Jammu & Kashmir: ಕಾಶ್ಮೀರದಲ್ಲಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ
ಜಮ್ಮು ಮತ್ತು ಕಾಶ್ಮೀರ ಚುನಾವಣಾ ಅಖಾಡಕ್ಕೆ ಪ್ರಧಾನಿ ನರೇಂದ್ರ ಮೋದಿ ಧುಮುಕಿದ್ದು, ಶನಿವಾರ ಅಬ್ಬರದ ಪ್ರಚಾರ ನಡೆಸಿದರು. ಉಧಂಪುರದ ದೋಡಾದಲ್ಲಿ ಬಿಜೆಪಿ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿಯ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿಯಿಂದ ಮಾತ್ರ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯ ಸ್ಥಾನಮಾನ ಸ್ಥಾನಮಾನ ನೀಡಲು ಸಾಧ್ಯ ಎಂದು ಹೇಳಿದರು.
ಕುಟುಂಬ ರಾಜಕೀಯದ ವಿರುದ್ಧ ಟೀಕಿಸಿದ ಅವರು, ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಮೂರು ರಾಜಕೀಯ ಕುಟುಂಬಗಳ ಪಕ್ಷ ಎಂದರು. ತಮ್ಮ ಹಿತಾಸಕ್ತಿಯನ್ನು ಕಾಪಾಡಲು ಭ್ರಷ್ಟಾಚಾರ, ಪ್ರತ್ಯೇಕತಾವಾದ ಮತ್ತು ಭಯೋತ್ಪಾದನೆಗೆ ಉತ್ತೇಜನ ನೀಡುವ ಮೂಲಕ ಮೂರು ಪಕ್ಷಗಳು ಜಮ್ಮು ಮತ್ತು ಕಾಶ್ಮೀರವನ್ನು ನಾಶಪಡಿಸಿವೆ ಎಂದು ಆರೋಪಿಸಿದ ಅವರು, ಕೇಂದ್ರಾಡಳಿತ ಪ್ರದೇಶಕ್ಕೆ ಸಂಪೂರ್ಣ ರಾಜ್ಯ ಸ್ಥಾನಮಾನವನ್ನು ಬಿಜೆಪಿ ಸರ್ಕಾರ ನೀಡಲಿದೆ ಎಂದು ಭರವಸೆ ನೀಡಿದರು.

ಈ ಮೂರು ಪಕ್ಷಗಳು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ 370 ನೇ ವಿಧಿಯನ್ನು ಮರುಸ್ಥಾಪಿಸುವುದಾಗಿ ಬಯಸುತ್ತಿವೆ. ಇದು ಸಮಾಜದ ಹಲವಾರು ವರ್ಗಗಳನ್ನು ಮೀಸಲಾತಿ ಮತ್ತು ಕೇಂದ್ರದ ಕಲ್ಯಾಣ ಯೋಜನೆಗಳಂತಹ ಪ್ರಯೋಜನಗಳಿಂದ ವಂಚಿತಗೊಳಿಸಿದೆ ಎಂದು ಹೇಳಿದ ಅವರು, ವಿಪಕ್ಷಗಳ ಕನಸು ನನಸಾಗಲು ಬಿಡಲ್ಲ ಎಂದರು.
ಈ ವಿಧಾನಸಭಾ ಚುನಾವಣೆ ಮೂರು ರಾಜಕೀಯ ಕುಟುಂಬಗಳು ಮತ್ತು ಜಮ್ಮು ಮತ್ತು ಕಾಶ್ಮೀರದ ಯುವಕರ ನಡುವೆ ಎಂದ ಪ್ರಧಾನಿ ಮೋದಿ, ಒಂದೆಡೆ ಮೂರು ಕುಟುಂಬಗಳು ಮತ್ತೊಂದೆಡೆ ದೊಡ್ಡ ದೊಡ್ಡ ಕನಸುಗಳೊಂದಿಗೆ ಹೊರಡುವ ಯುವ ಜನತೆ ಇದೆ. ಮೂರು ಕುಟುಂಬಗಳು ದಶಕಗಳಿಂದ ರಾಜ್ಯವನ್ನು ನಾಶಮಾಡಿವೆ ಎಂದರು.
2019 ರ ಆಗಸ್ಟ್‌ನಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸುವ ಮೊದಲು ಜಮ್ಮು ಮತ್ತು ಕಾಶ್ಮೀರ ಎದುರಿಸಿದ ಸಮಸ್ಯೆಗಳಿಗೆ ಈ ರಾಜವಂಶಗಳು ಮಾಡಿದ ತಪ್ಪುಗಳೇ ಕಾರಣ ಎಂದು ಆರೋಪಿಸಿದರು.
ಮೂರು ಕುಟುಂಬದ ಪಕ್ಷಗಳು ಭ್ರಷ್ಟಾಚಾರ ಮತ್ತು ಭೂಗಳ್ಳರಿಗೆ ಬೆಂಬಲ ನೀಡಿದ್ದವು, ಮತದಾರರ ಸಣ್ಣ ಅಗತ್ಯಗಳನ್ನು ಸಹ ಪೂರೈಸಲು ಕೂಡ ಕಾಯುವಂತೆ ಮಾಡಲಾಗಿದೆ. ಮೂರು ಕುಟುಂಬಗಳ ಆಪ್ತರಿಗೆ, ಬೆಂಬಲಿಗರಿಗೆ ಮಾತ್ರ ಸರ್ಕಾರಿ ಕೆಲಸ ನೀಡಲಾಗಿದೆ. ಪ್ರತ್ಯೇಕತಾವಾದ ಮತ್ತು ಭಯೋತ್ಪಾದನೆಗೆ ವೇದಿಕೆಯನ್ನು ಸಿದ್ದಮಾಡಿದ್ದೇ ಆ ಪಕ್ಷಗಳು, ಅವರು ಮಾಡಿದ ತಪ್ಪಿನಿಂದ ಸಾವಿರಾರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಎಂದರು.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡಲು ಬಿಜೆಪಿ ಕೆಲಸ ಮಾಡುತ್ತದೆ. ತಮ್ಮ ಸ್ವಾರ್ಥಕ್ಕಾಗಿ ನಿಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವವರ ಬಗ್ಗೆ ನೀವು ಎಚ್ಚರಿಕೆಯಿಂದ ಇರಬೇಕು ಎಂದು ಜನರಿಗೆ ಕರೆ ನೀಡಿದರು.
ಆರ್ಟಿಕಲ್ 370 ರ ರದ್ದಾದ ಬಳಿಕ ಕಣಿವೆ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ಲಕ್ಷಗಟ್ಟಲೆ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ, ಹೊಸ ಹೋಟೆಲ್‌ಗಳು ನಿರ್ಮಾಣವಾಗುತ್ತಿರುವುದೇ ಇದಕ್ಕೆ ಸಾಕ್ಷಿ. ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗುತ್ತಿದೆ, ಮಹಿಳೆಯರು ಸರ್ಕಾರಿ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ ಎಂದರು. ಶೀಘ್ರದಲ್ಲೇ ಶ್ರೀನಗರದವರೆಗೆ ರೈಲು ಮಾರ್ಗವನ್ನು ವಿಸ್ತರಿಸಲಾಗುವುದು ಎಂದು ಭರವಸೆ ನೀಡಿದರು.












Click it and Unblock the Notifications