ಉಗ್ರರಿಗೆ, ಬುದ್ದಿಜೀವಿಗಳಿಗೆ '56 ಇಂಚು' ಎದೆ ಪ್ರದರ್ಶಿಸಿದ ಮೋದಿ

By: ಬಾಲರಾಜ್ ತಂತ್ರಿ
Subscribe to Oneindia Kannada

ಕಳೆದ ಲೋಕಸಭಾ ಚುನಾವಣೆಗೆ ಮುನ್ನ ಆಜ್ ತಕ್ ಹಿಂದಿ ವಾಹಿನಿಯ ಜನಪ್ರಿಯ ಶೋ, ರಜತ್ ಶರ್ಮಾ ನಡೆಸಿಕೊಡುವ 'ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನರೇಂದ್ರ ಮೋದಿಗೆ 'ಮುಂಬೈ ಉಗ್ರರ ದಾಳಿ'ಯ ಬಗ್ಗೆ ನಿಮ್ಮ ನಿಲುವೇನು ಎನ್ನುವ ಪ್ರಶ್ನೆಯನ್ನು ಕೇಳಲಾಗಿತ್ತು.

ಪಾಕಿಸ್ತಾನದ ಉಗ್ರರಿಗೆ ಅವರದೇ ಆದ ರೀತಿಯಲ್ಲಿ ಉತ್ತರವನ್ನು ಕೊಡಬೇಕು, ಆ ದೇಶದ ಜೊತೆಗೆ 'ಲವ್ ಲೆಟರ್' ಸಂಬಂಧವನ್ನು ಕಡಿದು ಕೊಳ್ಳಬೇಕೆಂದು ಮನಮೋಹನ್ ಸಿಂಗ್ ಸರಕಾರವನ್ನು ಮೋದಿ ತರಾಟೆಗೆ ತೆಗೆದುಕೊಂಡಿದ್ದರು. (ಉಗ್ರರ ಏಟಿಗೆ ಭಾರತದ ಬಲವಾದ ತಿರುಗೇಟು)

ಮೋದಿ ಪ್ರಧಾನಿಯಾದರೆ ಬಿಜೆಪಿ ಸರಕಾರ ಪಾಕಿಸ್ತಾನದ ವಿರುದ್ದ ಆರಂಭದಲ್ಲೇ ಕಠಿಣ ನಿಲುವನ್ನು ತಾಳುವುದು ನಿಶ್ಚಿತ ಎನ್ನುವುದು ಸಾರ್ವಜನಿಕ ವಲಯದಲ್ಲಿ ಇದ್ದಂತಹ ಬಲವಾದ ನಂಬಿಕೆ. ಆದರೆ ಆದದ್ದು ಮಾತ್ರ ಬೇರೆ..

ಪ್ರಧಾನಮಂತ್ರಿ ಪದಗ್ರಹಣ ಸಮಾರಂಭಕ್ಕೆ ಪಾಕ್ ಪ್ರಧಾನಿಯನ್ನು ಆಹ್ವಾನಿಸಿದ್ದು, ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, ಅಲ್ಲಿನ ಪ್ರಧಾನಿ ನವಾಜ್ ಷರೀಫ್ ತಾಯಿಗೆ ಸೀರೆ ಉಡುಗೊರೆ ಕೊಟ್ಟಿದ್ದು, ಷರೀಫ್ ಕುಟುಂಬದ ಮದುವೆಗೆ ಶಿಷ್ಟಾಚಾರವನ್ನೆಲ್ಲಾ ಬದಿಗಿಟ್ಟು ಲಾಹೋರಿಗೆ ಮೋದಿ ಭೇಟಿ ನೀಡಿದ್ದರು.

ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗ ಮತ್ತು ಪ್ರಧಾನಿಯಾದ ನಂತರ ಪಾಕಿಸ್ತಾನದ ವಿರುದ್ದ ಮೋದಿ ನಿಲುವಿನಲ್ಲಿ ಗಮನಾರ್ಹ ಬದಲಾವಣೆಗಳಾಗಿದ್ದವು. ಇದಕ್ಕೆ ರಾಜತಾಂತ್ರಿಕ ಕಾರಣಗಳು ಹತ್ತು ಹಲವಾರು ಇರಬಹುದು. (ಉಗ್ರರ ಸದ್ದಡಗಿಸಿದ ಭಾರತೀಯ ಸೇನೆ)

ಆದರೆ ಪಾಕಿಸ್ತಾನ ಮಾತ್ರ ಭಾರತ ಚಾಚಿದ ಸ್ನೇಹಹಸ್ತಕ್ಕೆ ಬೆಲೆಕೊಡದೇ, ತನ್ನ ತಂಟೆ, ವಿಕೃತ ಬುದ್ದಿಯನ್ನು ಮುಂದುವರಿಸಿತ್ತು. ಉಗ್ರರ ಉಪಟಳ, ಗಡಿ ನುಸುಳಿಕೆ, ಕಾಶ್ಮೀರದ ಸಮಸ್ಯೆ, ಗಡಿ ಉಲ್ಲಂಘನೆ ಹಿಂದಿಗಿಂತಲೂ ಜಾಸ್ತಿ ಎನ್ನುವ ಮಟ್ಟಿಗಾಗಿತ್ತು. ಮುಂದೆ ಓದಿ...

ಪಠಾಣಕೋಟ್ ವಾಯುನೆಲೆಯ ಮೇಲೆ ದಾಳಿ

ಪಠಾಣಕೋಟ್ ವಾಯುನೆಲೆಯ ಮೇಲೆ ದಾಳಿ

ಎಷ್ಟರ ಮಟ್ಟಿಗೆ ಪಾಕ್ ನಂಬಿಕೆಗೆ ಯೋಗ್ಯವಾದ ದೇಶವಲ್ಲ ಎಂದರೆ, ಕಾಬೂಲ್ ನಿಂದ ನೇರ ಲಾಹೋರಿಗೆ ಮೋದಿ ಭೇಟಿ ನೀಡಿಬಂದ ಕೆಲವೇ ದಿನದಲ್ಲಿ ಉಗ್ರರು ಪಠಾಣಕೋಟ್ ವಾಯುನೆಲೆಯ ಮೇಲೆ ದಾಳಿ ಮಾಡಿ, ನಮ್ಮ ಬಾಲ ಎಂದಿಗೂ ಡೊಂಕೇ ಎಂದು ಜಗತ್ತಿಗೆ ಸಾರಿತ್ತು.

ಸಾಮಾಜಿಕ ತಾಣದ ಮೂಲಕ ವ್ಯಂಗ್ಯ

ಸಾಮಾಜಿಕ ತಾಣದ ಮೂಲಕ ವ್ಯಂಗ್ಯ

ಪ್ರಧಾನಿಯಾದ ನಂತರ ಪ್ರತೀ ಬಾರಿ ಉಗ್ರರ ದಾಳಿಯಾದಾಗ ಪ್ರಮುಖವಾಗಿ ಬುದ್ದಿಜೀವಿಗಳಿಂದ, ವಿರೋಧಿಗಳಿಂದ ಮೋದಿ ತೀವ್ರ ಟೀಕೆಗೆ ಗುರಿಯಾಗುತ್ತಿದ್ದರು. ಹೇಯವಾಗಿ, ಅಸಂಸ್ಕೃತ ಪದ ಬಳಸಿ ಮೋದಿಯವರನ್ನು ಬಹಿರಂಗವಾಗಿ, ಸಾಮಾಜಿಕ ತಾಣದ ಮೂಲಕ ವ್ಯಂಗ್ಯವಾಡಲಾಗುತ್ತಿತ್ತು.

56 ಇಂಚು ಎದೆ ಪ್ರದರ್ಶನ ಯಾವಾಗ

56 ಇಂಚು ಎದೆ ಪ್ರದರ್ಶನ ಯಾವಾಗ

ಮೋದಿ ಈ ಹಿಂದೆ ತಾವೇ ನೀಡಿದ್ದ '56 ಇಂಚು ಎದೆ'ಯ ಬಗ್ಗೆ ತಮಾಷೆ ಮಾಡಲಾಗುತ್ತಿತ್ತು. ಕೆಲವೊಂದು ಗುಂಪುಗಳು 56 ಇಂಚು ಎದೆ ಪ್ರದರ್ಶನ ಯಾವಾಗ, ಇನ್ನಷ್ಟು ಸೈನಿಕರ ಸಾವನ್ನಪ್ಪ ಬೇಕೇ ಎಂದು ಪ್ರಶ್ನಿಸಿದ್ದೂ ಉಂಟು. ಉರಿ ಉಗ್ರರ ದಾಳಿಯ ನಂತರ ಅದು ಇನ್ನಷ್ಟು ತಾರಕಕ್ಕೇರಿತ್ತು.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್

ಉರಿ ದಾಳಿಯ ನಂತರ ಮೋದಿ ಸರಕಾರ ಪಾಕಿಸ್ತಾನದ ವಿರುದ್ದ ಕಠಿಣ ನಿಲುವು ತಾಳುವುದು ಬಹುತೇಕ ಖಚಿತವಾಗಿತ್ತು. ವಿಶ್ವಸಂಸ್ಥೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಪಾಕಿಸ್ತಾನದ ನೆಲದಿಂದ ನಡೆಯುತ್ತಿರುವ ಉಗ್ರ ಚಟುವಟಿಕೆಯ ಬಗ್ಗೆ ಮಾಡಿದ ಭಾಷಣ, ಸಾರ್ಕ್ ಶೃಂಗ ಸಭೆಗೆ ಭಾರತ ಬಹಿಷ್ಕರಿಸಿದ್ದರಿಂದ, ಸಭೆಯೇ ರದ್ದಾಗಿತ್ತು. ರಾಜತಾಂತ್ರಿಕವಾಗಿ ಮೋದಿ ಸರಕಾರ ಪಾಕಿಗೆ ಭರ್ಜರಿ ಏಟನ್ನು ನೀಡಿತ್ತು.

ಪಾಕ್ ಉಗ್ರರಿಗೆ ಮೋದಿ ಮಹೂರ್ತ

ಪಾಕ್ ಉಗ್ರರಿಗೆ ಮೋದಿ ಮಹೂರ್ತ

ತಾಳ್ಮೆಗೂ, ಟೀಕೆಗಳನ್ನು ಸಹಿಸಿಕೊಳ್ಳುವುದಕ್ಕೂ ಒಂದು ಮಿತಿಯಿದೆ ಎನ್ನುವಂತೆ, ಗುಪ್ತಚರ ಇಲಾಖೆಯ ಮಾಹಿತಿಯನ್ನು ಕೂಲಂಕುಷವಾಗಿ ಕಲೆಹಾಕಿ, ಭದ್ರತಾ ಇಲಾಖೆಯ ಸಲಹೆ ಪಡೆದು, ಸೇನೆಯ ಮೂರು ಪಡೆಯ ಮುಖ್ಯಸ್ಥರನ್ನು ಭೇಟಿಯಾಗಿ, ಪಾಕ್ ಉಗ್ರರಿಗೆ ಮೋದಿ ಮಹೂರ್ತ ಫಿಕ್ಸ್ ಮಾಡಿದರು.

7 ಉಗ್ರರ ಶಿಬಿರ ಮತ್ತು 38 ಉಗ್ರರ ಸಂಹಾರ

7 ಉಗ್ರರ ಶಿಬಿರ ಮತ್ತು 38 ಉಗ್ರರ ಸಂಹಾರ

ಬುಧವಾರ (ಸೆ 28) ತಡರಾತ್ರಿ ಭಾರತದ ವಾಯುಸೇನೆ ಪಾಕಿಸ್ತಾನದ ಗಡಿಭಾಗದಲ್ಲಿ ಸರ್ಜಿಕಲ್ ದಾಳಿ ನಡೆಸಿ. 7 ಉಗ್ರರ ಶಿಬಿರ ಮತ್ತು 38 ಉಗ್ರರನ್ನು ಸಂಹಾರ ಮಾಡಿತು. ಅತ್ಯಂತ ಶಿಸ್ತುಬದ್ದವಾಗಿ , ದಾಳಿಯ ವಿಚಾರ ಎಲ್ಲೂ ಲೀಕ್ ಆಗದಂತೆ ಎಚ್ಚರಿಕೆ ವಹಿಸಿ, ಮೋದಿ ಸರಕಾರ ಪಾಕಿಸ್ತಾನವು ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಉಗ್ರರನ್ನು ಹಡೆಮುರಿ ಕಟ್ಟಿತ್ತು.

ದಿವ್ಯಮೌನಕ್ಕೆ ಶರಣಾದ ಮೋದಿ ಟೀಕಾಕಾರರು

ದಿವ್ಯಮೌನಕ್ಕೆ ಶರಣಾದ ಮೋದಿ ಟೀಕಾಕಾರರು

ನಮ್ಮ ಸಹನೆ ಕೆಟ್ಟರೆ ಏನಾಗುತ್ತದೆ ಎನ್ನುವುದನ್ನು ಜಗತ್ತಿಗೆ ಭಾರತ ತೋರಿಸಿಕೊಟ್ಟಿದೆ. ಮೋದಿ ಎದೆಯಳತೆಯ ಬಗ್ಗೆ ಕೆಲವರಿಗೆ ಇದ್ದಂತಹ ಸಂದೇಹ ಪರಿಹಾರ ಆಗಿರಬಹುದು. ಯಾಕೆಂದರೆ, ಇಡೀ ದೇಶ ಮೋದಿ ಸರಕಾರದ ದಿಟ್ಟ ನಿರ್ಧಾರ ಮತ್ತು ಸೈನಿಕರನ್ನು ಕೊಂಡಾಡುತ್ತಿರುವಾಗ, ಮೋದಿ 56 ಇಂಚನ್ನು ದೂರುತ್ತಿದ್ದವರು ದಿವ್ಯಮೌನಕ್ಕೆ ಶರಣಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi criticizer silent after Indian militaries surgical operation against Pakistan.
Please Wait while comments are loading...