ವಿಕೆ ಸಿಂಗ್ ವಿರುದ್ಧ ಆರೋಪ ಪ್ರತ್ಯಾರೋಪ ರಾಜಕೀಯ
ನವದೆಹಲಿ, ಸೆ. 24: ಜಮ್ಮು-ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸಲು ರಹಸ್ಯ ಸೇವೆಗೆ ಮೀಸಲಾದ ಅನುದಾನದ ದುರ್ಬಳಕೆ ಸೇರಿದಂತೆ ಹಲವು ಆರೋಪಗಳನ್ನು ಹೊತ್ತಿರುವ ಮಾಜಿ ಸೇನಾ ಮುಖ್ಯಸ್ಥ ವಿಕೆ ಸಿಂಗ್ ಅವರು ತಿರುಗೇಟು ನೀಡಿದ್ದಾರೆ. ಜಮ್ಮು ಸರ್ಕಾರದ ಸಚಿವರುಗಳಿಗೆ ಆರ್ಮಿಯಿಂದ ನಿರಂತರವಾಗಿ ಹಣ ಸಂದಾಯವಾಗುತ್ತಿದೆ ಎಂದು ಹೊಸ ವಿಚಾರ ಹೊರ ಹಾಕಿದ್ದಾರೆ.
ಕಣಿವೆ ರಾಜ್ಯದಲ್ಲಿ ಶಾಂತಿ ಕಾಪಾಡಲು ಭಾರತೀಯ ಸೇನೆ ಜಮ್ಮು ಮತ್ತು ಕಾಶ್ಮೀರದ ಸರ್ಕಾರದ ಸಚಿವರುಗಳಿಗೆ ಸ್ವಾತಂತ್ರ್ಯ ಬಂದಾಗಿನಿಂದ ಹಣ ಸಂದಾಯ ಮಾಡುತ್ತಾ ಬಂದಿದೆ ಎಂದು ಜನರಲ್ ವಿಕೆ ಸಿಂಗ್ ಹೇಳಿದ್ದಾರೆ.
ಸೇನೆಯಲ್ಲಿ ಉತ್ತರಾಧಿಕಾರಿಯ ಬದಲಾವಣೆಯಲ್ಲಿ ಪ್ರಭಾವ ಬೀರುವ ಸಲುವಾಗಿ ಎನ್.ಜಿ.ಒ.ವೊಂದಕ್ಕೆ ಹಣ ಸಂದಾಯ, ಫೋನ್ ಕದ್ದಾಲಿಕೆ ಮಾಡುವ ಉಪಕರಣಗಳ ಖರೀದಿ, ಅಕ್ರಮವಾಗಿ ರಹಸ್ಯ ಕಾರ್ಯಾಚರಣೆಗಳನ್ನು ನಡೆಸಿರುವುದು ಇವೆ ಮುಂತಾದ ಆರೋಪಗಳು ನಿರಾಧಾರ ಎಂದು ಮಾಜಿ ಸೇನಾಧ್ಯಕ್ಷ ವಿಕೆ ಸಿಂಗ್ ಅವರು ಪ್ರತಿಕ್ರಿಯಿಸಿದ್ದಾರೆ.
ಮೇ 2010ರಲ್ಲಿ ಸ್ಥಾಪನೆ ಮಾಡಿದ್ದ ಮಿಲಿಟರಿ ಇಂಟೆಲಿಜೆನ್ಸ್ ನ ಘಟಕವಾಗಿರುವ ತಾಂತ್ರಿಕ ಸೇವಾ ವಿಭಾಗದ ಸುತ್ತ ಆರೋಪಗಳು ಸುತ್ತಿಕೊಂಡಿವೆ. ಇದರ ಜತೆಗೆ ಆರೋಪ ಮಾಡಿದವರು ದೇಶಹಿತಕ್ಕೆ ಮಾರಕವಾದವರು ಎಂದು ಸಿಂಗ್ ಹೇಳಿರುವುದು ಅನೇಕರನ್ನು ಕೆರಳಿಸಿದೆ.
ಸಚಿವರ ಹೆಸರುಗಳನ್ನು ವಿಕೆ ಸಿಂಗ್ ಬಹಿರಂಗಗೊಳಿಸಲಿ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಮಂಗಳವಾರ ಆಗ್ರಹಿಸಿದ್ದಾರೆ. ವಿಕೆ ಸಿಂಗ್ ವಿವಾದದ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ಓದಿ...

