ಪೊರಕೇಲಿ ಹೊಡೆದ್ರು, ಶಾಕ್ ಹೊಡೀತಾ?: ಬಿಜೆಪಿಗೆ ಕಿಚಾಯಿಸಿದ ಪ್ರಕಾಶ್ ರೈ
Recommended Video
ನವದೆಹಲಿ, ಫೆಬ್ರವರಿ 11: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಎಎಪಿ ಮೇಲುಗೈ ಸಾಧಿಸಿದೆ. ಆರಂಭದಿಂದಲೂ ಬಹುತೇಕ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಎಎಪಿ, ಮತ್ತೆ ಅಧಿಕಾರಕ್ಕೆ ಏರುವ ಸೂಚನೆ ನೀಡಿದೆ. ರಾಜಧಾನಿಯಲ್ಲಿ ಆಡಳಿತವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಬಯಕೆ ಹೊಂದಿರುವ ಬಿಜೆಪಿಯ ಕನಸು ಭಗ್ನವಾಗುವ ಸಾಧ್ಯತೆ ಇದ್ದು, ಬಿಜೆಪಿ ವಿರೋಧಿಗಳು ಇದನ್ನು ಅಸ್ತ್ರವನ್ನಾಗಿ ಬಳಸಿಕೊಂಡಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಕಂಡು ಖುಷಿಗೊಂಡಿರುವ ನಟ, ರಾಜಕಾರಣಿ ಪ್ರಕಾಶ್ ರೈ, ಇದು ಬಿಜೆಪಿಗೆ ಜನರು ಕೊಟ್ಟಿರುವ ಪೊರಕೆ ಏಟು ಎಂದು ಲೇವಡಿ ಮಾಡಿದ್ದಾರೆ.
ದೆಹಲಿ ಫಲಿತಾಂಶವು ರಾಜಧಾನಿಯಲ್ಲಿ ಬಿಜೆಪಿಗೆ ನೀಡಿದ ಗಲ್ಲುಶಿಕ್ಷೆ ಎಂಬ ಎರಡು ಅರ್ಥದ ಪದವನ್ನು ಬಳಸಿರುವ ಅವರು, ಗುಂಡು ಹಾರಿಸಿ ಎಂದು ಕರೆ ನೀಡಿದವರಿಗೆ ಜನರು ಶಾಕ್ ನೀಡಿದ್ದಾರೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ದೆಹಲಿ ಚುನಾವಣಾ ಪ್ರಚಾರದ ವೇಳೆ ಕೇಂದ್ರ ಸಚಿವ ಅನುರಾಗ್ ಠಾಕೂರ್, ಪ್ರತಿಭಟನಾಕಾರರಿಗೆ ಗುಂಡುಹೊಡೆಯಬೇಕು ಎಂದು ಹೇಳಿದ್ದರು. ಇದು ವ್ಯಾಪಕ ಆಕ್ರೋಶ, ಟೀಕೆಗೆ ಒಳಗಾಗಿತ್ತು. ಇದನ್ನು ಬಳಸಿಕೊಂಡು ಪ್ರಕಾಶ್ ರೈ ತಿರುಗೇಟು ನೀಡಿದ್ದಾರೆ.

ಪೊರಕೇಲಿ ಹೊಡೆದ್ರು
'ಕ್ಯಾಪಿಟಲ್ ಫನಿಶ್‌ಮೆಂಟ್' ಎಂದು ಚುನಾವಣಾ ಫಲಿತಾಂಶವನ್ನು ಬಿಜೆಪಿಗೆ ಅನ್ವಯಿಸಿರುವ ಪ್ರಕಾಶ್ ರೈ, ರಾಜಧಾನಿಯಲ್ಲಿನ ಶಿಕ್ಷೆ ಮತ್ತು ಗಲ್ಲುಶಿಕ್ಷೆ ಎಂಬ ಎರಡೂ ಅರ್ಥ ಬರುವಂತೆ ಹೇಳಿದ್ದಾರೆ. 'ಗೋಲಿಬಾರ್ ಮಾಡೋರಿಗೆ ಜನರು ಪೊರಕೇಲಿ ಹೊಡುದ್ರು... ಶಾಕ್ ಹೊಡೀತಾ?' ಎಂದು ವ್ಯಂಗ್ಯವಾಗಿ ಕೇಳಿದ್ದಾರೆ.

