ಕತುವಾ ತೀರ್ಪು: ಇಬ್ಬರು ಪೊಲೀಸ್ ಸೇರಿದಂತೆ ಆರು ಜನ ದೋಷಿ
ಪಠಾಣಕೋಟ್, ಜೂನ್ 10: ಜಮ್ಮು-ಕಾಶ್ಮೀರದ ಕತುವಾದಲ್ಲಿ 2018 ರ ಜನವರಿ ತಿಂಗಳಿನಲ್ಲಿ ನಡೆದ ಎಂಟು ವರ್ಷ ವಯಸ್ಸಿನ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳಲ್ಲಿ ಆರು ಜನರನ್ನು ದೋಷಿ ಎಂದು ಪಠಾಣಕೋಟ್ ನ್ಯಾಯಾಲಯ ತೀರ್ಪು ನೀಡಿದೆ.
ಗ್ರಾಮದ ಮುಖ್ಯಸ್ಥ ಸಂಜಿ ರಾಮ್, ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳಾದ ದೀಪಕ್ ಖಾಜುರಿಯಾ ಮತ್ತು ಸುರೆಂದರ್ ವರ್ಮಾ, ಮುಖ್ಯ ಪೇದೆ ತಿಲಕ್ ರಾಜ್, ಆನಂದ್ ದತ್ತಾ ಮತ್ತು ಪರ್ವೇಶ್ ಕುಮಾರ್ ಎಂಬುವವರನ್ನು ದೋಷಿಗಳು ಎಂದು ಕೋರ್ಟು ಪರಿಗಣಿಸಿದ್ದು, ಶಿಕ್ಷೆಯ ಪ್ರಮಾಣ ಘೋಷಣೆ ಮಾಡಿಲ್ಲ. ಸಂಜಿ ರಾಮ್ ಪುತ್ರ ವಿಶಾಲ್ ನನ್ನು ನಿರ್ದೋಷಿ ಎಂದು ಕೋರ್ಟು ಘೋಷಿಸಿದೆ.

ಜನವರಿ ತಿಂಗಳಿನಲ್ಲಿ ಕತುವಾದ ಎಂಟು ವರ್ಷದ ಮಗುವನ್ನು ಅಪಹರಿಸಿ, ಅದಕ್ಕೆ ಮತ್ತುಬರುವ ಔಷಧ ನೀಡಿ ಹಲವು ದಿನಗಳ ಕಾಲ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಆಕೆಯನ್ನು ಕೆಲ ದಿನಗಳ ಕಾಲ ಹತ್ತಿರದ ದೇವಾಲಯವೊಂದರಲ್ಲಿ ಇರಿಸಿಕೊಳ್ಳಲಾಗಿತ್ತು ಎಂಬುದೂ ಆರೋಪ. ಘಟನೆಗೆ ಸಂಬಂಧಿಸಿದಂತೆ ಎಂಟು ಜನರನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣವನ್ನು ತ್ವರಿತ ನ್ಯಾಯಾಲಯದ ಮೂಲಕ 90 ದಿನಗಳೊಳಗೆ ಇತ್ಯರ್ಥಗೊಳಿಸಬೇಕೆಂದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆದೇಶಿಸಿದ್ದರು.












Click it and Unblock the Notifications