ಮೋದಿ ಬಹರೈಚ್ ಸಮಾವೇಶಕ್ಕೆ ಭಾರೀ ಭದ್ರತೆ
ಲಖನೌ, ನ.5 : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ಪಾಟ್ನಾ ಸಮಾವೇಶದ ಸಂದರ್ಭದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ್ದರಿಂದ ಉತ್ತರ ಪ್ರದೇಶದ ಬಹರೈಚ್ ನಲ್ಲಿ ನ.8ರಂದು ನಡೆಯುವ ಮೋದಿ ಸಮಾವೇಶಕ್ಕೆ ಭಾರೀ ಭದ್ರತೆ ಒದಗಿಸಲಾಗಿದೆ. ಗುಜರಾತ್ ಮತ್ತು ಉತ್ತರ ಪ್ರದೇಶ ಪೊಲೀಸರು ಮೈದಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಅಗತ್ಯ ಮುನ್ನೆಚ್ಚರಿಕೆ ಕೈಗೊಂಡಿದ್ದಾರೆ.
ಪಾಟ್ನಾ ಸರಣಿ ಸ್ಫೋಟದ ನಂತರ ನಡೆಯುತ್ತಿರುವ ಮೊದಲ ಸಮಾವೇಶವಾದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಭದ್ರತಾ ವ್ಯವಸ್ಥೆ ಕೈಗೊಂಡಿದ್ದಾರೆ. ನ.8ರ ಶುಕ್ರವಾರ ಬಹರೈಚ್ ನಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ನರೇಂದ್ರ ಮೋದಿ ಮಾತನಾಡಲಿದ್ದಾರೆ.

ಸಮಾವೇಶ ನಡೆಯುವ ಮೈದಾನವನ್ನು ಉತ್ತರ ಪ್ರದೇಶ ಮತ್ತು ಗುಜರಾತ್ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಸದ್ಯ ಮೈದಾನದೊಳಗೆ ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಸಮಾವೇಶ ನಡೆಯುವ ದಿನ ಪಕ್ಷದ ಕಾರ್ಯಕರ್ತರಿಗೆ ಮತ್ತು ಪದಾಧಿಕಾರಿಗಳಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ.
ಸಮಾವೇಶಕ್ಕೆ ಬರುವ ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಪಕ್ಷದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು. ಗುರುತಿನ ಚೀಟಿ ಇಲ್ಲದ ವ್ಯಕ್ತಿಗಳಿಗೆ ಮೈದಾನ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಘೋಷಿಸಿದ್ದಾರೆ. ಮೈದಾನದ ಸುತ್ತಲು ಪ್ರತಿದಿನ ಪೊಲೀಸರು ಪಥ ಸಂಚಲನ ನಡೆಸುತ್ತಿದ್ದಾರೆ. ಮೈದಾನವನ್ನು ಪ್ರವೇಶಿಸುವ ಮುಖ್ಯ ದ್ವಾರಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ.
ಇಂಡಿಯನ್ ಮುಜಾಯಿದೀನ್ ಸಂಘಟನೆಯ ಹಿಟ್‌ಲೀಟ್ಸ್‌ನಲ್ಲಿ ಮೋದಿ ಅವರೇ ನಂ 1 ಟಾರ್ಗೆಟ್ ಆಗಿದ್ದಾರೆ ಎಂದು ಕೆಲವು ದಿನಗಳ ಹಿಂದೆ ಬಂಧಿಸಿದ ಶಂಕಿತ ಭಯೋತ್ಪಾದಕ ಮಾಹಿತಿ ನೀಡಿರುವುದರಿಂದ ಸಮಾವೇಶಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಅ.20ರಂದು ಪಾಟ್ನಾದಲ್ಲಿ ನಡೆದ ಮೋದಿ ಅವರ ಹೂಂಕಾರ್ ಸಮಾವೇಶದ ಸಂದರ್ಭದಲ್ಲಿ ಸರಣಿ ಬಾಂಬ್ ಸ್ಫೋಟಿಸಿ ಆರು ಮಂದಿ ಸಾವನ್ನಪ್ಪಿ, 83 ಮಂದಿ ಗಾಯಗೊಂಡಿದ್ದರು. (ಮೋದಿ ಹತ್ಯೆಗೆ ಖಲಿಸ್ಥಾನ ಉಗ್ರರು, ಭದ್ರತೆ ಹೆಚ್ಚಳ)












Click it and Unblock the Notifications