GDP ಏರಿಕೆ ನಡುವೆಯೂ ಚಿನ್ನ, ವಿದೇಶಿ ಪ್ರವಾಸಕ್ಕೆ ಮೋದಿ ‘ಬೇಡ’ ಎಂದಿದ್ದೇಕೆ? ಇದರ ಹಿಂದಿದೆ ಆರ್ಥಿಕ ಲೆಕ್ಕಾಚಾರ!
ನವದೆಹಲಿ: ಭಾರತದ ಆರ್ಥಿಕತೆ ಶೇ.7.8ರಷ್ಟು ಬೆಳವಣಿಗೆ ದಾಖಲಿಸಿ ವಿಶ್ವದ ಗಮನ ಸೆಳೆಯುತ್ತಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ವಿಭಿನ್ನ ಮನವಿಯೊಂದನ್ನು ಮಾಡಿದ್ದಾರೆ. ಅಗತ್ಯವಿಲ್ಲದೆ ಚಿನ್ನ ಖರೀದಿಸಬೇಡಿ, ಮನರಂಜನೆಗಾಗಿ ವಿದೇಶಕ್ಕೆ ತೆರಳಬೇಡಿ ಹಾಗೂ ವಿದೇಶದಲ್ಲಿ ಮದುವೆ ಮಾಡಿಕೊಳ್ಳುವುದನ್ನು ತಪ್ಪಿಸಿ ಎಂದು ಮೋದಿ ಅವರು ಕರೆ ನೀಡಿದ್ದಾರೆ.
ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಪ್ರಧಾನಿ ಮೋದಿ, ಒಂದೆಡೆ ದೇಶದ GDP ಬೆಳವಣಿಗೆ ಉತ್ತಮವಾಗಿದ್ದರೆ, ಮತ್ತೊಂದೆಡೆ ಪ್ರಧಾನಿ ಜನರ ಖರ್ಚಿನ ಮೇಲೆ ಇಂತಹ ಸಲಹೆ ನೀಡಿರುವುದು ಏಕೆ ಎಂಬ ಪ್ರಶ್ನೆ ಮೂಡಿದೆ. ಇದರ ಹಿಂದೆ ದೇಶದ ವಿದೇಶಿ ವಿನಿಮಯ, ಆಮದು ವೆಚ್ಚ ಮತ್ತು 'ಸ್ವದೇಶಿ' ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶ ಇದೆ.

PM Narendra Modi:ದೇಶೀಯ ಉತ್ಪನ್ನ ಆದ್ಯತೆ
ಜಾಗತಿಕ ಯುದ್ಧಗಳು, ಅನಿಶ್ಚಿತತೆ ಹಾಗೂ ಪೂರೈಕೆ ಸರಪಳಿಯ ಸಮಸ್ಯೆಗಳ ನಡುವೆಯೂ ಭಾರತ ವೇಗವಾಗಿ ಮುನ್ನಡೆಯುತ್ತಿದೆ ಎಂದು ಹೇಳಿದ್ದಾರೆ. ಈ ಬೆಳವಣಿಗೆಯ ವೇಗವನ್ನು ಮುಂದುವರಿಸಲು ಪ್ರತಿಯೊಬ್ಬ ಭಾರತೀಯನೂ ದೇಶೀಯ ಉತ್ಪನ್ನ ಮತ್ತು ಸೇವೆಗಳಿಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದ್ದಾರೆ.
PM Narendra Modi:ಚಿನ್ನ ಖರೀದಿಯ ಮೇಲೆ ಏಕೆ ಕಣ್ಣು?
