ಕದನ ವಿರಾಮದ ಬೆನ್ನಲ್ಲೇ ಉನ್ನತ ಮಟ್ಟದ ಸಭೆ ನಡೆಸಿದ ಮೋದಿ, ಚರ್ಚೆಯಾಗಿದ್ದೇನು?
ಭಾರತ ಮತ್ತು ಪಾಕಿಸ್ತಾನ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವ ಕದನ ವಿರಾಮದ ಒಪ್ಪಂದಕ್ಕೆ ಬಂದ ಮರುದಿನವೇ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಸೇರಿದಂತೆ ಉನ್ನತ ಸರ್ಕಾರಿ ಅಧಿಕಾರಿಗಳೊಂದಿಗೆ ಮೋದಿ ಭಾನುವಾರ ಸಭೆ ನಡೆಸಿದ್ದಾರೆ. ಇದೇ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಮತ್ತು ಮೂರೂ ಸೇನಾ ಮುಖ್ಯಸ್ಥರು ಕೂಡ ಹಾಜರಿದ್ದರು.
ಶನಿವಾರ ಮಧ್ಯಾಹ್ನ ಕದನ ವಿರಾಮ ಒಪ್ಪಂದಕ್ಕೆ ಒಪ್ಪಿರುವುದಾಗಿ ಹೇಳಲಾಗಿತ್ತು. ಆದರೆ ರಾತ್ರಿ ಪಾಕಿಸ್ತಾನ ಕದನ ವಿರಾಮ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಭಾರತ ಗಂಭೀರ ಆರೋಪ ಮಾಡಿದೆ. ಉದ್ವಿಗ್ನತೆ ಕಡಿಮೆಯಾಗಿದ್ದರೂ, ಹಲವಾರು ಗಡಿ ಪ್ರದೇಶಗಳ ನಿವಾಸಿಗಳು ಇನ್ನೂ ಭಯದಲ್ಲೇ ಇದ್ದಾರೆ. ನಿರಂತರ ಶೆಲ್ ದಾಳಿ ಮತ್ತು ಡ್ರೋನ್ ದಾಳಿಗಳಿಂದ ಬೆಚ್ಚಿಬಿದ್ದಿದ್ದಾರೆ.

ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಪರಿಸ್ಥಿತಿ ಈಗ ಸ್ಥಿರವಾಗಿದೆ ಎಂದು ಹೇಳಲಾಗಿದ್ದರೂ, ಸಭೆಯು ಶನಿವಾರ ರಾತ್ರಿಯಿಡೀ ನಡೆದ ಘಟನೆಗಳನ್ನು ಪರಿಶೀಲಿಸಿದೆ ಎಂದು ತಿಳಿದುಬಂದಿದೆ. ಗಡಿ ರಕ್ಷಣೆಯನ್ನು ಮತ್ತಷ್ಟು ಬಲಪಡಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಬ್ರಹ್ಮೋಸ್ ಕ್ಷಿಪಣಿ ಉತ್ಪಾದನಾ ಘಟಕಕ್ಕೆ ಚಾಲನೆ
ಈ ಸಭೆ ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಕ್ನೋದ ಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್‌ನಲ್ಲಿ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಉತ್ಪಾದನಾ ಘಟಕವನ್ನು ವರ್ಚುವಲ್ ಆಗಿ ಉದ್ಘಾಟಿಸಿದರು. ಇದು ವಾರ್ಷಿಕವಾಗಿ 80ರಿಂದ 100 ಕ್ಷಿಪಣಿಗಳನ್ನು ತಯಾರಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಲಾಗಿದೆ.

