
ಗಿಳಿ ಕಾಣೆಯಾಗಿದೆ ಹುಡುಕಿಕೊಡಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ವ್ಯಕ್ತಿ
ಜಗದಲ್‌ಪುರ, ಮೇ 14: ಸ್ನೇಹ, ಪ್ರೀತಿ ಎಂಬುದು ಅದ್ಭುತವಾದ ಬಾಂಧವ್ಯ. ಇದಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಭೂಮಿಯ ಮೇಲಿನ ಪ್ರತಿಯೊಂದು ಜೀವಿಯೂ ಒಂದಲ್ಲ ಒಂದು ರೀತಿಯಲ್ಲಿ ಸ್ನೇಹ ಬಯಸುತ್ತವೆ. ಸ್ನೇಹ ಪ್ರೀತಿಯನ್ನು ಮನುಷ್ಯರು ಮನುಷ್ಯರೊಡನೆ ಕಂಡುಕೊಳ್ಳಬೇಕಿಲ್ಲ. ಭೂಮಿಯ ಮೇಲಿನ ಯಾವುದೇ ಜೀವಿಯ ಜೊತೆಯಲ್ಲಾದರೂ ಕಂಡುಕೊಳ್ಳಬಹುದು. ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಬಾಂಧವ್ಯವೂ ಕೂಡ ರಕ್ತ ಸಂಬಂಧಕ್ಕಿಂತ ಹೆಚ್ಚಾಗಿರುತ್ತದೆ. ಇಲ್ಲೊಬ್ಬ ವ್ಯಕ್ತಿ ತಾನೂ 7 ವರ್ಷಗಳಿಂದ ಸಾಕಿದ್ದ ಮುದ್ದಿನ ಗಿಳಿಯೊಂದ ಕಳೆದು ಹೋಗಿರುವ ಕಾರಣಕ್ಕೆ ಪೊಲೀಸ್ ಮೆಟ್ಟಿಲೇರಿರುವ ಆಶ್ಚರ್ಯಕರ ಘಟನೆ ನಡೆದಿದೆ.
ಪ್ರೀತಿಯಿಂದ ಸಾಕಿದ್ದ ಗಿಳಿ ಕಾಣೆಯಾದ ಕಾರಣ ಛತ್ತೀಸ್ಗಢದ ಬಾಸ್ತರ್ ಜಿಲ್ಲೆಯ ಜಗದಲ್‌ಪುರ ನಿವಾಸಿ ಮನೀಷ್ ಠಕ್ಕರ್ ಎಂಬಾತನೆ ಪೊಲೀಸ್ ಮೆಟ್ಟಿಲೇರಿರುವ ವ್ಯಕ್ತಿ.ನಾನು ಪ್ರೀತಿಯಿಂದ ಸಾಕಿದ್ದ ಸಾಕಿದ್ದ ಗಿಳಿ ನನಗೆ ಮೋಸ ಮಾಡಿ ಹೋಗಿದೆ. ಅದನ್ನು ಹುಡುಕಿ ತರಬೇಕು. ನಾನು ಗುರುವಾರ ಬೆಳಿಗ್ಗೆ ಪಂಜರ ನೋಡಿದಾಗ ಅದರ ಬಾಗಿಲು ತೆರೆದಿತ್ತು. ಆದರೆ ಅದರಲ್ಲಿ ಗಿಳಿ ಇರಲಿಲ್ಲ. ನಾನು ಮನೆಯ ಅಕ್ಕಪಕ್ಕದಲ್ಲೆ ಹುಡುಕಿದೆ, ಆದರೆ ನನ್ನ ಕಣ್ಣಿಗೆ ಬಿದ್ದಿಲ್ಲ. ದಯವಿಟ್ಟು ನನ್ನ ಗಿಳಿಯನ್ನು ಹುಡುಕಿಕೊಡಿ ಎಂದು ಮನೀಶ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ. ಈ ಠಕ್ಕರ್ ನೀಡಿರುವ ದೂರು ಸ್ವೀಕರಿಸಿರುವ ಜಗದಲ್‌ಪುರ ಪೊಲೀಸರು, ಗಿಳಿಯ ಹುಡುಕಾಟ ಆರಂಭಿಸಿದ್ದಾರೆ.
