ಕರ್ನಾಟಕ ಚುನಾವಣೆ ಮೇಲೆ ಉಗ್ರರ ದಾಳಿ ಎಫೆಕ್ಟ್ ನೀಡುತ್ತಾ?
ಬೆಂಗಳೂರು: ದೇಶದ ಗಮನ ಕರ್ನಾಟಕ ಚುನಾವಣೆ ಮೇಲೆ ನೆಟ್ಟಿದೆ. ಅಧಿಕಾರಕ್ಕಾಗಿ ಕಾಂಗ್ರೆಸ್, ಬಿಜೆಪಿ ನಡುವೆ ಯುದ್ಧ ಶುರುವಾಗಿದೆ. ಆದರೆ ಇದೇ ವೇಳೆ ದೇಶದ ಗಡಿಯಲ್ಲಿ ಪಾಪಿ ರಕ್ಕಸ ಉಗ್ರರು ದಾಳಿ ನಡೆಸಿ ಐವರು ಯೋಧರನ್ನು ಬಲಿಪಡೆದಿದ್ದಾರೆ. ಹಾಗಾದರೆ ಈ ಘಟನೆ ಕರ್ನಾಟಕ ಚುನಾವಣೆ ಮೇಲೆ ಹೇಗೆ ಎಫೆಕ್ಟ್ ಬೀರಲಿದೆ? ಎಂಬುದನ್ನ ಮುಂದೆ ತಿಳಿಯೋಣ.
#WATCH | Drone surveillance and search operation underway in the area where terrorists fired on an Indian Army truck in J&K's Poonch
— ANI (@ANI) April 20, 2023
5 Army soldiers lost their lives, one injured hospitalised
(Visuals deferred by unspecified time) pic.twitter.com/4VWNblD4oz
ಈಗಾಗಲೇ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲು ಕಾಂಗ್ರೆಸ್ ನಾಯಕರಿಗೆ ಹಲವು ಅಸ್ತ್ರಗಳು ಸಿಕ್ಕಿವೆ. ಅದರಲ್ಲೂ ಹಗರಣಗಳ ಸರಮಾಲೆ ಇಟ್ಟುಕೊಂಡು, ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಕಾಂಗ್ರೆಸ್ಸಿಗರು ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಮತ್ತೊಂದು ಕಡೆ ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತ ಲಿಂಗಾಯತ ಅಸ್ತ್ರದ ಪ್ರಯೋಗಕ್ಕೂ ದಾರಿ ಮಾಡಿಕೊಟ್ಟಿದೆ. ಅದರ ಜೊತೆಗೆ ಈಗ ದೇಶದ ಗಡಿಯಲ್ಲಿ ನಡೆದಿರುವ ಉಗ್ರರ ಭೀಕರ ದಾಳಿ ಕೂಡ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ದೊಡ್ಡ ಅಸ್ತ್ರವಾಗುವ ಸಾಧ್ಯತೆ ಇದೆ.

