Delhi Pollution: ದೆಹಲಿಯಲ್ಲಿ ಮಾಲಿನ್ಯಗೊಂಡ ಯಮುನಾ ನದಿ – ಛತ್ ಪೂಜೆಗೆ ದಪ್ಪ ನೊರೆ ಅಡ್ಡಿ
ನವದೆಹಲಿ ಅಕ್ಟೋಬರ್ 19: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಛತ್ ಪೂಜೆಗೂ ಮುನ್ನ ಯಮುನಾ ನದಿಯ ಸ್ಥಿತಿ ಹದಗೆಟ್ಟಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ. ನದಿಯಲ್ಲಿ ವಿಷಕಾರಿ ನೊರೆ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದು ಈ ಬಾರಿ ಛತ್ ಪೂಜೆ ಮಾಡುವುದು ಹೇಗೆ ಎಂದು ಜನ ಚಿಂತಿತರಾಗಿದ್ದಾರೆ.
ಹೌದು.. ಹೆಚ್ಚುತ್ತಿರುವ ವಾಯು ಮಾಲಿನ್ಯದಿಂದ ದೆಹಲಿ ಹೆಣಗಾಡುತ್ತಿದೆ. ಈ ಮಧ್ಯೆ ಶುಕ್ರವಾರ ಕಾಳಿಂದಿ ಕುಂಜ್ ಪ್ರದೇಶದ ಯಮುನಾ ನದಿಯಲ್ಲಿ ವಿಷಪೂರಿತ ನೊರೆ ತೇಲುತ್ತಿರುವುದು ಕಂಡುಬಂದಿದೆ. ಬೆಳಗ್ಗೆ 8 ಗಂಟೆಗೆ ರಾಷ್ಟ್ರ ರಾಜಧಾನಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ 293ಕ್ಕೆ ಕುಸಿದು 'ಕಳಪೆ' ವರ್ಗಕ್ಕೆ ತಲುಪಿದೆ.

ಮಾಲಿನ್ಯದ ಬಗ್ಗೆ ಬಿಜೆಪಿ, ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ಮಾಡಿದೆ. ಎಎಪಿಗೆ ಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶವಿಲ್ಲ. ಅವರು ಈ ವಿಷಯದಲ್ಲಿ ಕೇವಲ ಬ್ಲೇಮ್ ಗೇಮ್ ಆಡುತ್ತಾರೆ ಎಂದು ಬಿಜೆಪಿ ಹೇಳಿದೆ.
ದೆಹಲಿ ಸರ್ಕಾರದ ವಿರುದ್ಧ ಮನೋಜ್ ತಿವಾರಿ ವಾಗ್ದಾಳಿ
ಕಳೆದ 10 ವರ್ಷಗಳಿಂದ ದೆಹಲಿಯಲ್ಲಿ ಎಎಪಿ ಸರ್ಕಾರವು ಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿಲ್ಲ ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಹೇಳಿದ್ದಾರೆ. ಮಾಲಿನ್ಯ ಮತ್ತೆ ಹಾನಿಕಾರಕವಾಗುತ್ತಿದೆ. ನದಿ ಮತ್ತು ಗಾಳಿ ಕಲುಷಿತಗೊಂಡಿದೆ. ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಇದು ಆರಂಭವಷ್ಟೇ. 4-5 ತಿಂಗಳ ನಂತರ ಚುನಾವಣೆ ಇದೆ.