ಭಾರತದಲ್ಲಿ ಚಿನ್ನಕ್ಕೆ ಅಪಾರ ಬೇಡಿಕೆಯಿದೆ. ಮದುವೆ, ಹಬ್ಬ, ಧಾರ್ಮಿಕ ಕಾರ್ಯಕ್ರಮ ಹಾಗೂ ಹೂಡಿಕೆಯ ಉದ್ದೇಶದಿಂದ ಕೋಟ್ಯಂತರ ಜನರು ಚಿನ್ನ ಖರೀದಿಸುತ್ತಾರೆ. ಆದರೆ ದೇಶದ ಚಿನ್ನದ ಅಗತ್ಯದ ಬಹುಪಾಲು ಆಮದು ಮೂಲಕವೇ ಪೂರೈಕೆಯಾಗುತ್ತದೆ. ಅಂದರೆ, ದೇಶದಲ್ಲಿ ಚಿನ್ನದ ಖರೀದಿ ಹೆಚ್ಚಾದಷ್ಟೂ ವಿದೇಶಗಳಿಗೆ ಹೆಚ್ಚಿನ ಪ್ರಮಾಣದ ಹಣ ಪಾವತಿಸಬೇಕಾಗುತ್ತದೆ. ಇದು ದೇಶದ ವಿದೇಶಿ ವಿನಿಮಯದ ಮೇಲೆ ಒತ್ತಡ ಹೆಚ್ಚಿಸಬಹುದು.
ಹೀಗಾಗಿ ಮೋದಿ ಅವರ ಸಂದೇಶದ ಅರ್ಥ ಚಿನ್ನವನ್ನು ಸಂಪೂರ್ಣವಾಗಿ ಖರೀದಿಸಬೇಡಿ ಎಂಬುದಲ್ಲ. ಅಗತ್ಯವಿಲ್ಲದ ಖರೀದಿಯನ್ನು ಸ್ವಲ್ಪ ಕಾಲ ಮುಂದೂಡಿದರೆ ದೇಶದ ಆಮದು ವೆಚ್ಚವನ್ನು ನಿಯಂತ್ರಿಸಲು ನೆರವಾಗುತ್ತದೆ ಎಂಬುದು ಇದರ ಹಿಂದಿನ ಚಿಂತನೆಯಾಗಿದೆ.
ವಿದೇಶ ಪ್ರವಾಸಕ್ಕೆ 'ನೋ' ಹೇಳಿದ್ದು ಯಾಕೆ?
ವಿದೇಶ ಪ್ರವಾಸ ಎಂದರೆ ಭಾರತೀಯರ ಹಣದ ದೊಡ್ಡ ಮೊತ್ತ ದೇಶದ ಹೊರಗೆ ಖರ್ಚಾಗುತ್ತದೆ. ವಿಮಾನ ಟಿಕೆಟ್‌ನಿಂದ ಹಿಡಿದು ಹೋಟೆಲ್, ಆಹಾರ, ಪ್ರವಾಸ ಹಾಗೂ ಇತರ ಸೇವೆಗಳವರೆಗೆ ವಿದೇಶದಲ್ಲೇ ವೆಚ್ಚವಾಗುತ್ತದೆ.
ಮದುವೆಯನ್ನು ವಿದೇಶದಲ್ಲಿ ಆಯೋಜಿಸಿದರೆ ಈ ವೆಚ್ಚ ಇನ್ನೂ ದೊಡ್ಡದಾಗಿರುತ್ತದೆ. ಬದಲಾಗಿ ಭಾರತದಲ್ಲೇ ಪ್ರವಾಸ ಮಾಡುವುದು ಅಥವಾ ಮದುವೆ ಆಯೋಜಿಸುವುದರಿಂದ ದೇಶೀಯ ಪ್ರವಾಸೋದ್ಯಮ, ಹೋಟೆಲ್ ಉದ್ಯಮ, ವ್ಯಾಪಾರಿಗಳು ಹಾಗೂ ಸೇವಾ ವಲಯಕ್ಕೆ ಲಾಭವಾಗುತ್ತದೆ. ಹೀಗಾಗಿ ಮೋದಿ ಅವರ ಸಂದೇಶದಲ್ಲಿ "ದೇಶದ ಹಣ ಸಾಧ್ಯವಾದಷ್ಟು ದೇಶದ ಆರ್ಥಿಕತೆಯಲ್ಲೇ ಚಲಾವಣೆಯಾಗಲಿ"ಎಂಬ ಸ್ವದೇಶಿ ಚಿಂತನೆ ಪ್ರಮುಖವಾಗಿದೆ.
GDP ಶೇ.7.8ರಷ್ಟು ಇದ್ದರೂ ಈ ಎಚ್ಚರಿಕೆ ಏಕೆ?
