Delhi Election: ಮೋದಿಗೂ ಕೇಜ್ರಿವಾಲ್‌ಗೂ ವ್ಯತ್ಯಾಸವಿಲ್ಲ ಎಂದ ರಾಹುಲ್ ಗಾಂಧಿ; ಎಎಪಿ-ಕಾಂಗ್ರೆಸ್ ನಡುವೆ ಬಿರುಕು
ದೆಹಲಿ ವಿಧಾನಸಭಾ ಚುನಾವಣೆ ಅಖಾಡ ರಂಗೇರಿದ್ದು ಮೂರು ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಿವೆ. ಇಂಡಿಯಾ ಒಕ್ಕೂಟದಲ್ಲಿ ಮಿತ್ರ ಪಕ್ಷಗಳಾಗಿರುವ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ದೆಹಲಿ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿದ್ದು, ಕಾಂಗ್ರೆಸ್ ನಾಯಕರು ಎಎಪಿ ವಿರುದ್ಧ ಮುಗಿಬಿದ್ದಿದ್ದಾರೆ. ಇದೀಗ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅರವಿಂದ್ ಕೇಜ್ರಿವಾಲ್‌ರನ್ನು ಟೀಕಿಸಿದ್ದು ಮೈತ್ರಿಯಲ್ಲಿ ಮತ್ತಷ್ಟು ಬಿರುಕು ಮೂಡಿದೆ.
ಸೋಮವಾರ ದೆಹಲಿಯ ಸೀಲಾಂಪುರದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ಕೇಜ್ರಿವಾಲ್ ಮತ್ತು ನರೇಂದ್ರ ಮೋದಿ ನಡುವೆ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದರು.

ಅರವಿಂದ್ ಕೇಜ್ರಿವಾಲ್ ಬಿಜೆಪಿ ನಾಯಕರಂತೆಯೇ ಪ್ರಚಾರ ಮಾಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರಂತೆ ಸುಳ್ಳು ಭರವಸೆಗಳನ್ನು ನೀಡಿದ್ದಾರೆ ಎಂದು ಹೇಳಿದರು. ಅರವಿಂದ್ ಕೇಜ್ರಿವಾಲ್ ದೆಹಲಿಯನ್ನು ಭ್ರಷ್ಟಾಚಾರ ಮುಕ್ತಗೊಳಿಸುವಲ್ಲಿ ವಿಫಲವಾಗಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಶೀಲಾ ದೀಕ್ಷಿತ್ ದೆಹಲಿ ಮುಖ್ಯಮಂತ್ರಿಯಾಗಿದ್ದಾಗ ಹೇಗಿತ್ತು ಎನ್ನುವುದನ್ನು ನಿಮಗೆ ನೆನಪಿದೆಯಾ? ಅರವಿಂದ್ ಕೇಜ್ರಿವಾಲ್ ದೆಹಲಿಯನ್ನು ಸ್ವಚ್ಛಗೊಳಿಸಿ ಭ್ರಷ್ಟಾಚಾರ ಮುಕ್ತ ಮಾಡುವುದಾಗಿ ತಿಳಿಸಿದ್ದರು. ಆದರೆ ದೆಹಲಿಯಲ್ಲಿ ತುಂಬಾ ಮಾಲಿನ್ಯವಿದೆ. ಅರವಿಂದ್ ಕೇಜ್ರಿವಾಲ್ ದೆಹಲಿಯನ್ನು ಭ್ರಷ್ಟಾಚಾರ ಮುಕ್ತಗೊಳಿಸಿದ್ದಾರೆಯೇ? ಪ್ರಧಾನಿ ಮೋದಿ ಮಾಡುವ ರೀತಿಯಲ್ಲಿ ಕೇಜ್ರಿವಾಲ್ ಜನತೆಗೆ ಸುಳ್ಳು ಭರವಸೆಗಳನ್ನು ಕೊಡುತ್ತಿದ್ದಾರೆ ಎಂದರು.
ಕೇಜ್ರಿವಾಲ್ ಮತ್ತು ನರೇಂದ್ರ ಮೋದಿ ಹಿಂದುಳಿದ ಸಮುದಾಯಗಳು, ದಲಿತರು, ಬುಡಕಟ್ಟು ಜನಾಂಗದವರು ಮತ್ತು ಅಲ್ಪ ಸಂಖ್ಯಾತರಿಗೆ ತಮ್ಮ ಹಕ್ಕುಗಳನ್ನು ನೀಡಲು ಇಷ್ಟಪಡುವುದಿಲ್ಲ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದರು. ಇಬ್ಬರೂ ಕೂಡ ಜಾತಿ ಗಣತಿ ಬಗ್ಗೆ ಮಾತನಾಡಲ್ಲ, ಹಿಂದುಳಿದ ಸಮುದಾಯಗಳು ತಮ್ಮ ಹಕ್ಕುಗಳನ್ನು ಪಡೆಯಬಾರದು ಎನ್ನುವಂತೆ ಮಾತನಾಡುತ್ತಾರೆ. ಮೋದಿ ಮತ್ತು ಕೇಜ್ರಿವಾಲ್ ಜಾತಿ ಗಣತಿಗೆ ಬೆಂಬಲ ಕೊಡುತ್ತಾರೋ ಇಲ್ಲವೋ ಕೇಳಬೇಕು ಎಂದರು.
ಹಣದುಬ್ಬರ ಪ್ರಮಾಣ ಹೆಚ್ಚಾಗಿದ್ದು ಬಡವರು ಮತ್ತಷ್ಟು ಬಡವರಾಗುತ್ತಿದ್ದರೆ ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ. ಶ್ರೀಮಂತ ಉದ್ಯಮಿಗಳು ಪ್ರಧಾನಿ ಮೋದಿಗೆ ಮಾರ್ಕೆಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಿದರು.
ಕೇಜ್ರಿವಾಲ್ ತಿರುಗೇಟು
ರಾಹುಲ್ ಗಾಂಧಿ ಮಾಡಿರುವ ಆರೋಪಗಳಿಗೆ ಕೆರಳಿರುವ ಅರವಿಂದ್ ಕೇಜ್ರಿವಾಲ್ ಆಕ್ರೋಶ ವ್ತಕ್ತಪಡಿಸಿದ್ದಾರೆ. ರಾಹುಲ್ ಗಾಂಧಿಯವರ ಹೋರಾಟ ಏನಿದ್ದರೂ ಕಾಂಗ್ರೆಸ್ ಉಳಿಸುವ ಬಗ್ಗೆಯೇ ಹೊರತು ದೇಶವನ್ನು ಉಳಿಸುವ ಬಗ್ಗೆಯಲ್ಲ ಎಂದು ಹೇಳಿದ್ದಾರೆ.
ಸೋಮವಾರ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ನನ್ನ ಮೇಲೆ ಹಲವು ಆರೋಪಗಳನ್ನು ಮಾಡಿದ್ದಾರೆ. ಅವರ ಹೇಳಿಕೆಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ, ಅವರ ಹೋರಾಟ ಕಾಂಗ್ರೆಸ್ ಪಕ್ಷವನ್ನು ಉಳಿಸುವುದು, ನನ್ನ ಹೋರಾಟ ದೇಶವನ್ನು ಉಳಿಸುವುದು ಎಂದು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.












Click it and Unblock the Notifications