ಪಾಕ್ ದೋಣಿಯಲ್ಲಿದ್ದ 600 ಕೋಟಿ ರು ಮಾಲು ವಶ!
ಪೋರಬಂದರ್, ಏ.21: ಭಾರತದ ಗಡಿಭಾಗದಲ್ಲಿ ಅನುಮಾನಾಸ್ಪದವಾಗಿ ಕಂಡು ಬಂದ ಪಾಕಿಸ್ತಾನಕ್ಕೆ ಸೇರಿದ ದೋಣಿಯನ್ನು ಭಾರತೀಯ ನೌಕಾಪಡೆ ಹಾಗೂ ಕರಾವಳಿ ತಟರಕ್ಷಣಾ ಪಡೆ ವಶಕ್ಕೆ ಪಡೆದುಕೊಂಡಿದೆ. ಈ ದೋಣಿಯ ತುಂಬಾ ರಾಶಿಗಟ್ಟಲೆ ಹೆರಾಯಿನ್ ಇರುವುದು ಪತ್ತೆಯಾಗಿದೆ. ಇದರ ಮೌಲ್ಯ ಸುಮಾರು 600 ಕೋಟಿ ರು ಎಂದು ಅಂದಾಜಿಸಲಾಗಿದೆ.
ಈ ದೋಣಿಯಲ್ಲಿದ್ದವರು ಡ್ರಗ್ ಸ್ಲಗಲಿಂಗ್ ಮಾಡಲು ಭಾರತದೆಡೆಗೆ ಬರುತ್ತಿದ್ದಾರೆ? ಅಥವಾ ಉಗ್ರಗಾಮಿ ಚಟುವಟಿಕೆಗಾಗಿ ಹೊಂಚು ಹಾಕುತ್ತಿದ್ದಾರೆ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

ದೋಣಿಯಲ್ಲಿ ಸುಮಾರು 100 ರಿಂದ 140 ಕೆ.ಜಿ ಹೆರಾಯಿನ್ ಪತ್ತೆಯಾಗಿದೆ. 232ಕ್ಕೂ ಅಧಿಕ ಪ್ಯಾಕೇಟ್ ಗಳಿದ್ದ ಈ ಹೆರಾಯಿನ್ ಮೌಲ್ಯ 600 ಕೋಟಿ ರು ಮೀರುತ್ತದೆ. ದೋಣಿಯಲ್ಲಿದ್ದ 8 ಮಂದಿಯನ್ನು ಬಂಧಿಸಿ ಅವರ ಬಳಿ ಸ್ಯಾಟಲೈಟ್ ಫೋನ್ ವಶಪಡಿಸಿಕೊಳ್ಳಲಾಗಿದೆ.
ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಹೀಗಾಗಿ ಬಂಧಿತರನ್ನು ಸದ್ಯಕ್ಕೆ ಮಾದಕ ದ್ರವ್ಯ ಕಳ್ಳಸಾಗಾಣಿಕೆದಾರರು ಎಂದು ಕರೆಯಬಹುದು. ಅದರೆ, ಸ್ಯಾಟಲೈಟ್ ಫೋನ್ ಬಳಸಿ ಏನು ಕಾರ್ಯಾಚರಣೆ ಮಾಡಲು ಹೊಂಚು ಹಾಕಿದ್ದರು ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ ಎಂದು ತನಿಖಾಧಿಕಾರಿಗಳು ಒನ್ ಇಂಡಿಯಾ ಪ್ರತಿನಿಧಿಗೆ ತಿಳಿಸಿದ್ದಾರೆ.

ಡ್ರಗ್ ಅಡ್ಡ ಆಗಿರುವ ಗಾಂಧಿ ನಾಡು
ಮಹಾತ್ಮಾ ಗಾಂಧೀಜಿ ಅವರ ಪೋರಬಂದರು ಈಗ ಡ್ರಗ್ ಮಾಫಿಯಾ ಸಾಗಾಣಿಕೆಯ ಪ್ರಮುಖ ಮಾರ್ಗವಾಗಿದೆ. ಹಲವಾರು ವರ್ಷಗಳಿಂದ ಇದು ಮಾದಕ ದ್ರವ್ಯ ಮಾಫಿಯಾಗಳಿಗೆ ಜಲಮಾರ್ಗ ಸುಲಭ ಸಂಚಾರ ಮಾರ್ಗವಾಗಿ ಪರಿಣಮಿಸಿದೆ.

ಈ ಬಗ್ಗೆ ಇನ್ನೂ ನಿಗೂಢತೆ ಮುಂದುವರೆದಿದೆ. ಹೀಗಾಗಿ ಭಾರತದ ಜಲ ಗಡಿಗಳ ಸುತ್ತಾ ಭದ್ರಕೋಟೆ ನಿರ್ಮಿಸಿ ಭಾರತೀಯ ನೌಕಾಪಡೆ ಹಾಗೂ ಕರಾವಳಿ ತಟರಕ್ಷಣಾ ಪಡೆ ಸದಾ ಕಾಯುತ್ತಿವೆ.












Click it and Unblock the Notifications