GDP ಬೆಳವಣಿಗೆ ಉತ್ತಮವಾಗಿರುವುದು ದೇಶದ ಆರ್ಥಿಕತೆ ಬಲವಾಗಿರುವ ಸಂಕೇತ. ಆದರೆ ಆರ್ಥಿಕ ಬೆಳವಣಿಗೆ ಉತ್ತಮವಾಗಿದೆ ಎಂದ ಮಾತ್ರಕ್ಕೆ ಜಾಗತಿಕ ಅಪಾಯಗಳು ಇಲ್ಲ ಎಂದು ಅರ್ಥವಲ್ಲ. ಯುದ್ಧ, ಕಚ್ಚಾ ತೈಲ ಬೆಲೆ ಏರಿಕೆ, ಜಾಗತಿಕ ವ್ಯಾಪಾರದಲ್ಲಿನ ವ್ಯತ್ಯಯ ಹಾಗೂ ಆಮದು ವೆಚ್ಚದಂತಹ ಸಮಸ್ಯೆಗಳು ಯಾವುದೇ ಸಮಯದಲ್ಲಿ ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದು.
ಹೀಗಾಗಿ ಈಗಿನಿಂದಲೇ ಅನಗತ್ಯ ವಿದೇಶಿ ವೆಚ್ಚವನ್ನು ನಿಯಂತ್ರಿಸಿ, ದೇಶೀಯ ಉತ್ಪನ್ನ ಮತ್ತು ಸೇವೆಗಳಿಗೆ ಉತ್ತೇಜನ ನೀಡುವ ಮೂಲಕ ಆರ್ಥಿಕತೆಯನ್ನು ಮತ್ತಷ್ಟು ಸ್ವಾವಲಂಬಿಯನ್ನಾಗಿಸುವುದು ಮೋದಿ ಅವರ ಉದ್ದೇಶವಾಗಿದೆ.
ಚಿನ್ನದ ಅನಗತ್ಯ ಖರೀದಿ ಮತ್ತು ವಿದೇಶಿ ಖರ್ಚುಗಳನ್ನು ಕಡಿಮೆ ಮಾಡುವಂತೆ ಪ್ರಧಾನಿ ಮೋದಿ ಈ ಹಿಂದೆಯೂ ಮನವಿ ಮಾಡಿದ್ದರು. ಇದೀಗ ಮತ್ತೆ ಅದೇ ಸಂದೇಶವನ್ನು ಪುನರುಚ್ಚರಿಸುವ ಮೂಲಕ'ಸ್ವದೇಶಿ, ಆತ್ಮನಿರ್ಭರ ಭಾರತ' ಅಭಿಯಾನಕ್ಕೆ ಹೊಸ ಒತ್ತು ನೀಡಿದ್ದಾರೆ.
ಪ್ರಧಾನಿಯ ಮನವಿ ಸಾಮಾನ್ಯ ಜನರ ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರುವುದಕ್ಕಲ್ಲ. ಬದಲಾಗಿ, ಜಾಗತಿಕ ಆರ್ಥಿಕ ಅನಿಶ್ಚಿತತೆಯ ಸಂದರ್ಭದಲ್ಲಿ ಸಾಧ್ಯವಾದಷ್ಟು ದೇಶೀಯ ಆರ್ಥಿಕತೆಗೆ ಬೆಂಬಲ ನೀಡಬೇಕು ಎಂಬ ಕರೆಗೆ ಇದು ಉದಾಹರಣೆ.
ಚಿನ್ನ ಬೇಕಾದರೆ ಮಾತ್ರ ಖರೀದಿಸಿ, ವಿದೇಶ ಪ್ರವಾಸ ಅನಿವಾರ್ಯವಲ್ಲದಿದ್ದರೆ ಮುಂದೂಡಿ, ಮದುವೆ ಸೇರಿದಂತೆ ದೊಡ್ಡ ಖರ್ಚುಗಳನ್ನು ಸಾಧ್ಯವಾದಷ್ಟು ದೇಶದಲ್ಲೇ ಮಾಡಿ. ಇದರ ಮೂಲಕ ಭಾರತದ ಹಣ, ಭಾರತದ ಆರ್ಥಿಕತೆಯಲ್ಲೇ ಉಳಿಯಲಿ ಎಂಬುದೇ ಮೋದಿ ಅವರ ಹೊಸ 'ಸ್ವದೇಶಿ' ಸಂದೇಶದ ಮೂಲ ಆಶಯವಾಗಿದೆ.


Click it and Unblock the Notifications