ಜನರ ಮಗ-ಬಂದೂಕಿನ ಮಗ
ದೆಹಲಿ ಚುನಾವಣೆ ವಿಚಾರದಲ್ಲಿ ಪ್ರಕಾಶ್ ರೈ, ಬಿಜೆಪಿಯನ್ನು ವಿರೋಧಿಸುತ್ತಾ ಎಎಪಿಯನ್ನು ಬೆಂಬಲಿಸಿದ್ದರು. ಕೆಲಸ ಬೇಕೋ ಅಥವಾ ಸುಳ್ಳುಗಳು ಬೇಕೋ? ಜನರ ಮಗನೋ ಅಥವಾ ಬಂದೂಕಿನ ಮಗನೋ? ನಾಗರಿಕರು ನಾಳೆ ಯಾವುದು ಎಂದು ನಿರ್ಧರಿಸುತ್ತಾರೆ ಎಂದು ಚುನಾವಣೆಯ ಹಿಂದಿನ ದಿನ ಟ್ವೀಟ್ ಮಾಡಿದ್ದರು.

ಕೊಡುವ ಅಥವಾ ಒಡೆಯುವ ಸರ್ಕಾರ
ಚುನಾವಣೆಯ ದಿನ ಮತ್ತೊಂದು ಟ್ವೀಟ್ ಮಾಡಿದ್ದ ಅವರು, ದೇಶ ತಿಳಿಯಲು ಬಯಸುತ್ತಿದೆ... ಎಲ್ಲವನ್ನೂ ಕೊಡುವ ಸರ್ಕಾರವೇ ಅಥವಾ ಒಡೆಯುವ ಸರ್ಕಾರವೇ... ಬರಿ ಮಾತನಾಡುತ್ತಲೇ ಇರುವವರೇ ಅಥವಾ ಮಾಸ್ಟರ್ ಮೈಂಡ್‌ಗಳೇ ಎಂದು. ದೆಹಲಿಗೆ ಶುಭವಾಗಲಿ ಎಂದು ಅವರು, ದೆಹಲಿ ಸರ್ಕಾರಿ ಶಾಲೆ ಮತ್ತು ಉತ್ತರ ಪ್ರದೇಶ ಸರ್ಕಾರಿ ಶಾಲೆಯ ಸ್ಥಿತಿ ಎಂದು ತೋರಿಸುವ ಚಿತ್ರದೊಂದಿಗೆ ಇನ್ನೊಂದು ಟ್ವೀಟ್ ಮಾಡಿದ್ದರು.

ಗುಂಡಿಕ್ಕಿ ಕೊಲ್ಲಬೇಕು ಎಂದಿದ್ದ ಠಾಕೂರ್
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಠಾಕೂರ್ ವಿರುದ್ಧ ದೂರು ದಾಖಲಿಸಲಾಗಿತ್ತು. ಚುನಾವಣಾ ಆಯೋಗ ಅವರನ್ನು ಮೂರು ದಿನಗಳ ಕಾಲ ದೆಹಲಿ ಚುನಾವಣಾ ಪ್ರಚಾರದಿಂದ ನಿರ್ಬಂಧಿಸಿತ್ತು. ದೆಹಲಿಯ ಶಹೀನ್ ಬಾಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರಿಗೆ ಕೇಜ್ರಿವಾಲ್ ಬಿರಿಯಾನಿ ಪೂರೈಸುತ್ತಿದ್ದಾರೆ ಎಂದು ಠಾಕೂರ್ ಆರೋಪಿಸಿದ್ದರು.












Click it and Unblock the Notifications