ಗಿಳಿ ನಮ್ಮ ಇಡೀ ಕುಟುಂಬದ ಮುದ್ದು
ನಾವು ಗಿಳಿಯನ್ನು ಕಳೆದ 7 ವರ್ಷಗಳಿಂದ ತುಂಬಾ ಪ್ರೀತಿಯಿಂದ ಸಾಕಿದ್ದೆವು. ನಮ್ಮ ಇಡೀ ಕುಟುಂಬಕ್ಕೆ ಅದು ಮುದ್ದಿನ ಗಿಣಿಯಾಗಿತ್ತು. ಮನೆಯ ಸದಸ್ಯರೆಲ್ಲರೂ ನಮ್ಮವರಲೊಬ್ಬ ಎಂಬಂತೆ ನೋಡಿಕೊಳ್ಳುತ್ತಿದ್ದೆವು. ಗಿಳಿಯೂ ಕೂಡ ಎಲ್ಲರೊಂದಿಗೆ ಪ್ರೀತಿಯಿಂದಿತ್ತು. ಆದರೂ ಅದು ಹಾರಿ ಹೋಗಲು ಹೇಗೆ ಸಾಧ್ಯ? ಬಹಶಃ ಇದರಲ್ಲಿ ಯಾರದ್ದೊ ಪಿತೂರಿ ಇರಬೇಕು. ಹಾಗಾಗಿ ನಾವು ಆ ಗಿಳಿಯನ್ನು ಹುಡಕಬೇಕು ಎಂದು ಬಯಸುತ್ತೇವೆ, ನೀವು ನಮಗೆ ಸಹಾಯ ಮಾಡಿ ಎಂದು ಪೊಲೀಸರ ಬಳಿ ಗಿಳಿ ಮಾಲೀಕ ಮನವಿ ಮಾಡಿದ್ದಾರೆ.

ದೂರು ಸ್ವೀಕರಿಸಿದ ಪೊಲೀಸ್
ಮನೀಶ್ ನೀಡಿರುವ ದೂರನ್ನು ಸ್ವೀಕರಿಸಿರುವುದಾಗಿ ಜಗದಲ್‌ಪುರ ಸಿಟಿಯ ಎಸ್‌ಎಚ್‌ಒ ಎಮಾನ್ ಸಾಹು ತಿಳಿಸಿದ್ದಾರೆ. " ಮನೀಶ್ ನೀಡಿರುವ ದೂರು ಸ್ವೀಕರಿಸಲಾಗಿದ್ದು. ಸಿಟಿಯಲ್ಲಿ ಅಳವಡಿಸಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಗಿಳಿಯನ್ನು ಪತ್ತೆಹಚ್ಚಿ ಅದರ ಮಾಲೀಕರಿಗೆ ಹಸ್ತಾಂತರಿಸುತ್ತೇವೆ ಎಂದು ಸಾಹು ತಿಳಿಸಿದ್ದಾರೆ.
ಇಂತಹ ಪ್ರಕರಣ ಇದೇ ಮೊದಲೇನಲ್ಲ
ತನ್ನ ನೆಚ್ಚಿನ ಗಿಳಿ ಕಳೆದು ಹೋಗಿದೆ ಎಂದು ಪೊಲೀಸ್ ಮೊರೆ ಹೋಗಿರುವುದು ಇದೇ ಮೊದಲೇನಲ್ಲ. ಇದೇ ವರ್ಷ ಫೆಬ್ರವರಿಯಲ್ಲಿ ರಾಜಸ್ಥಾನದ ವೈದ್ಯರೊಬ್ಬರು ತನ್ನ ಸಾಕಿದ ಗಿಳಿ ಕಳೆದು ಹೋಗಿದೆ ಎಂದು ಜಾಹೀರಾತು ನೀಡಿದ್ದರು. ಒಂದು ವೇಳೆ ಅದನ್ನು ಹುಡುಕಿ ತಂದುಕೊಟ್ಟರೆ ಒಂದು ಲಕ್ಷ ರೂ ಬಹುಮಾನ ನೀಡುವುದಾಗಿ ತಿಳಿಸಿದ್ದರು.