ಬ್ರಹ್ಮೋಸ್ ಸೆಂಟರ್ ಉದ್ಘಾಟನೆಯಲ್ಲಿ ನಾನು ಖುದ್ದಾಗಿ ಹಾಜರಾಗಲು ಬಯಸಿದ್ದೆ. ಆದರೆ ನಾನು ಏಕೆ ಬರಲು ಸಾಧ್ಯವಾಗಲಿಲ್ಲ ಎಂದು ನಿಮಗೆ ತಿಳಿದಿದೆ. ನಾವು ಎದುರಿಸುತ್ತಿರುವ ಪರಿಸ್ಥಿತಿಯನ್ನು ನೋಡಿದರೆ, ನಾನು ದೆಹಲಿಯಲ್ಲಿರುವುದು ಮುಖ್ಯವಾಗಿತ್ತು ಎಂದಿದ್ದಾರೆ.
ಇಂದು ರಾಷ್ಟ್ರೀಯ ತಂತ್ರಜ್ಞಾನ ದಿನ. 1998ರಲ್ಲಿ ಈ ದಿನ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ನಮ್ಮ ವಿಜ್ಞಾನಿಗಳು ಪೋಖ್ರಾನ್‌ನಲ್ಲಿ ಪರಮಾಣು ಪರೀಕ್ಷೆಯನ್ನು ನಡೆಸಿ, ಭಾರತದ ಶಕ್ತಿಯನ್ನು ಜಗತ್ತಿಗೆ ತೋರಿಸಿದರು. ಆ ಪರೀಕ್ಷೆಯು ನಮ್ಮ ವಿಜ್ಞಾನಿಗಳು, ಎಂಜಿನಿಯರ್‌ಗಳು, ರಕ್ಷಣಾ ಸಿಬ್ಬಂದಿಯ ಅಪಾರ ಪ್ರಯತ್ನಗಳ ಫಲವಾಗಿತ್ತು ಎಂದು ನೆನೆದಿದ್ದಾರೆ.
ಭಾರತ ಮಾತೆಯ ಕಾಶ್ಮೀರದ ಮೇಲೆ ದಾಳಿ ಮಾಡಿ ಹಲವಾರು ಕುಟುಂಬಗಳಿಂದ "ಸಿಂಧೂರ" ಅಳಿಸಿಹಾಕಿದ ಭಯೋತ್ಪಾದನಾ ಸಂಘಟನೆಗಳಿಗೆ ನಮ್ಮ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರ್ ಮೂಲಕ ನ್ಯಾಯ ಒದಗಿಸಿದವು. ಇದು ಕೇವಲ ಮಿಲಿಟರಿ ಕಾರ್ಯಾಚರಣೆಯಲ್ಲ, ಭಾರತದ ರಾಜಕೀಯ, ಸಾಮಾಜಿಕ ಮತ್ತು ಕಾರ್ಯತಂತ್ರದ ಇಚ್ಛಾಶಕ್ತಿಯ ಸಂಕೇತ ಕೂಡ. ನಾವು ಎಂದಿಗೂ ಪಾಕ್ ನಾಗರಿಕರನ್ನು ಗುರಿಯಾಗಿಸಿಕೊಂಡಿಲ್ಲ. ಆದರೆ ಪಾಕಿಸ್ತಾನವು ಭಾರತದಲ್ಲಿನ ನಾಗರಿಕ ಪ್ರದೇಶಗಳನ್ನು ಮಾತ್ರವಲ್ಲದೆ ದೇವಾಲಯಗಳು, ಗುರುದ್ವಾರಗಳು ಮತ್ತು ಚರ್ಚ್‌ಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು ಎಂದು ದೂರಿದ್ದಾರೆ.
ಆಪರೇಷನ್ ಸಿಂಧೂರ್ ಇನ್ನೂ ನಡೆಯುತ್ತಿರುವುದರಿಂದ, ವಿವರವಾದ ಮಾಹಿತಿಯನ್ನು ಸಕಾಲದಲ್ಲಿ ನೀಡಲಾಗುವುದು. ಪರಿಶೀಲಿಸದ ಮಾಹಿತಿಯ ಊಹಾಪೋಹ ಮತ್ತು ಸುಳ್ಳು ಸುದ್ದಿಗಳಿಂದ ದೂರವಿರುವಂತೆ ಭಾರತೀಯ ವಾಯುಸೇನೆ ಸೂಚನೆ ನೀಡಿದೆ.












Click it and Unblock the Notifications