PM Modi: ಮತ್ತೆ ತಮಿಳುನಾಡು ಹೆಸರು ಪ್ರಸ್ತಾಪಿಸಿದ ಪ್ರಧಾನಿ ಮೋದಿ!
ನವದೆಹಲಿ: ಪ್ರಧಾನಿ ಮೋದಿ ಮತ್ತು ವಿರೋಧ ಪಕ್ಷಗಳ ನಡುವೆ ಇಂದು ದೊಡ್ಡ ಯುದ್ಧ ನಡೆದು ಹೋಗಿದೆ. ಹೀಗಾಗಿ ಲೋಕಸಭೆಯಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿತ್ತು. ಕೆಲ ದಿನಗಳಿಂದ ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ವಿಪಕ್ಷಗಳ ನಾಯಕರು ತೀವ್ರ ವಾಗ್ದಾಳಿ ನಡೆಸುತ್ತಿದ್ದರು. ಈ ಆರೋಪಗಳಿಗೆ ಉತ್ತರಿಸಿದ ಪ್ರಧಾನಿ, ಮತ್ತೊಮ್ಮೆ ತಮ್ಮ ಭಾಷಣದಲ್ಲಿ ತಮಿಳುನಾಡನ್ನ ಪ್ರಸ್ತಾಪಿಸಿದರು. ಯಾಕೆ ಅಂದ್ರಾ? ಮುಂದೆ ಓದಿ.
ಹೌದು, ಸಂಸತ್ ಮುಂಗಾರು ಅಧಿವೇಶನ ಭಾರಿ ಕುತೂಹಲ ಕೆರಳಿಸಿತ್ತು. ಅದರಲ್ಲೂ ಈ ಬಾರಿ ಮಣಿಪುರ ವಿಚಾರ ಹಿಡಿದು ವಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಘೋರ ಯುದ್ಧ ಸಾರಿದ್ದವು. ಆದರೆ ಪ್ರಧಾನಿ ಮೋದಿ ಕಳೆದ ಕೆಲವು ದಿನಗಳಿಂದ ಕಲಾಪಕ್ಕೆ ಬಂದಿರಲಿಲ್ಲ. ಇಂದು ಪ್ರಧಾನಿ ಮೋದಿ ಹಾಜರಾಗಿ, ವಿರೋಧ ಪಕ್ಷಗಳ ನಾಯಕರ ಆರೋಪಕ್ಕೆ ಉತ್ತರ ನೀಡಿದ್ದಾರೆ. ಆದರೆ ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ತಮಿಳುನಾಡಿನ ವಿಚಾರ ಹೇಳುತ್ತಾ ಕೈ ಪಡೆಗೆ ಟಾಂಗ್ ಕೊಟ್ಟರು.

ಕಾಂಗ್ರೆಸ್ ಮೇಲೆ ವಿಶ್ವಾಸವೇ ಇಲ್ಲ!
ಇನ್ನು ತಮ್ಮ ಭಾಷಣದಲ್ಲಿ ಕಾಂಗ್ರೆಸ್ ವಿರುದ್ಧ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧವೇ ನೇರವಾಗಿ ವಾಗ್ದಾಳಿ ನಡೆಸಿದರು ಪಿಎಂ ಮೋದಿ. ವಿಪಕ್ಷಗಳ ಅವಿಶ್ವಾಸ ನಿರ್ಣಯದ ಬಗ್ಗೆ ಉತ್ತರ ಕೊಟ್ಟ ಪ್ರಧಾನಿ, ಕಾಂಗ್ರೆಸ್ & ಪ್ರತಿಪಕ್ಷಗಳ ನಾಯಕರ ವಿರುದ್ಧ ಹರಿಹಾಯ್ದರು. ಹಾಗೆ ಯುಪಿಎ ಈಗ ಇಂಡಿಯಾ ಮೈತ್ರಿಕೂಟವಾಗಿ ಬದಲಾದ ಬಗ್ಗೆ ವಾಗ್ದಾಳಿ ನಡೆಸಿದ್ರು. ಅದೇ ಸಂದರ್ಭದಲ್ಲಿ ತಮಿಳುನಾಡಿನ ವಿಚಾರ ಪ್ರಸ್ತಾಪಿಸಿದರು.
ಕಾಂಗ್ರೆಸ್‌ಗೆ ವಾಸ್ತವವೇ ಅರ್ಥವಾಗುತ್ತಿಲ್ಲ. ಕಾಂಗ್ರೆಸ್ ತನ್ನ ಅಹಂಕಾರದಿಂದ ಕುರುಡಾಗಿದೆ ಜನರಿಗೆ ಆ ಪಕ್ಷದ ಬಗ್ಗೆ ವಿಶ್ವಾಸವೇ ಇಲ್ಲ. ತಮಿಳುನಾಡು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ ಬಿಹಾರ, ತ್ರಿಪುರ, ಒಡಿಶಾ ರಾಜ್ಯಗಳಲ್ಲಿ ಕಾಂಗ್ರೆಸ್ ಮೇಲೆ ಜನರಿಗೆ ವಿಶ್ವಾಸ ಇಲ್ಲ ಎಂದು ತಿರುಗೇಟು ನೀಡಿದ್ದಾರೆ. ಈ ಮೂಲಕ ವಿಪಕ್ಷಗಳು ಹಾಗೂ ಆಡಳಿತ ಪಕ್ಷದ ನಡುವೆ ತಿಕ್ಕಾಟ ಮತ್ತಷ್ಟು ಜೋರಾಗಿದೆ. ಆದರೆ ಇದೇ ಹೊತ್ತಲ್ಲಿ ಮತ್ತೆ ಒಂದು ಅನುಮಾನ ಕಾಡುತ್ತಿದ್ದು, ಪ್ರಧಾನಿ ಮೋದಿ ಅವರು ತಮಿಳುನಾಡಿನಿಂದ ಸ್ಪರ್ಧೆ ಮಾಡಬಹುದು ಎಂಬ ಊಹಾಪೋಹಕ್ಕೆ ಮತ್ತೆ ಪುಷ್ಠಿ ಸಿಕ್ಕಂತಾಗಿದೆ.

