ಪವರ್ ಸ್ಟಾರ್ ಪವನ್ ಕಲ್ಯಾಣ್ ಡಿಸಿಎಂ, 4 ಖಾತೆಗಳ ಹೊಣೆ
ಅಮರಾವತಿ, ಜೂನ್ 15: ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ 2024ರ ಬಳಿಕ ತೆಲುಗು ದೇಶಂ ಪಕ್ಷ (ಟಿಡಿಪಿ), ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ ಸರ್ಕಾರ ರಚನೆ ಮಾಡಿದೆ. ಬುಧವಾರ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕಾರ ಮಾಡಿದರು.
ನಟ, ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಂಪುಟ ಸೇರಿದ್ದಾರೆ. ಅವರನ್ನು ರಾಜ್ಯದ ಉಪ ಮುಖ್ಯಮಂತ್ರಿ ಮಾಡಲಾಗಿದ್ದು, ಖಾತೆಗಳ ಹೊಣೆಯನ್ನು ನೀಡಲಾಗಿದೆ.

ಬುಧವಾರ ವಿಜಯವಾಡದಲ್ಲಿ ನಡೆದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಈಗ ಖಾತೆಗಳ ಹಂಚಿಕೆ ಮಾಡಲಾಗಿದೆ.
ಯಾವ-ಯಾವ ಖಾತೆಗಳು: ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಂಪುಟದ ಎಲ್ಲಾ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. 4ನೇ ಬಾರಿಗೆ ಮುಖ್ಯಮಂತ್ರಿಯಾದ ಅವರು, ಜಿಎಡಿ, ಕಾನೂನು ಮತ್ತು ಸುವ್ಯವಸ್ಥೆ, ಸಾರ್ವಜನಿಕ ಉದ್ಯಮಗಳ ಖಾತೆಯನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ.
ಪವನ್ ಕಲ್ಯಾಣ್ ಉಪ ಮುಖ್ಯಮಂತ್ರಿಯಾಗಿದ್ದು, ಅವರಿಗೆ ಪಂಚಾಯತ್ ರಾಜ್. ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಮೀಣ ನೀರು ಸರಬರಾಜು. ಪರಿಸರ ಮತ್ತು ಅರಣ್ಯ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ಹೊಣೆ ನೀಡಲಾಗಿದೆ.
2024ರ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ 135, ಜನಸೇನಾ ಪಕ್ಷ 21, ವೈಎಸ್‌ಆರ್‌ಸಿಪಿ 11, ಬಿಜೆಪಿ 8 ಕ್ಷೇತ್ರಗಳಲ್ಲಿ ಜಯಗಳಿಸಿದ್ದವು. ಟಿಡಿಪಿ, ಜನಸೇನಾ ಮತ್ತು ಬಿಜೆಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದವು. ಚಂದ್ರಬಾಬು ನಾಯ್ಡು ಸಂಪುಟದಲ್ಲಿ ಜನಸೇನಾ ಪಕ್ಷದ ಮೂವರು ಸಚಿವರಿದ್ದಾರೆ. ಬಿಜೆಪಿಯ ಇಬ್ಬರು ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.
ಚುನಾವಣಾ ದಿನಾಂಕ ಘೋಷಣೆಗೂ ಮೊದಲೇ ಚಂದ್ರಬಾಬು ನಾಯ್ಡು ಮತ್ತು ಪವನ್ ಕಲ್ಯಾಣ್ ಆಂಧ್ರ ಪ್ರದೇಶದಲ್ಲಿ ವೈಎಸ್ ಜಗನ್ ಮೋಹನ್ ರೆಡ್ಡಿ ಸೋಲಿಸಲು ಪಣ ತೊಟ್ಟಿದ್ದರು. ಎನ್‌ಡಿಎ ಮೈತ್ರಿಕೂಟದ ಬೆಂಬಲವೂ ಇವರಿಗೆ ಸಿಕ್ಕಿತ್ತು. ಚುನಾವಣೆಯಲ್ಲಿ ಜನರು ಬೆಂಬಲಿಸಿದ್ದು, ಚಂದ್ರಬಾಬು ನಾಯ್ಡು 4ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ.
ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಪಿಠಾಪುರಂ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. 1,34,394 ಮತಗಳನ್ನು ಪಡೆದು ಅವರು ವೈಎಸ್ಆರ್‌ಸಿಪಿಯ ಗೀತಾ ವಿಶ್ವನಾಥ್ (64115 ಮತ) ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೇ ಪಕ್ಷ 175 ಸದಸ್ಯ ಬಲದ ವಿಧಾನಸಭೆಯಲ್ಲಿ 21 ಕ್ಷೇತ್ರಗಳಲ್ಲಿ ಜಯಗಳಿಸಿದೆ.
ಎನ್. ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ಸಹ ಸಂಪುಟಕ್ಕೆ ಸೇರಿದ್ದಾರೆ. ಅವರಿಗೆ ಹೆಚ್‌ಆರ್‌ಡಿ, ಐಟಿ, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಖಾತೆಗಳ ಹೊಣೆ ನೀಡಲಾಗಿದೆ. ಅವರು ತೆಲುಗು ದೇಶಂ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಹೌದು.
ಸಂಪುಟದಲ್ಲಿ ಬಿಜೆಪಿಯ ಶಾಸಕ ಕಿಂಜರಾಪು ಅಚ್ಚೆನ್ನೈಡು ಕೃಷಿ, ಸಹಕಾರ ಮತ್ತು ಮಾರುಕಟ್ಟೆ. ಪಶುಸಂಗೋಪನೆ, ಡೈರಿ ಮತ್ತು ಮೀನುಗಾರಿಕೆ ಖಾತೆ, ಶಾಸಕ ಸತ್ಯ ಕುಮಾರ್ ಯಾದವ್ ಅವರಿಗೆ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ. ಕುಟುಂಬ ಕಲ್ಯಾಣ ಖಾತೆಯನ್ನು ನೀಡಲಾಗಿದೆ.
ಮೇ ತಿಂಗಳಿನಲ್ಲಿ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ 2024ರ ಜೊತೆ ಲೋಕಸಭೆ ಚುನಾವಣೆಗೆ ಸಹ ಮತದಾನ ನಡೆದಿತ್ತು. ಚುನಾವಣೆಯಲ್ಲಿ ಟಿಡಿಪಿ ಪಕ್ಷ 16 ಕ್ಷೇತ್ರಗಳಲ್ಲಿ ಜಯಗಳಿಸಿದ್ದು, ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಸರ್ಕಾರ ರಚನೆಯಲ್ಲಿ ಪ್ರಮುಖ ಪಕ್ಷವಾಗಿದೆ.












Click it and Unblock the Notifications