Prashant Kishor: ಎಕ್ಸಿಟ್ ಪೋಲ್ ಹೊರಬರುವ ಮುನ್ನವೇ ಭವಿಷ್ಯ ನುಡಿದ ಪ್ರಶಾಂತ್ ಕಿಶೋರ್!
ನವದೆಹಲಿ, ಜೂನ್. 01: ಏಳನೇ ಹಂತದ ಚುನಾವಣೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಮುಗಿಯಲಿದ್ದು, ಎಕ್ಸಿಟ್ ಪೋಲ್ 2024 ರ ಫಲಿತಾಂಶಗಳು ಬಿಡುಗಡೆಯಾಗಲಿವೆ. ಎಕ್ಸಿಟ್ ಪೋಲ್ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಭವಿಷ್ಯ ನುಡಿದಿದ್ದಾರೆ.
ಜೂನ್ 1 ರ ಶನಿವಾರದಂದು ಸಾರ್ವತ್ರಿಕ ಚುನಾವಣೆಯ 7 ನೇ ಹಂತದ ಮತದಾನದ ಮುಕ್ತಾಯದ ನಂತರ ಎಕ್ಸಿಟ್ ಪೋಲ್ ಫಲಿತಾಂಶಗಳು ಬಿಡುಗಡೆಯಾಗಲಿವೆ. ಹಲವಾರು ರಾಷ್ಟ್ರೀಯ ಮತ್ತು ಪ್ರಾದೇಶಿಕ ಸುದ್ದಿ ವಾಹಿನಿಗಳು, ಚುನಾವಣಾ ಸಮೀಕ್ಷೆ ಏಜೆನ್ಸಿಗಳೊಂದಿಗೆ ತಮ್ಮ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಸಂಜೆ 6:30 ರ ಸುಮಾರಿಗೆ ಬಿಡುಗಡೆ ಮಾಡಲು ಸಿದ್ಧವಾಗಿವೆ.

ಫಲಿತಾಂಶದ ಬಗ್ಗೆ ಪ್ರಶಾಂತ್ ಕಿಶೋರ್ ಹೇಳಿದ್ದೇನು?
ಎಕ್ಸಿಟ್ ಪೋಲ್ ಫಲಿತಾಂಶ ಬಿಡುಗಡೆಯಾಗುವ ಮೊದಲು ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್‌ಡಿಎ ಹೆಚ್ಚು ಸ್ಥಾನ ಗಳಿಸಬಹುದು ಎಂದು ಪ್ರಶಾಂತ್ ಕಿಶೋರ್ ತಮ್ಮ ಭವಿಷ್ಯವನ್ನು ಪುನರುಚ್ಚರಿಸಿದ್ದಾರೆ. ಪ್ರಶಾಂತ್ ಕಿಶೋರ್ ಮತ್ತೊಮ್ಮೆ ಬಿಜೆಪಿ 303 ಸ್ಥಾನಗಳನ್ನು ಗೆಲ್ಲಬಹುದು ಎಂದು ಭವಿಷ್ಯ ನುಡಿದಿದ್ದಾರೆ. 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವ ಸ್ಥಾನಗಳ ಸಂಖ್ಯೆಯಷ್ಟೇ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಸ್ಥಾನ ಗಳಿಸಬಹುದು ಎಂದಿದ್ದಾರೆ.
"ನನ್ನ ಅಂದಾಜಿನ ಪ್ರಕಾರ, ಬಿಜೆಪಿ ಅದೇ ಅಥವಾ ಸ್ವಲ್ಪ ಉತ್ತಮ ಸಂಖ್ಯೆಗಳೊಂದಿಗೆ ಮತ್ತೆ ತನ್ನ ಲಯಕ್ಕೆ ಹಿಂದಿರುಗಲಿದೆ. ಪಶ್ಚಿಮ ಮತ್ತು ಉತ್ತರ ಭಾರತದಲ್ಲಿನ ಸ್ಥಾನಗಳ ಸಂಖ್ಯೆಯಲ್ಲಿ ಗಮನಾರ್ಹ ಬದಲಾವಣೆಯನ್ನು ನಾನು ಕಾಣುತ್ತಿಲ್ಲ. ಭಾರತದ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿಯೂ ಬಿಜೆಪಿಗೆ ಸಾಕಷ್ಟು ಬೆಂಬಲವಿದೆ. " ಎಂದು ಪ್ರಶಾಂತ್ ಕಿಶೋರ್ ದಿ ಪ್ರಿಂಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ದಕ್ಷಿಣ ರಾಜ್ಯಗಳಲ್ಲಿ ಅರಳುತ್ತಾ ಕಮಲ?
ಪ್ರಶಾಂತ್ ಕಿಶೋರ್ ಅವರು ಪೂರ್ವ ಮತ್ತು ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿಯ ಸ್ಥಾನಗಳ ಸಂಖ್ಯೆ ಮತ್ತು ಮತ ಹಂಚಿಕೆಯಲ್ಲಿ ಸಂಭಾವ್ಯ ಏರಿಕೆಯನ್ನು ಸೂಚಿಸಿದ್ದಾರೆ. ತೆಲಂಗಾಣ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡುಗಳಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸಲು ಪಕ್ಷದ ಪ್ರಯತ್ನಗಳನ್ನು ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಬಗ್ಗೆ ಅಂತಹ ಅತೃಪ್ತಿ ವ್ಯಕ್ತವಾಗಿಲ್ಲ. ಜೊತೆಗೆ 2024 ರ ಲೋಕಸಭೆ ಚುನಾವಣೆಯಲ್ಲಿ ಪರ್ಯಾಯ ಆಡಳಿತಕ್ಕಾಗಿ ಬಲವಾದ ಬೇಡಿಕೆ ಇಲ್ಲ ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಈ ಹಿಂದೆ ಹೇಳಿಕೊಂಡಿದ್ದರು.
ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಪ್ರಶಾಂತ್ ಕಿಶೋರ್ , ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ್ತೊಂದು ಗೆಲುವು ಪಡೆಯುವ ಸಾಧ್ಯತೆಯಿದೆ. ಕೇಸರಿ ಪಕ್ಷದ ಸ್ಥಾನಗಳ ಸಂಖ್ಯೆ 2019 ರ ಲೆಕ್ಕಾಚಾರಕ್ಕೆ ಹತ್ತಿರವಾಗಬಹುದು ಅಥವಾ 303 ಸಂಖ್ಯೆಯನ್ನು ಮೀರಬಹುದು ಎಂದು ಭವಿಷ್ಯ ನುಡಿದಿದ್ದರು.
ಇನ್ನು, ಏಳು ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆಗೆ ಫಲಿತಾಂಶ ಜೂನ್ 4 ರಂದು ಮತ ಎಣಿಕೆ ನಡೆಯಲಿದೆ. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಜೂನ್ 2 ರಂದು ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದೆ. ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ, ಟಿವಿ ಚಾನೆಲ್‌ಗಳು ಮತ್ತು ಸುದ್ದಿವಾಹಿನಿಗಳು ಸಂಜೆ 6:30 ರ ನಂತರ ಎಕ್ಸಿಟ್ ಪೋಲ್ ಡೇಟಾವನ್ನು ಮತ್ತು ಅದರ ಫಲಿತಾಂಶಗಳನ್ನು ಪ್ರಸಾರ ಮಾಡಬಹುದು.












Click it and Unblock the Notifications