‘ದೇವರ ನಾಡು’ ಕೇರಳದಿಂದ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧೆ? ದಕ್ಷಿಣ ಭಾರತದಲ್ಲೂ ಮೋದಿ ಹವಾ?
ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ಈ ಬಾರಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ? ಅನ್ನೋದು, ಭಾರಿ ಕುತೂಹಲ ಕೆರಳಿಸಿದೆ. ಅದರಲ್ಲೂ ಇಷ್ಟುದಿನ ಉತ್ತರ ಭಾರತದ ನೆಲದಿಂದ ಸ್ಪರ್ಧೆ ಮಾಡಿ ದಿಗ್ವಿಜಯ ಸಾಧಿಸಿರುವ ಪ್ರಧಾನಿ ಮೋದಿ ಅವರು, ಈ ಬಾರಿ ದಕ್ಷಿಣ ಭಾರತದ ರಾಜ್ಯದಲ್ಲಿ ಸ್ಪರ್ಧೆ ಮಾಡಲಿದ್ದಾರೆ ಅನ್ನೋ ಮಾತು ಕೇಳಿಬಂದಿತ್ತು. ಈಗ ಆ ಮಾತಿಗೆ ಪುಷ್ಟಿ ಸಿಗುವ ಬೆಳವಣಿಗೆ ನಡೆದಿದೆ.
ಈಗಿನ ಪರಿಸ್ಥಿತಿ ನೋಡಿದರೆ ಉತ್ತರ ಭಾರತದ ರಾಜ್ಯಗಳಲ್ಲಿ ಬಿಜೆಪಿ ಫುಲ್ ಸ್ಟ್ರಾಂಗ್ ಆಗಿದೆ ಆದರೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ನೆಲೆ ಸಿಗುತ್ತಿಲ್ಲ. ಹೀಗಿದ್ದಾಗ ದಕ್ಷಿಣ ಭಾರತದ ನೆಲದ ಮೇಲೂ ಬಿಜೆಪಿ ಬಾವುಟ ನೆಡಲು ಕಮಲ ಪಾಳಯದ ವರಿಷ್ಠರು ನಿರ್ಧರಿಸಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಅವರನ್ನು ದಕ್ಷಿಣ ಭಾರತದ ರಾಜ್ಯದಿಂದ 2024ರ ಲೋಕಸಭೆ ಎಲೆಕ್ಷನ್ ಅಖಾಡದಲ್ಲಿ, ಚುನಾವಣೆಗೆ ನಿಲ್ಲಿಸಲು ರಣತಂತ್ರ ಹೆಣೆಯಲಾಗುತ್ತಿದೆ ಎಂಬ ಮಾತುಗಳೀಗ ಕೇಳಿಬರುತ್ತಿವೆ. ಇದೇ ಸಮಯದಲ್ಲಿ ಪ್ರಧಾನಿ ಮೋದಿ ಅವರ ಕೇರಳ ಭೇಟಿ ಗಮನ ಕೂಡ ಸೆಳೆದಿದೆ.

2 ಲಕ್ಷ ಮಹಿಳೆಯರು ಭಾಗಿ?
ಅಂದಹಾಗೆ ಕೇರಳದ ಲೋಕಸಭೆ ಕ್ಷೇತ್ರದಿಂದ ಪ್ರಧಾನಿ ಮೋದಿ ಅವರು ಸ್ಪರ್ಧೆ ಮಾಡ್ತಾರೆ ಅನ್ನೋ ಮಾತು ಕೇಳಿಬರುತ್ತಿದೆ. ಅದ್ರಲ್ಲೂ ಕೇರಳದ ತ್ರಿಶೂರ್ ಕ್ಷೇತ್ರದಲ್ಲಿ ಪಿಎಂ ಮೋದಿ ಅವರು ಸ್ಪರ್ಧೆ ಮಾಡಬಹುದು ಎಂಬ ಊಹಾಪೋಹ ಹರಡಿರುವ ಬೆನ್ನಲ್ಲೇ, ಈಗ ಅದೇ ಕ್ಷೇತ್ರದಲ್ಲಿ ಭರ್ಜರಿ ಸಮಾರಂಭ ಏರ್ಪಡಿಸಲಾಗಿದೆ. ಜನವರಿ 2 ರಂದು ನಡೆಯುವ ಬೃಹತ್ ಸಮಾವೇಶ ಅಂದರೆ, 'ಸ್ತ್ರೀ ಶಕ್ತಿ ಸಂಗಮಂ' ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶದಲ್ಲಿ ಸುಮಾರು 2 ಲಕ್ಷ ಮಹಿಳೆಯರು ಭಾಗವಹಿಸುವ ನಿರೀಕ್ಷೆ ಇದೆ. ಸಮಾರಂಭ ಉದ್ದೇಶಿಸಿ ಪ್ರಧಾನಿ ಮೋದಿ ಅವರು ಭಾಷಣ ಮಾಡಲಿದ್ದಾರೆ.
ಸಮಾವೇಶ ಆಯೋಜನೆ ಏಕೆ?
ಇನ್ನು ಸಂಸತ್ತಿನ ಉಭಯ ಸದನ ಅಂದ್ರೆ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಯಶಸ್ವಿಯಾಗಿ ಅಂಗೀಕರಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನ ಅಭಿನಂದಿಸಲು ಬಿಜೆಪಿ ಕೇರಳ ಘಟಕವು ಈ ಕಾರ್ಯಕ್ರಮ ಆಯೋಜಿಸಿದೆ ಅಂತಾ ಕೇರಳದ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರು ಮಾಹಿತಿ ನೀಡಿದ್ದಾರೆ. ಆದರೆ ಇದರ ಜೊತೆ ಕೇರಳದಲ್ಲಿ ಬಿಜೆಪಿ ಬಲಪಡಿಸುವ ಕಾರ್ಯತಂತ್ರ ಕೂಡ ಇದೆ ಎನ್ನಲಾಗುತ್ತಿದೆ.

