ಗುಜರಾತ್ ನಲ್ಲಿ 'ರೋ-ರೋ' ಫೆರ್ರಿ ಸೇವೆಗೆ ಮೋದಿ ಚಾಲನೆ

Subscribe to Oneindia Kannada

ಸೌರಾಷ್ಟ್ರ, ಅಕ್ಟೋಬರ್ 22: ವಿಧಾನಸಭೆ ಚುನಾವಣೆ ನಡೆಯಲಿರುವ ಗುಜರಾತ್ ನಲ್ಲಿ ಸಮರೋಪಾದಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಬಿಜೆಪಿ ಕೈಗೆತ್ತಿಕೊಂಡಿದೆ. ಇಂದು ಸೌರಾಷ್ಟ್ರದ ಘೋಘಾದಿಂದ ದಕ್ಷಿಣ ಗುಜರಾತ್ ನ ದಹೇಜ್ ಸಂಪರ್ಕಿಸುವ 'ರೋ-ರೋ' (ರೋಲ್-ಆನ್-ರೋಲ್-ಆಫ್) ಫೆರ್ರಿ ಸೇವೆಯ ಮೊದಲ ಹಂತದ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದರು.

615 ಕೋಟಿ ರೂಪಾಯಿ ವೆಚ್ಚದ ಯೋಜನೆ ಉದ್ಘಾಟನೆ ವೇಳೆ ಮುಖ್ಯಮಂತ್ರಿ ವಿಜಯ್ ರೂಪಾಣಿ, ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಉಪಸ್ಥಿತರಿದ್ದರು.

PM inaugurates ferry service between Ghogha and Dahej in Gujarat

"ಇದು ಭಾರತ ಮಾತ್ರವಲ್ಲ ಆಗ್ನೇಯ ಏಷ್ಯಾದಲ್ಲೇ ಮೊದಲ ಯೋಜನೆಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಗುಜರಾತ್ ಸರಕಾರ ಈ ಯೋಜನೆಯನ್ನು ಕಾರ್ಯರೂಪಕ್ಕಿಳಿಸಿದೆ," ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ಇದು ತಮ್ಮ ಕನಸಿನ ಯೋಜನೆ ಎಂದು ಬಣ್ಣಿಸಿದರು.

ನಂತರ ಪ್ರಧಾನಿ ಫೆರ್ರಿಯಲ್ಲೇ ಘೋಘಾದಿಂದ ದಹೇಜ್ ಗೆ ಪ್ರಯಾಣ ಬೆಳೆಸಿದರು. ಅಲ್ಲಿಂದ ವಡೋದರಕ್ಕೆ ತೆರಳಲಿರುವ ಮೋದಿ ರೂ. 1140 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಮೊದಲ ಹಂತದ ರೋ-ರೋ ಫೆರ್ರಿ ಸೇವೆ ಪ್ರಯಾಣಿಕರಿಗೆ ಮಾತ್ರ ಮೀಸಲಾಗಿರಲಿದೆ. ಎರಡನೇ ಹಂತದ ಯೋಜನೆ ಇನ್ನೆರಡು ತಿಂಗಳಲ್ಲಿ ಸಿದ್ಧವಾಗಲಿದ್ದು ಇದರಲ್ಲಿ ವಾಹನಗಳನ್ನೂ ಸಾಗಿಸಬಹುದಾಗಿದೆ.

ರೋ-ರೋ ಫೆರ್ರಿ ಸೇವೆಯಿಂದ ಘೋಘಾದಿಂದ ದಹೇಜ್ ನಡುವಿನ 310 ಕಿಲೋಮೀಟರ್ ಪ್ರಯಾಣ ದೂರ 30 ಕಿಲೋಮೀಟರ್ ಗೆ ತಗ್ಗಿದೆ. ಮತ್ತು ಈ ದೂರವನ್ನು ಕೇವಲ 1 ಗಂಟೆಯಲ್ಲಿ ಕ್ರಮಿಸಬಹುದಾಗಿದೆ.

2012ರಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ್ದರು. ಇದೀಗ ಯೋಜನೆಯ ಮೊದಲ ಹಂತ ಪೂರ್ಣಗೊಂಡಿದೆ.

ಗುಜರಾತ್ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ನೀಡುತ್ತಿರುವ ಮೂರನೇ ಭೇಟಿ ಇದಾಗಿದೆ. ಭಾರೀ ಪ್ರತಿರೋಧ ಎದುರಿಸುತ್ತಿರುವ ರಾಜ್ಯ ಬಿಜೆಪಿ ಸರಕಾರ ಶತಾಯ ಗತಾಯ ಈ ಚುನಾವಣೆಯನ್ನು ಗೆಲ್ಲಲೇಬೇಕೆಂದು ಪಣತೊಟ್ಟಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi today inaugurated the first phase of the Rs 615 crore 'roll- on-roll-off' (ro-ro) ferry service between Ghogha in Saurashtra and Dahej in south Gujarat.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