Narendra Modi: ಭಾರತ ಈಗ 'ಹೊಸ ಸಾಧ್ಯತೆಗಳ ಕೇಂದ್ರಬಿಂದು'!
ನವದೆಹಲಿ: ನವ ಭಾರತ ಆರ್ಥಿಕವಾಗಿ ಮಾತ್ರವಲ್ಲ, ವಿವಿಧ ಕ್ಷೇತ್ರಗಳಲ್ಲೂ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಹೀಗಾಗಿಯೇ ಜಗತ್ತಿನ ಪ್ರತಿಯೊಂದು ದೇಶಕ್ಕು ಭಾರತದ ಸ್ನೇಹ ಒಂದಲ್ಲ ಒಂದು ರೀತಿಯಲ್ಲಿ ಅನಿವಾರ್ಯ. ಇದೇ ವಿಚಾರವನ್ನು ಪ್ರಧಾನಿ ಮೋದಿ ಕೂಡ ಇಂದು ಪ್ರಸ್ತಾಪಿಸಿದ್ದು, ಜಗತ್ತು ಭಾರತವನ್ನ 'ಹೊಸ ಸಾಧ್ಯತೆಗಳ ಕೇಂದ್ರಬಿಂದುವಾಗಿ' ನೋಡುತ್ತಿದೆ ಎಂದಿದ್ದಾರೆ.
ಹೌದು, 'ಅಖಿಲ ಭಾರತೀಯ ಶಿಕ್ಷಾ ಸಮಾಗಮ' ಉದ್ಘಾಟಿಸಿ ಮಾತನಾಡಿದ ಪಿಎಂ ಮೋದಿ, ಐಐಟಿ ಅಂದರೆ ಭಾರತೀಯ ತಂತ್ರಜ್ಞಾನ ಸಂಸ್ಥೆ ಕ್ಯಾಂಪಸ್‌ಗಳನ್ನು ವಿದೇಶಗಳಲ್ಲಿ ಆರಂಭಿಸಿ ಎಂದು ಹಲವು ದೇಶಗಳು ಕೇಂದ್ರ ಸರ್ಕಾರವನ್ನು ಸಂಪರ್ಕಿಸುತ್ತಿವೆ ಎಂದಿದ್ದಾರೆ. ಆ ಮೂಲಕ ಹೊಸ ಸಾಧ್ಯತೆಗಳ ಬಯಸಿ ಇಡೀ ಜಗತ್ತು ಭಾರತದತ್ತ ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜೊತೆಗೆ ಈಗಾಗಲೇ ತಾಂಜಾನಿಯಾ ಹಾಗೂ ಅಬುಧಾಬಿಯಲ್ಲಿ ಎರಡು ಹೊಸ ಐಐಟಿ ಕ್ಯಾಂಪಸ್ ಪ್ರಾರಂಭಿಸಿಲು ಯೋಜನೆ ಕೈಗೊಳ್ಳಲಾಗಿದೆ ಎಂದಿದ್ದಾರೆ ಪ್ರಧಾನಿ.

ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಕ್ರಾಂತಿ
ಅಲ್ಲದೆ ಈ ಸಂದರ್ಭದಲ್ಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿಚಾರವನ್ನೂ ಪಿಎಂ ಮೋದಿ ಪ್ರಸ್ತಾಪಿಸಿದರು. 'ರಾಷ್ಟ್ರೀಯ ಶಿಕ್ಷಣ ನೀತಿ ಅಂದ್ರೆ ಎನ್‌ಇಪಿ ಶುರುವಾಗಿ ಇಂದಿಗೆ 3 ವರ್ಷ ಕಳೆದಿದೆ. ಯುವಜನತೆ ಅವರ ಪ್ರತಿಭೆಗಿಂತ ಅವರ ಭಾಷೆ ಆಧಾರದಲ್ಲಿ ನಿರ್ಣಯಿಸುವುದು ದೊಡ್ಡ ಅನ್ಯಾಯ. ಎನ್‌ಇಪಿ ಭಾರತವನ್ನ ಸಂಶೋಧನೆ ಹಾಗೂ ನಾವೀನ್ಯತೆ ಕೇಂದ್ರವಾಗಿ ಮಾಡುವ ಗುರಿ ಹೊಂದಿದೆ' ಎಂದು ಮಾಹಿತಿ ನೀಡಿದರು. ಹಾಗೇ ರಾಷ್ಟ್ರೀಯ ಶಿಕ್ಷಣ ನೀತಿ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆ & ಭವಿಷ್ಯದ ತಂತ್ರಜ್ಞಾನಕ್ಕೆ ಸಮಾನ ಪ್ರಾಮುಖ್ಯತೆ ನೀಡಿದೆ ಎಂದರು. ಹಾಗೇ ವಿಪತ್ತು ನಿರ್ವಹಣೆ, ಹವಾಮಾನ ಬದಲಾವಣೆ ಮತ್ತು ಇಂಧನ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಪ್ರಧಾನಿ ಮೋದಿ ಶಿಕ್ಷಕರಿಗೆ ಸಲಹೆ ನೀಡಿದರು.

