ಕನ್ಯಾಕುಮಾರಿ ತಲುಪಿದ ಪ್ರಧಾನಿ ನರೇಂದ್ರ ಮೋದಿ; 2 ದಿನ ಧ್ಯಾನ ಮಾಡಲು ಸಿದ್ಧತೆ
ಪ್ರಧಾನಿ ನರೇಂದ್ರ ಮೋದಿ ಅವರು ಕನ್ಯಾಕುಮಾರಿ ತಲುಪಿದ್ದು, ಗುರುವಾರ ಸಂಜೆಯಿಂದ ಶನಿವಾರ ಸಂಜೆಯವರೆಗೆ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಧ್ಯಾನ ಮಾಡಲಿದ್ದಾರೆ.
1892 ರಲ್ಲಿ ಸ್ವಾಮಿ ಸ್ವಾಮಿ ವಿವೇಕಾನಂದರು ಭಾರತದ ಭವಿಷ್ಯದ ಬಗ್ಗೆ ಸ್ಪಷ್ಟವಾದ ದೃಷ್ಟಿಕೋನವನ್ನು ಪಡೆಯಲು ಧ್ಯಾನ ಮಾಡಿದ ಧ್ಯಾನ ಮಂಟಪದಲ್ಲೇ ಪ್ರಧಾನಿ ಮೋದಿ ಧ್ಯಾನ ಮಾಡಲಿದ್ದಾರೆ.
ಕನ್ಯಾಕುಮಾರಿ ಹಿಂದೂ ಮಹಾಸಾಗರ, ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದ ಸಂಗಮ ಸ್ಥಳವಾಗಿದೆ ಮತ್ತು ರಾಷ್ಟ್ರೀಯ ಏಕತೆಯ ಸಂಕೇತವಾಗಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಮೋದಿ ಧ್ಯಾನಕ್ಕೆ ಭಾರಿ ಭದ್ರತೆ
ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸ್ಮಾರಕದ ಸುತ್ತಲೂ 2,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕರಾವಳಿ ಕಾವಲು ಪಡೆ ಮತ್ತು ನೌಕಾಪಡೆ ಕೂಡ ಭದ್ರತೆಗೆ ನಿಯೋಜಿಸಲಾಗಿದೆ.
ಲೋಕಸಭೆ ಚುನಾವಣೆಯ ಕೊನೆಯ ಹಂತದ ಪ್ರಚಾರವು ಶುಕ್ರವಾರ ಸಂಜೆ 5 ಗಂಟೆಗೆ ಕೊನೆಗೊಳ್ಳಲಿದೆ. 2019 ರ ಚುನಾವಣೆಯ ಕೊನೆಯ ಹಂತದ ಮೊದಲು ಕೂಡ ನರೇಂದ್ರ ಮೋದಿ ಕೇದಾರನಾಥದ ಗುಹೆಯಲ್ಲಿ ಧ್ಯಾನ ಮಾಡಿದ್ದರು.
ರಾಜಕೀಯ ಪರ-ವಿರೋಧ
ಪ್ರಧಾನಿ ನರೇಂದ್ರ ಮೋದಿ ಧ್ಯಾನ ಮಾಡುವ ವಿಚಾರ ಈಗ ರಾಜಕೀಯ ಚರ್ಚೆಗೂ ಕಾರಣವಾಗಿದೆ. ನರೇಂದ್ರ ಮೋದಿ ಧ್ಯಾನ ಮಾಡುತ್ತಿರುವ ದೃಶ್ಯಗಳನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮನವಿ ಮಾಡಿದೆ.
ಇದು ಮಾದರಿ ಸಂಹಿತೆಯನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಕಾಂಗ್ರೆಸ್ ನಾಯಕರಾದ ರಣದೀಪ್ ಸುರ್ಜೇವಾಲಾ, ಅಭಿಷೇಕ್ ಸಿಂಘ್ವಿ ಮತ್ತು ಸೈಯದ್ ನಸೀರ್ ಹುಸೇನ್ ಅವರ ನಿಯೋಗವು ಚುನಾವಣಾ ಆಯೋಗಕ್ಕೆ ಮನವಿ ಪತ್ರ ಸಲ್ಲಿಸಿದೆ.
ಸಿಪಿಎಂನ ತಮಿಳುನಾಡು ಘಟಕವು ಪ್ರಧಾನ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದು, ಪ್ರಧಾನಿ ಮೋದಿ ಧ್ಯಾನ ಮಾಡುತ್ತಿರುವ ದೃಶ್ಯಗಳನ್ನು ಪ್ರಸಾರ ಮಾಡುವುದನ್ನು ನಿಷೇಧಿಸಬೇಕು, ಧ್ಯಾನ ಮಾಡುವುದನ್ನು ಪ್ರಸಾರ ಮಾಡಿದರೆ, ಅವರ ಪರಿಕಲ್ಪನೆಯೇ ವಿಫಲವಾಗುತ್ತದೆ. ಧ್ಯಾನ ಎನ್ನುವುದು ಖಾಸಗಿ ವಿಷಯ ಎಂದು ಹೇಳಿದೆ.












Click it and Unblock the Notifications