ಥಿಯೇಟರ್‌ನಲ್ಲಿ 20 ರೂ. ನೀರಿನ ಬಾಟಲಿಗೆ 50 ರೂ. ವಸೂಲಿ: ಸಿನೆಪೊಲಿಸ್, ಕೋಕಾ-ಕೋಲಾಗೆ 85 ಸಾವಿರ ರೂ. ದಂಡ
ಪಟ್ನಾ: ನೀವು ಎಂದಾದರೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ನೋಡಲು ಹೋದಾಗ, ಸಾಮಾನ್ಯ ಅಂಗಡಿಗಳಿಗಿಂತ ದುಪ್ಪಟ್ಟು ಅಥವಾ ಮೂರು ಪಟ್ಟು ದುಡ್ಡು ಕೊಟ್ಟು ನೀರಿನ ಬಾಟಲಿ ಅಥವಾ ತಿಂಡಿ ತಿನಿಸುಗಳನ್ನ ಖರೀದಿಸಿ ಬೇಸರಗೊಂಡಿದ್ದೀರಾ? ಬಹುತೇಕ ಎಲ್ಲರಿಗೂ ಈ ಅನುಭವ ಆಗಿರುತ್ತದೆ. ಆದರೆ, ಇಲ್ಲೊಬ್ಬ ಗ್ರಾಹಕ ತನಗಾದ ಅನ್ಯಾಯದ ವಿರುದ್ಧ ದನಿ ಎತ್ತಿ ಬರೋಬ್ಬರಿ ದಶಕದ ಕಾಲ ಕಾನೂನು ಹೋರಾಟ ನಡೆಸಿ ಇದೀಗ ಜಯಶಾಲಿಯಾಗಿದ್ದಾರೆ.
ಹೌದು, ಬಿಹಾರದ ಪಟ್ನಾ ಗ್ರಾಹಕ ನ್ಯಾಯಾಲಯವು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಿನೆಪೊಲಿಸ್ ಸಿನಿಮಾಸ್ ಹಾಗೂ ಪ್ರತಿಷ್ಠಿತ ಕೋಕಾ-ಕೋಲಾ ಕಂಪನಿಗಳಿಗೆ ಜಂಟಿಯಾಗಿ 85,000 ರೂಪಾಯಿಗಳ ಭಾರಿ ದಂಡ ವಿಧಿಸಿದೆ.

2016ರಲ್ಲಿ ನಡೆದಿದ್ದೇನು?
ಈ ಘಟನೆಯ ಹಿನ್ನೆಲೆ ನೋಡುವುದಾದ್ರೆ ಇದು ಸುಮಾರು ಎಂಟು ವರ್ಷಗಳ ಹಿಂದಿನದು. ಸೆಪ್ಟೆಂಬರ್ 23, 2016ರಂದು ರಜತ್ ತಿವಾರಿ ಎಂಬ ಯುವಕ ಪಟ್ನಾದ ಸಿನೆಪೊಲಿಸ್ ಚಿತ್ರಮಂದಿರಕ್ಕೆ 'ಪಿಂಕ್' ಸಿನಿಮಾ ನೋಡಲು ಹೋಗಿದ್ದರು. ಈ ವೇಳೆ ಅವರು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದ ನೀರಿನ ಬಾಟಲಿಯನ್ನ ಒಳಗೆ ಕೊಂಡೊಯ್ಯಲು ಚಿತ್ರಮಂದಿರದ ಭದ್ರತಾ ಸಿಬ್ಬಂದಿ ತಡೆದಿದ್ದರು. ಬೇರೆ ದಾರಿಯಿಲ್ಲದೆ ರಜತ್ ಅವರು ಚಿತ್ರಮಂದಿರದ ಒಳಗೆ ಮಾರಾಟವಾಗುತ್ತಿದ್ದ ಕಿನ್ಲೆ (Kinley) ನೀರಿನ ಬಾಟಲಿಯನ್ನು 50 ರೂ. ಕೊಟ್ಟು ಖರೀದಿಸಿದ್ದರು.
ಆದರೆ, ಅದೇ ನೀರಿನ ಬಾಟಲಿಯ ಎಂಆರ್‌ಪಿ ಮಾರುಕಟ್ಟೆಯಲ್ಲಿ ಕೇವಲ 20 ರೂಪಾಯಿ ಇತ್ತು. ತಮ್ಮನ್ನ ಹೊರಗಿನಿಂದ ನೀರು ತರಲು ಬಿಡದೆ, ದುಪ್ಪಟ್ಟು ಬೆಲೆಗೆ ನೀರು ಮಾರಾಟ ಮಾಡಿ ಸುಲಿಗೆ ಮಾಡಲಾಗಿದೆ ಎಂದು ಆರೋಪಿಸಿ ಅವರು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಕಂಪನಿಗಳ ವಾದ ಮತ್ತು ಕೋರ್ಟ್ ಆದೇಶ
ವಿಚಾರಣೆ ವೇಳೆ, ಸಿನೆಪೊಲಿಸ್ ಮ್ಯಾನೇಜ್‌ಮೆಂಟ್ "ಉತ್ಪನ್ನಗಳ ಬೆಲೆ ನಿಗದಿಗೂ ನಮಗೂ ಸಂಬಂಧವಿಲ್ಲ" ಎಂದು ವಾದಿಸಿದರೆ, ಕೋಕಾ-ಕೋಲಾ ಕಂಪನಿಯು "ನಾವು ಮೆಟ್ರಾಲಜಿ ನಿಯಮಗಳ ಪ್ರಕಾರವೇ ಬೆಲೆ ನಿಗದಿ ಮಾಡಿದ್ದೇವೆ" ಎಂದು ತನ್ನ ನಡೆಯನ್ನ ಸಮರ್ಥಿಸಿಕೊಂಡಿತ್ತು.