ತಮಿಳುನಾಡಿಂದ ಪ್ರಧಾನಿ ಸ್ಪರ್ಧೆ ಫಿಕ್ಸ್?
ಹೌದು, ಕಳೆದ ಕೆಲ ತಿಂಗಳಿಂದ ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಆದರೆ ಬಿಜೆಪಿ ಈ ಬಗ್ಗೆ ಉತ್ತರಿಸಿ, ಸ್ಪರ್ಧಿಸಲ್ಲ ಎಂದಿತ್ತು. ಆದ್ರೆ ಈಗ ಅಧಿವೇಶನದಲ್ಲಿ ಪ್ರಧಾನಿ ಮತ್ತೊಮ್ಮೆ ತಮಿಳುನಾಡಿನ ಹೆಸರು ಪ್ರಸ್ತಾಪ ಮಾಡಿದ ಹಿನ್ನೆಲೆಯಲ್ಲಿ ಮತ್ತೆ ಈ ಬಗ್ಗೆ ಚರ್ಚೆ ಶುರು ಆಗಿದೆ. ಒಟ್ನಲ್ಲಿ ಈ ಎಲ್ಲಾ ಬೆಳವಣಿಗೆ ನೋಡುತ್ತಿದ್ದರೆ 2024ರ ಲೋಕಸಭೆ ಚುನಾವಣೆಗೆ ಕಾವು ಮತ್ತಷ್ಟು ಹೆಚ್ಚುವುದು ಪಕ್ಕಾ. ಚುನಾವಣೆಗೆ ಇನ್ನು ಹಲವು ತಿಂಗಳು ಬಾಕಿ ಇರುವ ಸಮಯದಲ್ಲೇ ವಿಪಕ್ಷ ಹಾಗೂ ಆಡಳಿತ ಪಕ್ಷದ ನಡುವೆ ಕಿಚ್ಚು ಹೊತ್ತಿದೆ. ಇನ್ನು ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ ಪರಿಸ್ಥಿತಿ ಮತ್ತಷ್ಟು ಕಾವು ಪಡೆಯುವುದು ಗ್ಯಾರಂಟಿ.
ಇನ್ನು ಇದೇ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರ ಭಾಷಣವನ್ನ ಪಿಎಂ ಮೋದಿ ಉಲ್ಲೇಖಿಸಿದರು. ಸಚಿವೆ ನಿರ್ಮಲಾ ಸೀತಾರಾಮನ್ ದೇಶದ ಬೆಳವಣಿಗೆ ಮತ್ತು ಪ್ರಗತಿಯ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ. ಹಾಗೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಂದರೆ ಎಚ್‌ಎಎಲ್ ಬಗ್ಗೆ ಮಾತನಾಡಿದ್ದಾರೆ. ಆದರೆ ಎಚ್‌ಎಎಲ್ ನಾಶವಾಗುತ್ತೆ ಅಂತಾ ವಿಪಕ್ಷಗಳು ಈ ಹಿಂದೆ ಸುಳ್ಳು ಹೇಳಿಕೆ ನೀಡಿದ್ದವು ಎಂದು ಕುಟುಕಿದರು.












Click it and Unblock the Notifications