ಸಿಬಿಐ ತನಿಖೆಗೆ
ಸಿಬಿಐ ತನಿಖೆಗೆ: ವಿಕೆ ಸಿಂಗ್ ಅವರ ಮೇಲೆ ಕೇಳಿ ಬಂದಿರುವ ಆರೋಪಗಳ ಬಗ್ಗೆ ಸಿಬಿಐ ತನಿಖೆ ನಡೆಯುವ ಸಾಧ್ಯತೆ ಇದೆ. ಅಕ್ರಮಗಳ ಬಗ್ಗೆ ಮಿಲಿಟರಿ ಕಾರ್ಯಾಚರಣೆ ವಿಭಾಗದ ಡಿಜಿ ಲೆಫ್ಟಿನೆಂಟ್ ಜನರಲ್ ವಿನೋದ್ ಭಾಟಿಯಾ ನೇತೃತ್ವದ ತಂಡ ಸಿಬಿಐ ತನಿಖೆ ನಡೆಸುವಂತೆ ರಕ್ಷಣಾ ಸಚಿವಾಲಯಕ್ಕೆ ಶಿಫಾರಸು ಮಾಡಿದೆ.
ಕಾಶ್ಮೀರದ ಸಚಿವರುಗಳಿಗೆ ಹಣ ನೀಡಿರುವ ಹೇಳಿಕೆ ಬಗ್ಗೆ ಸಿಬಿಐ ತನಿಖೆ ನಡೆಯಲಿ. ಆರ್ಮಿ ಏಕೆ ಸಚಿವರಿಗೆ ಹಣ ನೀಡಬೇಕು ಎಂದು ಫಾರೂಖ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.
ರಾಜಕೀಯ ದ್ವೇಷ
*ಸೇನೆಯಿಂದ ನಿವೃತ್ತಿಯಾಗುವ ಮೊದಲು ಯುಪಿಎ ಸರ್ಕಾರದ ವಿರುದ್ಧ ವಿಕೆ ಸಿಂಗ್ ಬಹಿರಂಗ ಆರೋಪ ಮಾಡಿದ್ದರು.
* ಹರ್ಯಾಣದ ರೆವಾರಿಯಲ್ಲಿ ನಡೆದಿದ್ದ ನಿವೃತ್ತ ಸೇನಾ ಸಿಬ್ಬಂದಿ ರ್ಯಾಲಿಯಲ್ಲಿ ಬಿಜೆಪಿ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಜತೆ ಕಾಣಿಸಿಕೊಂಡರು.
* ಅಮ್ ಆದ್ಮಿ ಪಾರ್ಟಿ ಸಂಸ್ಥಾಪಕ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ, ಅಣ್ಣಾ ಹಜಾರೆ ಹಲವೆಡೆ ವಿಕೆ ಸಿಂಗ್ ಸಕ್ರಿಯವಾಗಿ ಭಾಗವಹಿಸಿದ್ದರು. ಇದೆಲ್ಲವೂ ವಿಕೆ ಸಿಂಗ್ ವಿರುದ್ಧ ಕಾಂಗ್ರೆಸ್ ಸರ್ಕಾರ ಕಿಡಿಕಾರಲು ಕಾರಣವಾಗಿದೆ.

ಏನಿದು ವಿವಾದ
* ಜಮ್ಮು-ಕಾಶ್ಮೀರ ಸರ್ಕಾರವನ್ನು ಅಸ್ಥಿರಗೊಳಿಸುವ ಸಲುವಾಗಿ ಸಿಎಂ ಒಮರ್ ಅಬ್ದುಲ್ಲಾ ಸರ್ಕಾರದಲ್ಲಿ ಕೃಷಿ ಸಚಿವರಾಗಿರುವ ಗುಲಾಂ ಹಸನ್ ಮಿರ್ ಗೆ 1.19 ಕೋಟಿ ರೂಪಾಯಿ ಸಂದಾಯ ಮಾಡಲಾಗಿದೆ.
* * ಸೇನಾ ಮುಖ್ಯ ಕಾರ್ಯಾಲಯದ ಆದೇಶದಂತೆ ಹಕೀಕತ್ ಸಿಂಗ್ ಗೆ 2.38 ಕೋಟಿ ರೂಪಾಯಿ ಪಾವತಿಯಾಗಿದೆ.