ಆದರೆ, ಈ ವಾದಗಳನ್ನ ಆಯೋಗದ ಅಧ್ಯಕ್ಷರಾದ ಪ್ರೇಮರಂಜನ್ ಮಿಶ್ರಾ ಮತ್ತು ಸದಸ್ಯ ರಜನೀಶ್ ಕುಮಾರ್ ಅವರಿದ್ದ ಪೀಠ ಸಾರಾಸಗಟಾಗಿ ತಳ್ಳಿಹಾಕಿತು. ಗ್ರಾಹಕರಿಗೆ ಹೊರಗಿನಿಂದ ನೀರು ತರಲು ನಿರ್ಬಂಧ ವಿಧಿಸಿ, ಒಳಗಡೆ ಎರಡು ವಿಭಿನ್ನ ದರಗಳಲ್ಲಿ ಉತ್ಪನ್ನಗಳನ್ನ ಮಾರಾಟ ಮಾಡುವುದು ಸರಿಯಲ್ಲ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.
85 ಸಾವಿರ ರೂಪಾಯಿ ದಂಡ
ಗ್ರಾಹಕರಿಗೆ ಮಾನಸಿಕ ಕಿರುಕುಳ ನೀಡಿದ ಹಾಗೂ ಅನುಚಿತ ವ್ಯಾಪಾರ ಪದ್ಧತಿ ಅನುಸರಿಸಿದ್ದಕ್ಕಾಗಿ ಕೋರ್ಟ್ ಒಟ್ಟು 85,000 ರೂಪಾಯಿ ದಂಡ ವಿಧಿಸಿದೆ. ಇದರಲ್ಲಿ 25,000 ರೂಪಾಯಿಗಳನ್ನ ದೂರುದಾರ ರಜತ್ ತಿವಾರಿಗೆ ಮಾನಸಿಕ ಪರಿಹಾರವಾಗಿ, 10,000 ರೂಪಾಯಿಗಳನ್ನ ಕಾನೂನು ವೆಚ್ಚವಾಗಿ ನೀಡಲು ಸೂಚಿಸಿದೆ. ಉಳಿದ 50,000 ರೂಪಾಯಿಗಳನ್ನು ರಾಜ್ಯ ಗ್ರಾಹಕ ಕಲ್ಯಾಣ ನಿಧಿಗೆ ಜಮಾ ಮಾಡುವಂತೆ ಆದೇಶಿಸಿದೆ.
45 ದಿನಗಳ ಗಡುವು
ದಂಡದ ಮೊತ್ತವನ್ನ ಮುಂದಿನ 45 ದಿನಗಳ ಒಳಗೆ ಪಾವತಿಸದಿದ್ದರೆ, ಅದರ ಮೇಲೆ ಹೆಚ್ಚುವರಿ ಬಡ್ಡಿ ವಿಧಿಸಲಾಗುವುದು ಎಂದು ಕೋರ್ಟ್ ಎಚ್ಚರಿಸಿದೆ. ಅಲ್ಲದೆ, ಪ್ಯಾಕ್ ಮಾಡಲಾದ ಆಹಾರ ಮತ್ತು ಪಾನೀಯ ಮಾರಾಟಗಾರರು ತಮ್ಮ ಉತ್ಪನ್ನಗಳ ಮೇಲೆ ಗರಿಷ್ಠ ಚಿಲ್ಲರೆ ಬೆಲೆಯನ್ನ ಸ್ಪಷ್ಟವಾಗಿ ಕಾಣುವಂತೆ ಮುದ್ರಿಸಬೇಕು.
ಒಂದೇ ರೀತಿಯ ಉತ್ಪನ್ನಗಳಿಗೆ ಬೇರೆ-ಬೇರೆ ಬೆಲೆಗಳನ್ನ ವಿಧಿಸುವುದನ್ನ ಕಟ್ಟುನಿಟ್ಟಾಗಿ ನಿಲ್ಲಿಸಬೇಕು ಎಂದು ಗ್ರಾಹಕ ನ್ಯಾಯಾಲಯವು ಸ್ಪಷ್ಟ ನಿರ್ದೇಶನ ನೀಡಿದೆ. ಈ ತೀರ್ಪು ಮಲ್ಟಿಪ್ಲೆಕ್ಸ್‌ಗಳಲ್ಲಿ ದುಬಾರಿ ದರ ತೆರುತ್ತಿರುವ ಅಸಂಖ್ಯಾತ ಗ್ರಾಹಕರಿಗೆ ದೊಡ್ಡ ರಿಲೀಫ್ ನೀಡಿದೆ.


Click it and Unblock the Notifications
