D Gukesh: ಡಿ ಗುಕೇಶ್‌ರನ್ನು ಹಾಡಿ ಹೊಗಳಿದ ಪ್ರಧಾನಿ ನರೇಂದ್ರ ಮೋದಿ
ವಿಶ್ವ ಚೆಸ್ ಚಾಂಪಿಯನ್ ಡಿ ಗುಕೇಶ್ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ಗುಕೇಶ್ ತಮ್ಮ ಕುಟುಂಬದ ಸದಸ್ಯರ ಜೊತೆಗೆ ಪ್ರಧಾನಿ ಮೋದಿಯನ್ನು ಭೇಟಿಯಾದರು, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶ್ವ ಚಾಂಪಿಯನ್‌ರನ್ನು ಹಾಡಿ ಹೊಗಳಿದರು. ಭೇಟಿಯಾದ ಕ್ಷಣಗಳ ಫೋಟೊಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಗುಕೇಶ್ ಜೊತೆ ಉತ್ತಮ ಸಂವಹನ ಹೊಂದಿದ್ದೇನೆ ಎಂದು ಹೇಳಿದರು.
ಅಲ್ಲದೆ ಹಲವು ವರ್ಷಗಳಿಂದ ತಾವು ಗುಕೇಶ್ ಜೊತೆ ಸಂವಹನ ನಡೆಸುತ್ತಿದ್ದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಗುಕೇಶ್ ಜೊತೆಗಿನ ಫೋಟೊಗಳನ್ನು ಹಂಚಿಕೊಂಡಿರುವ ಅವರು, "ಚೆಸ್ ಚಾಂಪಿಯನ್, ಭಾರತದ ಹೆಮ್ಮೆ ಡಿ ಗುಕೇಶ್‌ರನ್ನು ಭೇಟಿ ಮಾಡಿದೆ. ಹಲವು ವರ್ಷಗಳಿಂದ ನಾನು ಗುಕೇಶ್ ಜೊತೆ ಸಂವಹನ ನಡೆಸುತ್ತಿದ್ದೇನೆ. ಅವರ ದೃಢತೆ ಮತ್ತು ಸಮರ್ಪಣಾ ಮನೋಭಾವವನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಆತ ಆತ್ಮವಿಶ್ವಾಸ ಎಲ್ಲರಿಗೂ ಮಾದರಿಯಾಗಿದೆ. ಹಲವು ವರ್ಷಗಳ ಮೊದಲು ನಾನು ಆತನ ಜೊತೆ ವಿಡಿಯೋ ಕಾಲ್ ಮಾಡಿದ್ದು ನೆನಪಿದೆ, ಆತ ವಿಶ್ವದ ಕಿರಿಯ ವಿಶ್ವ ಚಾಂಪಿಯನ್ ಆಗುತ್ತಾನೆ ಎಂದು ಅಂದೇ ಹೇಳಿದ್ದೆ, ನಾನು ಹೇಳಿದ್ದ ಭವಿಷ್ಯ ನಿಜವಾಗಿದೆ" ಎಂದು ಅವರು ಹೇಳಿದ್ದಾರೆ.

ಚೆಸ್‌ನಲ್ಲಿ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಆಗುವ ಗುರಿ ಸಾಧನೆ ಮಾಡಿರುವ ಗುಕೇಶ್ ತಮ್ಮ ಯಶಸ್ಸು, ಕಠಿಣ ಪರಿಶ್ರಮದಿಂದ ಯಶಸ್ಸಿನ ಶಿಖರ ಏರಿದ್ದಾರೆ. ಅವರ ಸಾಧನೆ ಅನೇಕ ಯುವಕರಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು. ಇದೇ ಸಮಯದಲ್ಲಿ ಗುಕೇಶ್ ಹಸ್ತಾಕ್ಷರ ಇರುವ ಚೆಸ್ ಬೋರ್ಡ್ ಅನ್ನು ಮೋದಿ ಉಡುಗೊರೆಯಾಗಿ ಪಡೆದರು.
ಇತಿಹಾಸ ನಿರ್ಮಿಸಿದ್ದ ಗುಕೇಶ್
ಡಿಸೆಂಬರ್ ತಿಂಗಳ ಆರಂಭದಲ್ಲಿ ಸಿಂಗಾಪರದಲ್ಲಿ ನಡೆದ ಫಿಡೆ ವಿಶ್ವ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಅವರು ಚೀನಾದ ಡಿಂಗ್ ಲಿರೆನ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಹೊಸ ಇತಿಹಾಸ ರಚಿಸಿದ್ದರು. ತಾವು ಗೆಲುವು ಸಾಧಿಸುತ್ತಿದ್ದಂತೆ ಗುಕೇಶ್ ಭಾವಪರವಶರಾಗಿ ಕಣ್ಣಿರು ಹಾಕಿದ್ದರು. ಈ ಗೆಲುವು ನನ್ನ ಜೀವನ ಅತ್ಯುತ್ತಮ ಕ್ಷಣಗಳಲ್ಲಿ ಒಂದು ಎಂದು ಬಣ್ಣಿಸಿದ್ದರು.
ಗುಕೇಶ್ ವಿಶ್ವ ಚೆಸ್ ಚಾಂಪಿಯನ್ ಆಗುತ್ತಿದ್ದಂತೆ ತಮಿಳುನಾಡು ಮತ್ತು ಆಂಧ್ರಪ್ರದೇಶ ಸರ್ಕಾರಗಳು ಗುಖೇಶ್ ಸಾಧನೆಯನ್ನು ಕೊಂಡಾಡಿದ್ದವು. ಗುಕೇಶ್ ತೆಲುಗು ಹುಡುಗ ಎಂದು ಆತ ತಮಿಳುನಾಡಿನವನು ಎಂದು ಕೂಡ ಎರಡೂ ಭಾಷಿಕರು ಜಗಳವಾಡಿಕೊಂಡಿದ್ದರು. ಅದೇನೆ ಇದ್ದರೂ ಚೆಸ್ ಚಾಂಪಿಯನ್ ಆಗುವ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿದ್ದರು.












Click it and Unblock the Notifications