ಯಾರೆಲ್ಲಾ ಕಾರ್ಯಕ್ರಮಕ್ಕೆ ಬರ್ತಾರೆ?
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಮಹಿಳಾ ಉದ್ಯಮಿಗಳು, ಎಂಜಿಎನ್‌ಆರ್‌ಇಜಿಎ ಕಾರ್ಯಕರ್ತರು ಸೇರಿ ಕುಟುಂಬಶ್ರೀ ಸದಸ್ಯರ ಬಳಗ & ಸಾಮಾಜಿಕ & ಸಾಂಸ್ಕೃತಿಕ ಕಾರ್ಯಕರ್ತರು ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರಿಗೆ ಬಿಜೆಪಿ ನಾಯಕರು ಆಹ್ವಾನ ನೀಡಿದ್ದಾರೆ. ತ್ರಿಶೂರ್‌ನ ತೆಕ್ಕಿಂಕಾಡು ಮೈದಾನದಲ್ಲಿ 'ಸ್ತ್ರೀ ಶಕ್ತಿ ಸಂಗಮಂ' ಸಮಾರಂಭ ಆಯೋಜನೆ ಮಾಡಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರು ಹೇಳೋದು ಏನು?
ಈ ಕುರಿತು ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರು, 'ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗಿಕರಿಸಿದ್ದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಹಿಂದೆ ನಾವು ಯುವಕರಿಗಾಗಿ ಕಾರ್ಯಕ್ರಮ ನಡೆಸಿದ್ದೇವೆ' ಅಂತ ಸುರೇಂದ್ರನ್ ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರ ಈ ಭೇಟಿ ಭಾರಿ ಕುತೂಹಲ ಕೆರಳಿಸಿದೆ. ಹೀಗಾಗಿ ಎಲ್ಲರ ಗಮನ ಕೇರಳದ ಮೇಲೆ ನೆಟ್ಟಿದೆ.
ಒಟ್ನಲ್ಲಿ ಭಾರಿ ಕುತೂಹಲ ಕೆರಳಿಸಿರುವ 2024ರ ಲೋಕಸಭೆ ಚುನಾವಣೆ ಕ್ಷಣಕ್ಷಣಕ್ಕೆ ಭಾರಿ ತಿರುವು ಪಡೆಯುತ್ತಿದೆ. ಇದೇ ಸಮಯದಲ್ಲಿ ಪ್ರಧಾನಿ ಮೋದಿ ಅವರ ಕ್ಷೇತ್ರದ ಬಗ್ಗೆ ಕೂಡ ಸಂಚಲನ ಸೃಷ್ಟಿಸುವ ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲೂ ದಕ್ಷಿಣ ಭಾರತದ ರಾಜ್ಯದ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಸ್ಪರ್ಧೆ ಮಾಡಿದ್ರೆ, ಇದರಿಂದ ಮತ್ತೊಂದು ದೊಡ್ಡ ಟ್ವಿಸ್ಟ್‌ನ ಪಡೆಯಬಹುದು. ಹಿಗಾಗಿ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಆದ್ಯತೆ ಕ್ಷೇತ್ರದ ಪೈಕಿ ಕೇರಳದ ಆರು ಕ್ಷೇತ್ರಗಳು ಸೇರಿವೆ. ಈ ಪೈಕಿ ಕೇರಳದ ತ್ರಿಶೂರ್ ಕೂಡ ಸೇರಿದ್ದು, ಈ ಕ್ಷೇತ್ರದಲ್ಲಿ ನಟ ಕಂ ರಾಜಕಾರಣಿ ಸುರೇಶ್ ಗೋಪಿ ಸ್ಪರ್ಧೆ ಮಾಡಲಿದ್ದಾರೆ ಅಂತ ಈವರೆಗೂ ಹೇಳಲಾಗುತ್ತಿತ್ತು. ಆದರೆ ಭವಿಷ್ಯದಲ್ಲಿ ಏನೆಲ್ಲಾ ಬದಲಾಗುತ್ತೋ ಗೊತ್ತಿಲ್ಲ.












Click it and Unblock the Notifications