ದೇಶದಲ್ಲಿ ಗಡಿಯಲ್ಲಿ ಏನಾಯ್ತು?
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಯೋತ್ಪಾದಕರ ದಾಳಿಯ ಪರಿಣಾಮ ಸೇನಾ ವಾಹನದಲ್ಲಿ ಸ್ಪೋಟ ಸಂಭವಿಸಿದೆ. ಈ ಘಟನೆ ಬಳಿಕ ಬೆಂಕಿ ಹೊತ್ತುಕೊಂಡು ಐವರು ಯೋಧರು ಹುತಾತ್ಮರಾಗಿದ್ದಾರೆ. ಇನ್ನು ಈ ಭೀಕರ ಘಟನೆ ಕಣಿವೆ ರಾಜ್ಯದಲ್ಲಿ ಮತ್ತೆ ಸಂಚಲನ ಸೃಷ್ಟಿಮಾಡಿದೆ. ರಜೌರಿ ವಲಯದ ಭಿಂಬರ್ ಗಲ್ಲಿಯಿಂದ ಪೂಂಚ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸೇನಾ ವಾಹನದ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದಾರೆ. ಮತ್ತೊಂದು ಕಡೆ ಉಗ್ರರು ಗ್ರೆನೆಡ್ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂಬ ಅನುಮಾನ ವ್ಯಕ್ತವಾಗಿದೆ.
ಈ ಮೊದಲಿನಿಂದಲೂ ಸೂಕ್ಷ್ಮ ಪ್ರದೇಶವಾಗಿರುವ ಪೂಂಚ್ ಜಿಲ್ಲೆಯಲ್ಲಿ ಭಾರತ ಹಾಗೂ ಪಾಕ್ ಗಡಿ ಕೂಡುತ್ತದೆ. ರಜೌರಿ ಸೆಕ್ಟರ್ ಸದಾ ಆತಂಕದಲ್ಲೇ ಮುಳುಗಿರುತ್ತದೆ. ಇಂತಹದ್ದೇ ಜಾಗದಲ್ಲಿ ಭಾರತೀಯ ಸೇನಾ ವಾಹನದ ಮೇಲೆ ಭೀಕರ ದಾಳಿ ನಡೆದಿದೆ. ಉಗ್ರರು ನಡೆಸಿದ ದಾಳಿಯಲ್ಲಿ ಸೇನಾ ವಾಹನಕ್ಕೆ ಬೆಂಕಿ ಬಿದ್ದು ಐವರು ಯೋಧರು ಹುತಾತ್ಮರಾಗಿದ್ದಾರೆ. ಹೀಗಾಗಿ ಉಗ್ರರ ಹೆಡೆಮುರಿ ಕಟ್ಟಲು ಭಾರತೀಯ ಸೇನೆ ತಂತ್ರಜ್ಞಾನದ ಮೊರೆ ಹೋಗಿದೆ. ಡ್ರೋನ್ ಬಳಸಿ ಉಗ್ರರು ಅಡಗಿರುವ ಪ್ರದೇಶದ ಹುಡುಕಾಟ ಮುಂದುವರಿದಿದೆ.
ಕೇಂದ್ರದ ವಿರುದ್ಧ ವಾಗ್ದಾಳಿ?
ಭಾರತ ಮತ್ತು ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಗುಂಡಿನ ಚಕಮಕಿ, ಉಗ್ರರ ದಾಳಿಗಳು ಆಗಾಗ ಸಂಭವಿಸುತ್ತವೆ. ಆದರೆ ಸೇನಾ ವಾಹನದ ಮೇಲೆ ದಾಳಿ ನಡೆಸುವಷ್ಟು ಉಗ್ರರು ರಣಹೇಡಿ ಕೃತ್ಯಕ್ಕೆ ಮುಂದಾಗಿರುವುದು ಗಂಭೀರ ವಿಚಾರ ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಈಗಾಗಲೇ 2019ರ ಪುಲ್ವಾಮಾ ದಾಳಿ ಹಿನ್ನೆಲೆ ವಿರೋಧ ಪಕ್ಷಗಳು ಕೇಂದ್ರದ ವಿರುದ್ಧ ಹರಿಹಾಯುತ್ತಿವೆ. ಪುಲ್ವಾಮಾ ದಾಳಿ ಭದ್ರತಾ ವೈಫಲ್ಯದ ಪರಿಣಾಮವಾಗಿ ನಡೆದಿತ್ತು ಎಂದು ವಿಪಕ್ಷ ನಾಯಕರು ಆರೋಪಿಸುತ್ತಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಮತ್ತೊಂದು ಭೀಕರ ಘಟನೆ ನಡೆದಿದೆ. ಅದರಲ್ಲೂ ಕರ್ನಾಟಕ ಚುನಾವಣೆಯಲ್ಲಿ ವಿಪಕ್ಷಗಳಿಗೆ ಇದೇ ಅಸ್ತ್ರವಾದರೂ ಅಚ್ಚರಿ ಪಡಬೇಕಿಲ್ಲ.

ಒಟ್ಟಾರೆ ಹೇಳುವುದಾದರೆ ಹೈವೋಲ್ಟೇಜ್ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿದೆ. ಆದರೆ ಈ ಹೊತ್ತಲ್ಲೇ ಕೋಟ್ಯಂತರ ಭಾರತೀಯರ ಕಣ್ಣಲ್ಲಿ ಕಂಬನಿ ಮೂಡಿದೆ. ದೇಶದ ಗಡಿಯಲ್ಲಿ ಪಾಪಿ ಉಗ್ರರು ನಡೆಸಿರುವ ಭೀಕರ ದಾಳಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಆದಷ್ಟು ಬೇಗ ಉಗ್ರರ ರುಂಡ ಚೆಂಡಾಡುವಂತೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ವಿಪಕ್ಷಗಳು ಕೇಂದ್ರದ ವಿರುದ್ಧ ಇದೇ ವಿಚಾರದಲ್ಲಿ ಚಾಟಿ ಬೀಸಲು ಸಿದ್ಧತೆ ನಡೆಸಿರುವುದು ಸುಳ್ಳಲ್ಲ.












Click it and Unblock the Notifications