PM Kisan: ಪ್ರಧಾನಿಯಿಂದ 9 ಕೋಟಿ ರೈತರಿಗೆ 14ನೇ ಕಂತಿನ ಹಣ ಬಿಡುಗಡೆ, ಪರಿಶೀಲನೆ ಹೇಗೆ?
ರಾಜಸ್ತಾನ, ಜುಲೈ 27: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN 14th Installment) ಯೋಜನೆ 14 ನೇ ಕಂತಿಗೆ ರೈತರಿಗೆ ಗುರುವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂತಸದ ಸುದ್ದಿ ನೀಡಿದ್ದಾರೆ. ಇಂದು ಜುಲೈ 27ರಂದು ರಾಜಸ್ತಾನದ ಸಿಕರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಗಳು ಪಿಎಂ ಕಿಸಾನ್ ಯೋಜನೆಯ ಹಣ ಬಡುಗಡೆ ಮಾಡಿದ್ದು, 9 ಕೋಟಿಗೂ ಹೆಚ್ಚು ಫಲಾನುಭವಿಗಳ ಖಾತೆಗೆ ತಲಾ 2000 ರೂಪಾಯಿ ಜಮೆ ಆಗಿದೆ.
ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣವನ್ನು ಅರ್ಹ ರೈತ ಫಲಾನುಭವಿಗಳ ಖಾತೆಗೆ ಜಮೆ ಮಾಡಲು ಕೇಂದ್ರ ಸರ್ಕಾರವು ಒಟ್ಟು 17,000 ಕೋಟಿಗೂ ಹೆಚ್ಚು ಹಣವನ್ನು ಬಿಡುಗಡೆ ಮಾಡಿದೆ. ಈ ಹಿಂದಿನ 13ನೇ ಕಂತಿನ ಹಣ ಇದೇ ವರ್ಷ 2023ರ ಫೆಬ್ರುವರಿಯಂದು ಬಿಡುಗಡೆ ಮಾಡಲಾಗಿತ್ತು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಸಿಕರ್ ನಲ್ಲಿ ಚಿಲ್ಲರೆ ರಸಗೊಬ್ಬರ ಪೂರೈಕೆಯ ಕೇಂದ್ರಗಳನ್ನು ಪೂರೈಸುವ 'ಪಿಎಂ ಕಿಸಾನ್ ಸಮೃದ್ಧಿ ಕೇಂದ್ರವನ್ನು' ಉದ್ಘಾಟಿಸಿದರು.
ಪಿಎಂ ಕಿಸಾನ್ ಯೋಜನೆ ಸದುದ್ದೇಶ
ಕೇಂದ್ರ ಸರ್ಕಾರ ದೇಶದ ರೈತರಿಗೆ ಆರ್ಥಿಕವಾಗಿ ನೆರವಾಗಲು 2019ರಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ' (PM Kisan scheme) ಜಾರಿಗೊಳಿಸಿತು. ಆರಂಭದಲ್ಲಿ ಇದು 5 ಎಕರೆಗಿಂತಲ ಕಡಿಮೆ ಜಮೀನು ಹೊಂದಿರುವ ಮತ್ತು ಮಧ್ಯಮ ರೈತರಿಗೆ ವ್ಯವಸಾಯಕ್ಕೆ ಅನುಕೂಲವಾಗಲೆಂದು ಧನಸಹಾಯವಾಗಿ ನೀಡಲಾಗುವುದು ಎಂದು ಕೇಂದ್ರ ತಿಳಿಸಿತ್ತು. ಬಳಿಕ ಎಲ್ಲ ವಿಧದ ರೈತರಿಗೆ ಯೋಜನೆಯನ್ನು ವಿಸ್ತರಣೆ ಮಾಡಿತು. ಅಂದಿನಿಂದ ಪ್ರತಿ ನಾಲ್ಕು ತಿಂಗಳಿಗೆ 2000 ರೂ.ನಂತೆ ವಾರ್ಷಿಕವಾಗಿ 6,000 ರೂಪಾಯಿಯನ್ನು ನೇರವಾಗಿ ರೈತ ಖಾತೆಗೆ (ಡಿಬಿಟಿ) ವರ್ಗಾಯಿಸಲಾಗುತ್ತದೆ.
ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜ್ಯದ ರೈತರಿಗೆ ಕೆಂದ್ರ ಜೊತೆಗೆ ಎರಡು ಕಂತುಗಳಲ್ಲಿ ಒಟ್ಟು 4000 ರೂಪಾಯಿ ಹಣ ವರ್ಗಾಯಿಸುತ್ತಿತ್ತು. ಆದರೆ ಈಗ ಅಧಿಕಾರದಲ್ಲಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಮುಂದುವರಿಸುವ ಬಗ್ಗೆ ಯಾವ ನಿರ್ಧಾರವನ್ನು ಇನ್ನೂ ಸಹ ಮಾಡಿಲ್ಲ.

14ನೇ ಕಂತಿನ ಹಣ ಬಂತಾ?: ಹೀಗೆ ಪರಿಶೀಲಿಸಿ
ಅರ್ಹ ರೈತರ ಫಲಾನುಭವಿಗಳು ಹಣ ಬಂದಿದೆಯೇ ಇಲ್ಲವೋ ಎಂದು ಪರಿಶೀಲಿಸಲು ಮೊದಲು ನೀವ ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ www.pmkisan.gov.in ಗೆ ಭೇಟಿ ನೀಡಿ. ನಂತರ ಅಲ್ಲಿರುವ ನಿಮ್ಮದೇ ಕಾಲಂ (Farmers Corner) ಅನ್ನು ಆಯ್ಕೆ ಮಾಡಿಕೊಳ್ಳಿ. ಅಲ್ಲಿ ಕಾಣುವ ಫಲಾನುಭವಿಗಳ ಸ್ಟೇಟಸ್ (Beneficiary Status) ಮೇಲೆ ಕ್ಲಿಕ್ ಮಾಡಬೇಕು. ನಂತರ ಪರದೆಯಲ್ಲಿ ಕೇಳಲಾಗುವ ಮಾಹಿತಿಗಳು ಅಂದರೆ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ನಮೂದಿಸಿ ಸಬ್ಮಿಟ್ ಕೊಟ್ಟರೆ 14ನೇ ಕಂತಿನ ಹಣ ಜಮೆ ಆಗಿದೆಯೋ? ಇಲ್ಲವೋ? ಎಂಬ ಮಾಹಿತಿ ಪರದೇ ಮೇಲೆ ಕಾಣುತ್ತದೆ.












Click it and Unblock the Notifications