ಮೋದಿಯನ್ನು ಡಿಸ್ಟರ್ಬ್ ಮಾಡಿರುವ ಕರ್ನಾಟಕ ಚುನಾವಣೆ ಸೋಲು: ಪರಿಸ್ಥಿತಿ ತಿಳಿಯಲು ಬಿಜೆಪಿ ಸಿಎಂಗಳೊಂದಿಗೆ ಪಿಎಂ ಮಾತುಕತೆ
ನವದೆಹಲಿ, ಮೇ 29: ಕರ್ನಾಟಕದಲ್ಲಿ ಚುನಾವಣಾ ಸೋಲಿನ ನಂತರ ಪ್ರಧಾನಿ ಮೋದಿ ಬಿಜೆಪಿ ಆಡಳಿತವಿರುವ ರಾಜ್ಯದ ಮುಖ್ಯಮಂತ್ರಿಗಳ ಸಭೆ ನಡೆಸಿದ್ದಾರೆ. ಕರ್ನಾಟಕ ಸೋಲಿನ ಬಳಿಕ ನಡೆದ ತಮ್ಮ ಮೊದಲ ರಾಜಕೀಯ ಸಭೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಸುದೀರ್ಘ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ. ಭಾನುವಾರ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಮುಖ್ಯಮಂತ್ರಿಗಳೊಂದಿಗೆ ಅಭಿವೃದ್ಧಿ, ಆಡಳಿತದ ಹಾಗೂ ಅಜೆಂಡಾಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಹೊಸ ಸಂಸತ್ ಭವನವನ್ನು ಬಹಳ ಸಂಭ್ರಮದಿಂದ ಅನಾವರಣಗೊಳಿಸಿದ ನಂತರ, ಪ್ರಧಾನಿ ಮೋದಿ ಪಕ್ಷದ ಪ್ರಧಾನ ಕಚೇರಿಯನ್ನು ತಲುಪಿದರು. ಹಲವಾರು ಯೋಜನೆಗಳು ಮತ್ತು ಇತರ ವಿಷಯಗಳಲ್ಲಿ ತಮ್ಮ ಪಕ್ಷ ಆಡಳಿತದಲ್ಲಿರುವ ರಾಜ್ಯಗಳ ಕಾರ್ಯಕ್ಷಮತೆಯನ್ನು ಚರ್ಚಿಸಿದರು.

ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಆಯಾ ರಾಜ್ಯಗಳ ಸಂಸದರು ಸೇರಿದಂತೆ ಉತ್ತಮ ಆಡಳಿತ, ಅಭಿವೃದ್ಧಿ ಮತ್ತು ಬಡವರ ಕಲ್ಯಾಣ ಯೋಜನೆಗಳ ಪ್ರಗತಿಯ ಕುರಿತು ತಮ್ಮ ವರದಿ ಮಂಡಿಸಿದರು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
'ಬಡವರಿಗೆ ಕಲ್ಯಾಣ ಯೋಜನೆಗಳನ್ನು ಕೊಂಡೊಯ್ಯಲು ಸಂವಹನ ಮತ್ತು 'ಜನ-ಅಭಿಯಾನ'ದಂತಹ ವಿವಿಧ ಸುಲಭ ಸಂವಹನ ವಿಧಾನಗಳ ಮೂಲಕ ಈ ಯೋಜನೆಗಳ ಬಗ್ಗೆ ಅವರಿಗೆ ಅರಿವು ಮೂಡಿಸಲು ಪ್ರಧಾನ ಮಂತ್ರಿಗಳು (ಸಿಎಂಗಳು) ಹೇಳಿದರು' ಎಂದು ಬಿಜೆಪಿಯ ಹಿರಿಯ ಕಾರ್ಯಕಾರಿಯೊಬ್ಬರು 'ಇಂಡಿಯನ್ ಎಕ್ಸ್‌ಪ್ರೆಸ್'ಗೆ ಹೇಳಿದ್ದಾರೆ.

ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಅಜೆಂಡಾಗಳ ಚರ್ಚೆ ನಂತರ ನಡೆದ ಸಭೆಯಲ್ಲಿ, ಇತ್ತೀಚಿನ ಕರ್ನಾಟಕ ಸೋಲಿನ ಗಂಭೀರವಾಗಿ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಮುಂದಿನ ರಾಜಕೀಯ ಸನ್ನಿವೇಶಗಳ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯ ಸಿದ್ಧತೆಗಳ ಬಗ್ಗೆ ವ್ಯಾಪಕ ಚರ್ಚೆ ನಡೆಸಲಾಯಿತು ಎಂದು ಹೇಳಲಾಗುತ್ತಿದೆ.
ಮೇ 30 ರಿಂದ ಜೂನ್ 30 ರ ವರೆಗೆ ದೇಶದಾದ್ಯಂತ ಎಲ್ಲಾ ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಂತೆ ಒಂದು ತಿಂಗಳ ಕಾಲ ವಿಶೇಷ ಸಂಪರ್ಕ ಅಭಿಯಾನವನ್ನು ಯಶಸ್ವಿಯಾಗಿ ನಡೆಸುವ ಕುರಿತು ಚರ್ಚೆಯೂ ನಡೆಯಿತು ಎಂದು ತಿಳಿದುಬಂದಿದೆ.
'ಈ ಕಾರ್ಯತಂತ್ರದ ಭಾಗವಾಗಿ, ಪ್ರಧಾನಿ ಮತ್ತು ಕೇಂದ್ರ ಸಚಿವರು ಸೇರಿದಂತೆ ಪಕ್ಷದ ಇತರ ಹಿರಿಯ ನಾಯಕರು ಚರ್ಚೆ ನಡೆಸಿದ್ದಾರೆ. ರಾಜಸ್ಥಾನ ಮತ್ತು ತೆಲಂಗಾಣ ಚುನಾವಣೆಗೆ ಒಳಪಡುವ ರಾಜ್ಯಗಳಲ್ಲಿ ಹೆಚ್ಚು ಗಮನಹರಿಸಬೇಕೆಂದು ನಿರ್ಧರಿಸಲಾಗಿದೆ. ಆ ಮೂಲಕ ದೇಶಾದ್ಯಂತ ಹತ್ತಾರು ಸಾರ್ವಜನಿಕ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ' ಎಂದು ಹೇಳಲಾಗಿದೆ.
ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನಪರ ಯೋಜನೆಗಳು ಮತ್ತು ಅವುಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಬಿಜೆಪಿ ಸಿಎಂಗಳು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications