'ದಿ ಕೇರಳ ಸ್ಟೋರಿ' ವಿರುದ್ಧ ಕೇರಳ ಹೈಕೋರ್ಟ್‌ನಲ್ಲಿ ಪಿಐಎಲ್: ಮೇ 5ಕ್ಕೆ ವಿಚಾರಣೆ
ತಿರುವನಂತಪುರಂ, ಮೇ. 02: ವಿವಾದಿತ ಹಿಂದಿ ಚಲನಚಿತ್ರ 'ದಿ ಕೇರಳ ಸ್ಟೋರಿ' ಟೀಸರ್ ಮತ್ತು ಟ್ರೇಲರ್‌ನಲ್ಲಿನ ಕೆಲವು ಹೇಳಿಕೆಗಳ ವಿರುದ್ಧ ಮತ್ತು ಸೆನ್ಸಾರ್ ಮಂಡಳಿಯಿಂದ ಚಿತ್ರಕ್ಕೆ ಸಿಕ್ಕಿರುವ ಸಾರ್ವಜನಿಕ ಪ್ರದರ್ಶನದ ಪ್ರಮಾಣಪತ್ರವನ್ನು ರದ್ದುಗೊಳಿಸುವಂತೆ ಕೋರಿ ಮಂಗಳವಾರ ಕೇರಳ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸಲ್ಲಿಸಲಾಗಿದೆ.
ಸಂಕ್ಷಿಪ್ತ ವಾದಗಳನ್ನು ಆಲಿಸಿದ ಹೈಕೋರ್ಟ್, ಮೇ 5 ರಂದು ಚಲನಚಿತ್ರವನ್ನು ಬಿಡುಗಡೆ ಮಾಡಲು ನಿಗದಿಪಡಿಸಿದ ದಿನದಂದು ವಿಚಾರಣೆ ನಡೆಸುವುದಾಗಿ ಹೇಳಿದೆ. ನ್ಯಾಯಮೂರ್ತಿಗಳಾದ ಎನ್ ನಾಗರೇಶ್ ಮತ್ತು ಸಿಪಿ ಮಹಮ್ಮದ್ ನಿಯಾಸ್ ಅವರ ಪೀಠವು ಮುಂದಿನ ವಿಚಾರಣೆಯ ದಿನಾಂಕದ ಮೊದಲು ಪಿಐಎಲ್‌ನಲ್ಲಿ ಸಿಬಿಎಫ್‌ಸಿ ನಿಲುವನ್ನು ಪಡೆಯಲು ಕೇಂದ್ರ ಮತ್ತು ಸೆನ್ಸಾರ್ ಮಂಡಳಿಯ ಪರವಾಗಿ ಹಾಜರಾಗುವ ಡೆಪ್ಯೂಟಿ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ (ಡಿಎಸ್‌ಜಿಐ) ಮನು ಎಸ್ ಅವರಿಗೆ ಸಮಯ ನೀಡಿದೆ.

ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಕೀಲರಾದ ಅನೂಪ್ ವಿ ಆರ್ ಸಲ್ಲಿಸಿದ್ದರು. ಈ ಚಲನಚಿತ್ರವು ಕೇರಳದ ಜನರನ್ನು "ಅವಮಾನಿಸಲು" ಕಾರಣವಾದ ಕೆಲವು ಸಂಗತಿಗಳನ್ನು ಸುಳ್ಳಾಗಿ ಚಿತ್ರಿಸಲಾಗಿದೆ ಎಂದು ವಾದಿಸಿದರು. ಜೊತೆಗೆ ಚಲನಚಿತ್ರದ ಬಿಡುಗಡೆಗೆ ತಡೆ ಕೋರಿದ್ದಾರೆ.
