ರೈಲ್ವೆ ಟಿಕೆಟ್ ಮೇಲೆ ಶೇ 20ರ ರಿಯಾಯಿತಿ: ಯಾರಿಗೆ ಸಿಗಲಿದೆ ಈ ಆಫರ್?
ಚೆನ್ನೈ, ನವೆಂಬರ್ 12: ರಾಜಧಾನಿ, ಶತಾಬ್ದಿ ಮತ್ತು ದುರಂತೋ ಸ್ಪೆಷಲ್‌ನಂತಹ ಪ್ರಮುಖ ರೈಲುಗಳಲ್ಲಿ ಪ್ರಯಾಣಿಕರಿಗೆ ಟಿಕೆಟ್‌ನ ಮೂಲ ದರದ ಮೇಲೆ ಶೇ 20ರವರೆಗೂ ರಿಯಾಯಿತಿ ಸಿಗಲಿದೆ ಎಂದು ಭಾರತೀಯ ರೈಲ್ವೆ ಪ್ರಕಟಿಸಿದೆ. ವಿಮಾನಯಾನ ಸಂಸ್ಥೆಗಳ ರೀತಿಯಲ್ಲಿಯೇ ರೈಲ್ವೇ ಕೂಡ ಟಿಕೆಟ್ ದರದ ಮೇಲಿನ ರಿಯಾಯಿತಿ ನೀಡಲು ಮುಂದಾಗಿದೆ. ಇದು ಸೀಟುಗಳ ಭರ್ತಿಯಾಗುವಿಕೆಯ ಮಟ್ಟವನ್ನು ಅವಲಂಬಿಸಿರುತ್ತದೆ.
ಲಾಕ್‌ಡೌನ್ ಸಂದರ್ಭದಲ್ಲಿ ಪ್ರೀಮಿಯರ್ ಟ್ರೈನುಗಳಲ್ಲಿನ ಓಡಾಟಕ್ಕೆ ಜನರು ಹೆಚ್ಚಿನ ಆದ್ಯತೆ ನೀಡುವ ಉದ್ದೇಶದೊಂದಿಗೆ ರೈಲ್ವೇಸ್ ಈ ರಿಯಾಯಿತಿ ಯೋಜನೆಯನ್ನು ಆರಂಭಿಸಿದೆ.
ರೈಲ್ವೆ ಟಿಕೆಟ್ ಕಾಯ್ದಿರಿಸುವ ಸಂದರ್ಭದಲ್ಲಿ ಶೇ 60ರಷ್ಟು ಸೀಟುಗಳು ಭರ್ತಿಯಾಗಿದ್ದರೆ ಪ್ರಯಾಣಿಕರಿಗೆ ಮೂಲ ದರದ ಮೇಲೆ ಶೇ 20ರಷ್ಟು ರಿಯಾಯಿತಿಯ ಆಫರ್ ಸಿಗಲಿದೆ. ಹಾಗೆಯೇ ಶೇ 70-80ರಷ್ಟು ಸೀಟುಗಳು ಭರ್ತಿಯಾಗಿದ್ದರೆ ಪ್ರಯಾಣಿಕರು ಶೇ 10ರಷ್ಟು ರಿಯಾಯಿತಿ ಪಡೆಯಲಿದ್ದಾರೆ. ಶೇ 80ಕ್ಕಿಂತ ಹೆಚ್ಚಿನ ಸೀಟುಗಳು ಭರ್ತಿಯಾಗಿದ್ದರೆ ಯಾವುದೇ ರಿಯಾಯಿತಿಯ ಆಫರ್ ಸಿಗುವುದಿಲ್ಲ.

ಆದರೆ ಈ ದರದಲ್ಲಿನ ವಿನಾಯಿತಿಯು ಥರ್ಡ್ ಟೈರ್ ಎಸಿ ಕ್ಲಾಸ್ ಮತ್ತು ಎಸಿ ಚೇರ್ ಕಾರ್‌ನಲ್ಲಿನ ಟಿಕೆಟ್ ಬುಕ್ಕಿಂಗ್‌ಗೆ ಮಾತ್ರ ಅನ್ವಯಿಸುತ್ತದೆ. ಕಾಯ್ದಿರಿಸುವಿಕೆಯ ಶುಲ್ಕ, ಸುಪರ್ ಫಾಸ್ಟ್ ಮತ್ತು ಜಿಎಸ್‌ಟಿಗಳಂತಹ ಇತರೆ ದರಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ.
ರೈಲುಗಳು ಹೊರಡುವ ನಿಗದಿತ ಸಮಯದ ನಾಲ್ಕು ದಿನಗಳಿಗೂ ಮುಂಚಿನವರೆಗೆ ಟಿಕೆಟ್‌ಗಳನ್ನು ಕಾಯ್ದಿರಿಸುವ ಎಲ್ಲ ಪ್ರಯಾಣಿಕರಿಗೂ ಈ ರಿಯಾಯಿತಿ ಸಿಗಲಿದೆ. ಆದರೆ ಪ್ರಯಾಣದ ದಿನ ಟಿಕೆಟ್ ಬುಕ್ ಮಾಡಿದರೆ ದರದಲ್ಲಿ ಯಾವುದೇ ಕಡಿತವಾಗುವುದಿಲ್ಲ.
ಉದಾಹರಣೆಗೆ ಪ್ರಯಾಣಿಕರು ನವೆಂಬರ್ 15ರಂದು ಟ್ರೈನಿನಲ್ಲಿ ಪ್ರಯಾಣಿಸಬೇಕಿದ್ದರೆ, ನವೆಂಬರ್ 11ರಿಂದ 14ರವರೆಗೆ ಟಿಕೆಟ್‌ಗಳನ್ನು ಕಾಯ್ದಿರಿಸಿದರೆ ಈ ಯೋಜನೆಯಡಿ ರಿಯಾಯತಿ ಸಿಗುತ್ತದೆ.












Click it and Unblock the Notifications