ದೆಹಲಿಯನ್ನು ದೆಹಲಿ ಇಡಲು ಬಿಜೆಪಿಗೆ ಅವಕಾಶ ನೀಡಬೇಕೆಂದು ನಾನು ಜನರಲ್ಲಿ ವಿನಂತಿಸುತ್ತೇನೆ. ಸಮಸ್ಯೆ ಎದುರಾದಾಗ ಎಎಪಿ ಸರಕಾರ ಎಚ್ಚೆತ್ತುಕೊಳ್ಳುತ್ತದೆ. ಆದರೆ ದಿಲ್ಲಿಯ ಸಮಸ್ಯೆಗಳು ಉದ್ಭವವಾಗುವ ಮುನ್ನವೇ ಎಚ್ಚೆತ್ತುಕೊಳ್ಳುವುದಿಲ್ಲ ಎಂದು ಕಿಡಿ ಕಾರಿದರು.
ಯೋಜನೆ ಸಿದ್ಧಪಡಿಸುತ್ತಿದ್ದೇವೆ: ಪರಿಸರ ಸಚಿವರು
ರಾಷ್ಟ್ರ ರಾಜಧಾನಿಯಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟ ಕುರಿತು ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಅವರು ಮಾತನಾಡಿ, 'ಪ್ರತಿಪಕ್ಷಗಳಿಗೆ ಏನನ್ನೂ ಹೇಳುವ ಹಕ್ಕು ಇಲ್ಲ. ನಾವು ಯೋಜನೆಗಳನ್ನು ಸಿದ್ಧಪಡಿಸುತ್ತಿದ್ದೇವೆ ಮತ್ತು ಕೆಲವು ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಆದರೆ ಅವರದ್ದೇ ಸರ್ಕಾರ ಇರುವ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳು ನಿದ್ದೆ ಮಾಡುತ್ತಿವೆ. ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ನಿದ್ದೆ ಮಾಡುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ನಿದ್ರಿಸುತ್ತಿದೆ. ಪ್ರತಿಕೂಲ ವಾತಾವರಣದಲ್ಲಿಯೂ ಮಾಲಿನ್ಯದ ಪರಿಣಾಮವನ್ನು ಕಡಿಮೆ ಮಾಡಲು ದೆಹಲಿ ಸರ್ಕಾರವು ಅತ್ಯಂತ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ' ಎಂದು ದೂರಿದ್ದಾರೆ.
ಛತ್ ಪೂಜೆ
ಛತ್ ಪೂಜೆ ಬಿಹಾರ, ಉತ್ತರ ಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ವಿಶೇಷ ಪ್ರಾಮುಖ್ಯತೆಯ ಹಬ್ಬವಾಗಿದೆ. ಛಠ್ ಪೂಜೆ ಅತ್ಯಂತ ಕಷ್ಟಕರವಾದ ಉಪವಾಸವಾಗಿದೆ. ನಾಲ್ಕು ದಿನಗಳ ಛತ್ ಪೂಜೆಯ ಸಮಯದಲ್ಲಿ, ಜನರು ತಮ್ಮ ಕುಟುಂಬಗಳಿಗೆ ಸಂತೋಷ ಮತ್ತು ಸಮೃದ್ಧಿ, ದೀರ್ಘಾಯುಷ್ಯ ಮತ್ತು ತಮ್ಮ ಮಕ್ಕಳ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಈ ಉಪವಾಸದಲ್ಲಿ, ಸೂರ್ಯನನ್ನು ಪೂಜಿಸಲಾಗುತ್ತದೆ. ಯಮುನಾ ನದಿಯಲ್ಲಿ ನಿಂತು ಸೂರ್ಯನಿಗೆ ಪೂಜೆ ಮಾಡುತ್ತಾರೆ.
ಛತ್ ಪೂಜೆಯ ಸಮಯದಲ್ಲಿ ಮಲ್ಪುವಾ, ಅಕ್ಕಿ ಲಡ್ಡುಗಳು, ಹಣ್ಣುಗಳು ಮತ್ತು ತೆಂಗಿನಕಾಯಿಯನ್ನು ಪ್ರಸಾದವಾಗಿ ವಿತರಿಸಲಾಗುತ್ತದೆ. ಮೊದಲನೆಯದಾಗಿ ಈ ಎಲ್ಲಾ ವಸ್ತುಗಳನ್ನು ಸೂರ್ಯ ದೇವರಿಗೆ ಅರ್ಪಿಸಲಾಗುತ್ತದೆ. ಛತ್ ಪೂಜೆಯ ಸಮಯದಲ್ಲಿ ಭಕ್ತರು ಯಮುನಾ ನದಿಯಲ್ಲಿ ಸ್ನಾನ ಮಾಡಿ ಸೂರ್ಯ ದೇವನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಆದರೆ ಈ ಬಾರಿ ಗಂಗಾ ನದಿಯಲ್ಲಿ ನೊರೆ ಹೆಚ್ಚಾಗಿದ್ದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.












Click it and Unblock the Notifications