'ದಿ ಕೇರಳ ಸ್ಟೋರಿ' ಸತ್ಯ ಘಟನೆಗಳಿಂದ ಪ್ರೇರಿತವಾಗಿದೆ ಎಂದು ಹೇಳಿಕೊಳ್ಳುತ್ತದೆ. ಆದರೆ, ಚಿತ್ರದ ಟೀಸರ್ ಮತ್ತು ಟ್ರೇಲರ್‌ನಲ್ಲಿರುವ ಹೇಳಿಕೆಗಳು ಸತ್ಯಕ್ಕೆ ದೂರವಾಗಿವೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಹೇಳಲಾಗಿದೆ. ಜೊತೆಗೆ ಚಿತ್ರದಲ್ಲಿನ ತಪ್ಪಾದ ಮತ್ತು ಪರಿಶೀಲಿಸದ ಹೇಳಿಕೆಗಳು ಅಥವಾ ಮುಸ್ಲಿಂ ಸಮುದಾಯ ಮತ್ತು ಕೇರಳ ರಾಜ್ಯಕ್ಕೆ ಅವಹೇಳನಕಾರಿ ದೃಶ್ಯಗಳನ್ನು ತೆಗೆದುಹಾಕುವುದು ಅಗತ್ಯ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಪಿಐಎಲ್‌ನಲ್ಲಿ ಅರ್ಜಿದಾರರು, ಚಲನಚಿತ್ರದ ನಿರ್ದೇಶಕ ಸುದೀಪ್ತೋ ಸೇನ್, ಅದರ ನಿರ್ಮಾಪಕ ವಿಪುಲ್ ಅಮೃತಲಾಲ್ ಷಾ ಮತ್ತು ನಿರ್ಮಾಣ ಕಂಪನಿ ಸನ್‌ಶೈನ್ ಪಿಕ್ಚರ್ಸ್‌ಗೆ ಚಿತ್ರ ಬಿಡುಗಡೆಯ ಮೊದಲು ಕೆಲವು ಹೇಳಿಕೆಗಳನ್ನು ಸರಿಪಡಿಸಲು ಅಥವಾ ತೆಗೆದುಹಾಕಲು ನಿರ್ದೇಶಿಸಲು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.
ದ್ವೇಷ ಭಾಷಣದ ಗುಣಲಕ್ಷಣಗಳನ್ನು ಹೊಂದಿರುವ ಭಾಗಗಳನ್ನು ತೆಗೆದುಹಾಕದೆ ಚಲನಚಿತ್ರದ ಪ್ರದರ್ಶನವನ್ನು ನಿಷೇಧಿಸಬೇಕು. ಚಲನಚಿತ್ರಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ನೀಡಿರುವ 'ಎ' ಪ್ರಮಾಣಪತ್ರವನ್ನು ಬದಿಗಿರಿಸುವಂತೆ ಅರ್ಜಿಯಲ್ಲಿ ನ್ಯಾಯಾಲಯವನ್ನು ಒತ್ತಾಯಿಸಲಾಗಿದೆ.
ಅರ್ಜಿಯನ್ನು ಕೇಂದ್ರ ಮತ್ತು ಸಿಬಿಎಫ್‌ಸಿ ವಿರೋಧಿಸಿದ್ದು, ಸೆನ್ಸಾರ್ ಮಂಡಳಿಯಿಂದ ಪ್ರಮಾಣೀಕರಣವನ್ನು ಒಮ್ಮೆ ನೀಡಿದರೆ, ನ್ಯಾಯಾಲಯಗಳು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ಅಭಿಪ್ರಾಯಪಟ್ಟಿದೆ ಎಂದು ಡಿಎಸ್‌ಜಿಐ ಮನು ಎಸ್ ವಾದಿಸಿದ್ದಾರೆ. ಜೊತೆಗೆ ಪಿಐಎಲ್ ಅನ್ನು ಕೊನೆಯ ಕ್ಷಣದಲ್ಲಿ ಸಲ್ಲಿಸುವುದು ಸರಿಯಲ್ಲ ಎಂದಿದ್ದಾರೆ.
ಅದಾ ಶರ್ಮಾ ನಟಿಸಿರುವ 'ದಿ ಕೇರಳ ಸ್ಟೋರಿ' ಮೇ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.












Click it and Unblock the Notifications