದಿಂದ ಗಮ್ಯಸ್ಥಾನ ತಲುಪುವವರೆಗೂ ಅದನ್ನು ನಿರಂತರವಾಗಿ ಸ್ವಚ್ಚಗೊಳಿಸಲಾಗುತ್ತದೆ. ಶೌಚಾಲಯಗಳು, ಕಸದ ತೊಟ್ಟಿಗಳು, ನೀರಿನ ಲಭ್ಯತೆ ಮತ್ತು ಯಾಂತ್ರಿಕ ದೋಷಗಳ ತಕ್ಷಣದ ದುರಸ್ತಿ ಮಾಡಲಾಗುತ್ತದೆ. ರೈಲಿನಲ್ಲಿ ಉತ್ತಮ ಪರಿಸರ, ಒಳ್ಳೆಯ ಅನುಭವ ನೀಡಲು, ಪ್ರಯಾಣ ಸುಧಾರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.












Click it and Unblock the Notifications