3ನೇ ಬಾರಿಗೆ ಗೆದ್ದರೆ ಭಾರತ ಬಲಿಷ್ಠ!
ಮೊನ್ನೆಯಷ್ಟೇ ಪಿಎಂ ನರೇಂದ್ರ ಮೋದಿ 2024ರ ಲೋಕಸಭೆ ಚುನಾವಣೆಗೆ ಮುನ್ನ ಮತ್ತೊಮ್ಮೆ ಅಭಿವೃದ್ಧಿಯ ಮಂತ್ರ ಪಠಿಸಿದ್ದರು. ನನ್ನ 3ನೇ ಅವಧಿಯಲ್ಲಿ ಭಾರತವು ಪ್ರಪಂಚದ ಮೂರು ಅತಿದೊಡ್ಡ ಆರ್ಥಿಕ ಶಕ್ತಿಗಳಲ್ಲಿ ಒಂದಾಗಲಿದ್ದು, ದೊಡ್ಡ ಹೆಸರು ಪಡೆಯುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ದೆಹಲಿ ಪ್ರಗತಿ ಮೈದಾನದಲ್ಲಿ ನಡೆದ ಜಾಗತಿಕ ವಸ್ತು ಪ್ರದರ್ಶನ ಸಮಾರಂಭದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ವಿಪಕ್ಷಗಳ ವಿರುದ್ಧ ಅಸ್ತ್ರವನ್ನ ಪ್ರಯೋಗಿಸಿದ್ದರು. ಇದೀಗ ಭಾರತವನ್ನು ಜಗತ್ತು 'ಹೊಸ ಸಾಧ್ಯತೆಗಳ ಕೇಂದ್ರಬಿಂದು'ವಾಗಿ ನೋಡುತ್ತಿದೆ ಎನ್ನುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.
ಒಟ್ನಲ್ಲಿ 2014ರಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದಿದ್ದ ಪಿಎಂ ಮೋದಿ ನೇತೃತ್ವದ ಸರ್ಕಾರ 2019ರಲ್ಲಿ ಹೊಸ ಇತಿಹಾಸ ನಿರ್ಮಿಸಿತ್ತು. ದಾಖಲೆ ಪ್ರಮಾಣದಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದು ಸರ್ಕಾರ ರಚಿಸಿತ್ತು. ಆದರೆ 2024ರ ಚುನಾವಣೆ ಒಂದಷ್ಟು ಟಫ್ ಅಂತಾ ಹೇಳಲಾಗುತ್ತಿರುವ ಹೊತ್ತಲ್ಲೇ ಬಿಜೆಪಿ ಮೈಕೊಡವಿ ನಿಂತಿದೆ. ಅದ್ರಲ್ಲೂ ಪ್ರಧಾನಿ ಮೋದಿ ವಿಪಕ್ಷಗಳ ವಿರುದ್ಧ ಈ ಬಾರಿ ಅಭಿವೃದ್ಧಿ ಅಸ್ತ್ರ ಪ್ರಯೋಗ ಮಾಡುತ್ತಿದ್ದಾರೆ. ಅತ್ತ ವಿಪಕ್ಷಗಳು ಕೂಡ ಎಲೆಕ್ಷನ್‌ಗೆ ಸಿದ್ಧತೆ ಆರಂಭಸಿದ್ದು ಗೆಲುವಿಗಾಗಿ ಜಿದ್ದಾಜಿದ್ದಿ ಜೋರಾಗಿದೆ.












Click it and Unblock the Notifications