ಕಿಸ್ ಡೇ : ಮುತ್ತಿನ ಮಳೆಗೆ ತಣ್ಣೀರು ಎರಚಿದ್ದು ಯಾರು!
ತಿರುವನಂತಪುರ, ಅ. 30: ಸಮುದ್ರ ತೀರದಲ್ಲಿ ಮುತ್ತಿನ ವಿನಿಮಯ ಮಾಡಿ ಸಂಭ್ರಮಿಸಬೇಕೆಂದಿದ್ದ ಪ್ರೇಮಿಗಳ ಆಸೆಗೆ ಪೊಲೀಸರು ತಣ್ಣೀರು ಎರಚಿದ್ದಾರೆ. ಕೇರಳದಲ್ಲಿ ನೈತಿಕ ಪೊಲೀಸ್ ಗಿರಿ ವಿರೋಧಿಸಿ ಯುವಕರು ಹಮ್ಮಿಕೊಂಡಿದ್ದ 'ಕಿಸ್ ಡೆ'ಗೆ ಪೊಲೀಸರಿಂದ ಅಡ್ಡಿ ಉಂಟಾಗಿದೆ.
ಈ ರೀತಿಯ ಆಚರಣೆಗಳು ಕಾನೂನು ಮತ್ತು ಸುವ್ಯವಸ್ಥೆ ಹದಗೆಡಿಸುವಂತೆ ಮಾಡಿದರೂ ಮಾಡಬಹುದು. ಹಾಗಾಗಿ ಇದಕ್ಕೆ ಅವಕಾಶ ನೀಡದಿರುವುದು ಒಳಿತು ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.[ನಟಿ ಮುತ್ತಿಟ್ಟಿದಕ್ಕೆ ಕೊಟ್ಟಿದ್ದು 81 ಸಾವಿರ ಡಾಲರ್!]

'ಕಿಸ್ ಆಫ್ ಲವ್' ಎಂಬ ಹೆಸರಿನಲ್ಲಿ ಕಿರುಚಿತ್ರ ತಯಾರಕ ರಾಹುಲ್ ಪಶುಪಾಲನ್ ಎಂಬುವರು ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನವೆಂಬರ್ 2ಕ್ಕೆ ಸಾವಿರಾರು ಪ್ರೇಮಿಗಳು ಒಂದೆಡೆ ಸೇರಿ ಚುಂಬಿಸಿಕೊಳ್ಳಲು ವೇದಿಕೆ ಸಿದ್ಧಮಾಡಿಕೊಡಲಾಗಿತ್ತು.
ಕಿಸ್ ಡೆ ಆಯೋಜಿಸಿದ್ದು ಯಾಕೆ?
ಅಕ್ಟೋಬರ್ 23 ರಂದು ಕೋಜಿಕೋಡ್ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಯುವ ಪ್ರೇಮಿಗಳನ್ನು ರೊಚ್ಚಿಗೆಬ್ಬಿಸುವಂತೆ ಮಾಡಿತು. ಬಿಜೆಪಿ ಮತ್ತು ಕೇಸರಿ ಪಾಳಯದ ಕೆಲವರು ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ಪ್ರೇಮಿಗಳ ಮೇಲೆ ದಾಳಿ ಮಾಡಿದ್ದರು. ಈ ಘಟನೆ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗಿತ್ತು.
ನಂತರ ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ವ್ಯಾಪಕ ಚರ್ಚೆ ಆರಂಭವಾಯಿತು. ಅಲ್ಲದೇ 'ಕಿಸ್ ಡೆ' ಕುರಿತಾಗಿ ಫೇಸ್ ಬುಕ್ ಪೇಜ್ ವೊಂದನ್ನು ತೆರೆಯಲಾಯಿತು. ಈಗಾಗಲೇ 4,500ಕ್ಕೂ ಹೆಚ್ಚು ಜನ ನಾವು ಭಾಗವಹಿಸಲಿದ್ದೇವೆ ಎಂಬ ಸಂದೇಶ ರವಾನಿಸಿದ್ದರು.[ರಾಹುಲ್ ಗಾಂಧಿಗೆ ಮತ್ತೆ 'ಸಿಹಿ' ಚುಂಬನ]
ಆದರೆ ಕೇರಳದ ಮಹಿಳಾ ಆಯೋಗವೂ 'ಕಿಸ್ ಡೆ'ಗೆ ವಿರೋಧ ವ್ಯಕ್ತಪಡಿಸಿದೆ. ನೈತಿಕ ಪೊಲೀಸ್ ಹೆಸರಿನಲ್ಲಿ ದಬ್ಬಾಳಿಕೆ ನಡೆಯುತ್ತಿದ್ದು ಇದನ್ನು ತನಿಖೆಗೆ ಒಳಪಡಿಸಬೇಕು ಎಂದು ಕೋರಿದೆ.












Click it and Unblock the Notifications