Passport: ಪಾಸ್‌ಪೋರ್ಟ್ ಮಾಡಿಸುವವರಿಗೆ ಕೇಂದ್ರ ಸರ್ಕಾರದ ಸಿಹಿಸುದ್ದಿ
ನವದೆಹಲಿ, ಜನವರಿ 13: ಪಾಸ್ ಪೋರ್ಟ್ ಮಾಡಿಸುವ ಜನರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಮಧ್ಯಪ್ರದೇಶ ರಾಜ್ಯದಲ್ಲಿ ಈ ವರ್ಷ 6 ಹೊಸ ಪಾಸ್‌ಪೋರ್ಟ್ ಸೇವಾ ಕೇಂದ್ರ ಆರಂಭವಾಗಲಿದೆ. ಅಲ್ಲದೇ ದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಆರಂಭಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಇದರಿಂದಾಗಿ ಪಾಸ್‌ಪೋರ್ಟ್ ಮಾಡಿಸಲು ಅಲೆದಾಟ ನಡೆಸುವುದು ತಪ್ಪಲಿದೆ.
ಕೇಂದ್ರ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಮ್ಮ ಕ್ಷೇತ್ರ ಗುನಾದಲ್ಲಿ ಹೊಸ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಆರಂಭಿಸಿದರು. ಬಳಿಕ ಮಾತನಾಡಿದ ಅವರು ಮಧ್ಯಪ್ರದೇಶ ರಾಜ್ಯದಲ್ಲಿ 6 ಹೊಸ ಕೇಂದ್ರ ಈ ವರ್ಷ ಆರಂಭವಾಗಲಿದೆ, ದೇಶದ ಎಲ್ಲಾ ಲೋಕಸಭಾ ಕ್ಷೇತ್ರದಲ್ಲೂ ಕಛೇರಿ ಆರಂಭವಾಗಲಿದೆ ಎಂದರು.

ಜ್ಯೋತಿರಾದಿತ್ಯ ಸಿಂಧಿಯಾ ಮಾತನಾಡಿ, "ಪಾಸ್‌ಪೋರ್ಟ್ ಸೇವಾ ಕೇಂದ್ರದ ಸೇವೆಯನ್ನು ವಿಸ್ತರಣೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದಾರೆ. ಆದ್ದರಿಂದ ಎಲ್ಲಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸೇವಾ ಕೇಂದ್ರ ತೆರೆಯಲು ಸೂಚನೆ ನೀಡಿದ್ದಾರೆ" ಎಂದು ಹೇಳಿದರು.
ಅಂಚೆ ಕಛೇರಿ ಜೊತೆ ಒಪ್ಪಂದ: ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, "ಅಂಚೆ ಕಚೇರಿ ಮತ್ತು ವಿದೇಶಾಂಗ ಇಲಾಖೆ ಜಂಟಿಯಾಗಿ ಎಲ್ಲಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೂ ಪಾಸ್‌ಪೋರ್ಟ್ ಸೇವಾ ಕೇಂದ್ರ ಆರಂಭಿಸಲು ಮುಂದಾಗಿವೆ" ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಪಾಸ್‌ಪೋರ್ಟ್ ಮಾಡಿಸುವ ಸೇವೆಯನ್ನು ಈಗ ಬಹಳಷ್ಟು ಸರಳೀಕರಣಗೊಳಿಸಿದೆ. ಇದಕ್ಕಾಗಿ ಹಲವು ಬದಲಾವಣೆಗಳನ್ನು ಮಾಡಿದೆ. ಪಾಸ್‌ಪೋರ್ಟ್ ಅರ್ಜಿ ಪ್ರಕ್ರಿಯೆಯನ್ನು ಸುಲಭವಾಗಿಸಲು ಆನ್‌ಲೈನ್ ಅರ್ಜಿ ಸಲ್ಲಿಕೆ ಸಮಯದಲ್ಲಿ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಡಿಜಿಲಾಕರ್ ಸೌಲಭ್ಯವನ್ನು ಬಳಸಿಕೊಳ್ಳುವಂತೆ ತಿಳಿಸಿದೆ.
ಈ ಕ್ರಮದಿಂದ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಮತ್ತು ಪೋಸ್ಟ್ ಆಫೀಸ್ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ ದಾಖಲೆಗಳ ಪರಿಶೀಲನೆಗೆ ತಡೆರಹಿತ ವ್ಯವಸ್ಥೆ ಬರಲಿದೆ. ಇದರಿಂದಾಗಿ ಪಾಸ್‌ಪೋರ್ಟ್ ಅರ್ಜಿ ಪರಿಶೀಲನಾ ಪ್ರಕ್ರಿಯೆಯ ಸಮಯ ಕಡಿಮೆಯಾಗಲಿದೆ.