ಇನ್ನಷ್ಟು ಆರೋಪ
* ಜಮ್ಮು-ಕಾಶ್ಮೀರ 15 ಕಾರ್ಪ್ಸ್ ನಲ್ಲಿ ನಿಯೋಜನೆ ಮಾಡುವ ಸಲುವಾಗಿ 2010ರ ನವೆಂಬರ್ನಲ್ಲಿ 8 ಕೋಟಿ ರೂಪಾಯಿ ಖರ್ಚು ಮಾಡಿ ಸಿಂಗಾಪೂರ್ ಮೂಲದ ಕಂಪನಿಯಿಂದ ಫೋನ್ ಕದ್ದಾಲಿಕೆ ಉಪಕರಣಗಳನ್ನು ಖರೀದಿ ಮಾಡಲಾಯ್ತು. ಆದರೆ 2012ರ ಮಾರ್ಚ್ ನಲ್ಲಿ ಮಿಲಿಟರಿ ಗುಪ್ತದಳದ ಡಿಜಿಯಾಗಿದ್ದ ಲೆಫ್ಟಿನೆಂಟ್ ಜನರಲ್ ಡಿ.ಎಸ್.ಥಾಕೂರ್ ನಿರ್ದೇಶನದಂತೆ ಈ ಉಪಕರಣಗಳನ್ನು ನಾಶ ಮಾಡಲಾಯ್ತು.
* ತಾಂತ್ರಿಕ ಸೇವೆ ವಿಭಾಗದ ಅಧಿಕಾರಿಗಳು ಸರ್ಕಾರಿ ಪಾಸ್ ಪೋರ್ಟ್ ಬದಲಿಗೆ ವೈಯಕ್ತಿಕ ಪಾಸ್ ಪೋರ್ಟ್ ಮೂಲಕ ಲಂಡನ್ ಮತ್ತು ದುಬೈಗೆ ಪದೇ ಪದೇ ಭೇಟಿ ನೀಡುತ್ತಿದ್ದರು. ಅಲ್ಲದೇ ಕೆಲ ನಿರ್ದಿಷ್ಟ ಡಿಎಸ್ಡಿ ಅಧಿಕಾರಿಗಳು ಸೇನಾಧಿಕಾರಿಗಳಿಗೆ ಮಸಿ ಬಳಿಯುವ ಸಲುವಾಗಿ ದಾಖಲೆಗಳನ್ನು ತಿದ್ದಿದ್ದರು.

ತನಿಖಾ ವರದಿ ಏಲ್ಲಿದೆ?
ಈ ತನಿಖಾ ವರದಿ ಸೇನೆಗೆ ಸಂಬಂಧಿಸಿದ ಮೂಲ ದಾಖಲೆಗಳು ಮತ್ತು ಟಿಪ್ಪಣಿಗಳನ್ನು ಒಳಗೊಂಡಿದ್ದು, ಇದೇ ವರ್ಷದ ಮಾರ್ಚ್ ನಲ್ಲಿ ರಕ್ಷಣಾ ಕಾರ್ಯದರ್ಶಿಯಾಗಿದ್ದ ಶಶಿಕಾಂತ್ ಶರ್ಮಾಗೆ ತನಿಖಾ ವರದಿಯನ್ನು ಸಲ್ಲಿಸಲಾಗಿದೆ.
ವರದಿ ರಕ್ಷಣಾ ಸಚಿವ ಎ.ಕೆ.ಆಂಟನಿ ಮುಂದಿದೆ. ನಂತರ ಪ್ರಧಾನ ಮಂತ್ರಿ ಸಚಿವಾಲಯದ ಗಮನಕ್ಕೆ ತರಲಾಗುತ್ತದೆ.ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ಕ್ರಮ ಬಗ್ಗೆ ಶಿಫಾರಸು ಮಾಡಲಿದ್ದಾರೆ.
ಬ್ರಿಗೇಡಿಯರ್ (ನಿವೃತ್ತ) ವಿ ಮಹಾಲಿಂಗಂ ಅವರು ವರದಿಯಲ್ಲಿನ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಯಲಿ. ರಾಜ್ಯ ಸರ್ಕಾರ ಸುಮ್ಮನಿರುವುದು ಸರಿಯಲ್ಲ ಎಂದಿದ್ದಾರೆ.












Click it and Unblock the Notifications