ಈಗ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆನ್‌ಲೈನ್ ಅರ್ಜಿ ಸಲ್ಲಿಕೆ ಸಮಯದಲ್ಲಿ ವಿಳಾಸ ಮತ್ತು ಜನ್ಮ ದಿನಾಂಕದ ಮುಖ್ಯ ಪುರಾವೆಯಾಗಿ ಡಿಜಿಲಾಕರ್ ಮೂಲಕ ಆಧಾರ್ ಡಾಕ್ಯುಮೆಂಟ್ ಅನ್ನು ಸ್ವೀಕರಿಸುತ್ತದೆ. ಇದರಿಂದಾಗಿ ವಿಳಾಸ/ ಜನ್ಮ ದಿನಾಂಕ ಪುರಾವೆಗಾಗಿ ಆಧಾರ್ ಅನ್ನು ದಾಖಲೆಗಳಲ್ಲಿ ಒಂದಾಗಿ ಸಲ್ಲಿಸುವಂತೆಯೂ ಅರ್ಜಿದಾರರಿಗೆ ಸೂಚಿಸಲಾಗಿದೆ.
ಅಲ್ಲದೇ 2023ರಲ್ಲಿ ಕೇಂದ್ರ ಸರ್ಕಾರ ಮೊಬೈಲ್ ಟ್ಯಾಬ್ಲೆಟ್ ಮೂಲಕ ಪಾಸ್ ಪೋರ್ಟ್ ಪರಿಶೀಲನೆ ಸೌಲಭ್ಯವನ್ನು ಆರಂಭಿಸಿದೆ. ಇದರಿಂದಾಗಿ 15 ದಿನಗಳ ಬದಲಾಗಿ 5 ದಿನಗಳಲ್ಲಿ ಆನ್‌ಲೈನ್‌ನಲ್ಲಿ ಪಾಸ್ ಪೋರ್ಟ್ ಅರ್ಜಿಯ ಪೊಲೀಸ್ ಪರಿಶೀಲನೆ ನಡೆಯಲಿದೆ. ಈ ಆನ್‌ಲೈನ್ ಪ್ರಕ್ರಿಯೆಯಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳು ಕಡಿಮೆಯಾಗಿವೆ.
ದೇಶದ ಜನರಿಗೆ ಪಾಸ್‌ಪೋರ್ಟ್ ನೀಡುವ ಜವಾಬ್ದಾರಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ರಾಯಭಾರ ಪಾಸ್‌ಪೋರ್ಟ್ ಕಛೇರಿ ಮತ್ತು ಪ್ರಯಾಣಾನುಮತಿ (ವೀಸಾ) ವಿಭಾಗ ಹೊಂದಿದೆ. ನಿಮ್ಮ ವಿಳಾಸದ ವ್ಯಾಪ್ತಿಯೊಳಗೆ ಬರುವ ಪಾಸ್‌ಪೋರ್ಟ್ ಕಛೇರಿಗೆ ಭೇಟಿ ನೀಡಿ, ಪಾಸ್‌ಪೋರ್ಟ್ ಪಡೆಯಲು ಅರ್ಜಿ ಸಲ್ಲಿಸಬೇಕು. ಈಗ ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಕೆ ಮಾಡಲು ಅವಕಾಶವಿದೆ.
ಭರ್ತಿ ಮಾಡಿದ ಅರ್ಜಿ ಜೊತೆಗೆ ನೀವು ಮನೆ ವಿಳಾಸದ ಸಾಕ್ಷ್ಯಾಧಾರ, ಜನ್ಮ ದಿನಾಂಕದ ದಾಖಲೆ ಮುಂತಾದ ದಾಖಲೆಗಳನ್ನು ಸಲ್ಲಿಸಬೇಕು. ಪಾಸ್‌ಪೋರ್ಟ್ ಕಛೇರಿಯಲ್ಲಿ ಅರ್ಜಿ ಸಲ್ಲಿಸುವಾಗ ಸ್ವಯಂ ದೃಢೀಕೃತ ಪ್ರಮಾಣ ಪತ್ರಗಳನ್ನು, ದಾಖಲೆಗಳನ್ನು ಮೂಲ ದಾಖಲಾತಿಗಳ ಜೊತೆ ಪರಿಶೀಲಿಸಲಾಗುತ್ತದೆ. ಅಂಚೆ ಮೂಲಕ ಕಳುಹಿಸುವ ಅರ್ಜಿಯ ಜೊತೆಗಿನ ಪ್ರಮಾಣಪತ್ರ ಮತ್ತು ದಾಖಲೆಗಳ ಮೇಲೆ ಗೆಜೆಟೆಡ್ ಅಧಿಕಾರಿಯ ಸಹಿ ಇರಬೇಕು.
ಸಾಮಾನ್ಯವಾಗಿ 5 ರಿಂದ 6 ವಾರಗಳಲ್ಲಿ ಪಾಸ್‌ಪೋರ್ಟ್ ನೀಡಲಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಹೊಸ ಅಥವಾ ನಕಲು ಪಾಸ್ ಪೋರ್ಟ್ ಅನ್ನು ಪಡೆಯಲು ತತ್ಕಾಲ್ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಸಾಮಾನ್ಯವಾಗಿರುವ ಶುಲ್ಕಕ್ಕಿಂತ ತತ್ಕಾಲ್ ಯೋಜನೆ ಅಡಿಯಲ್ಲಿ ಹೆಚ್ಚಿನ ಶುಲ್ಕವನ್ನು ಪಡೆದು ಪಾಸ್‌ಪೋರ್ಟ್ ನೀಡಲಾಗುತ್ತದೆ.












Click it and Unblock the Notifications