Parliament special session: ವಿಶೇಷ ಅಧಿವೇಶನದಲ್ಲಿ ಏನು ನಡೆಯುತ್ತೆ ಎನ್ನುವುದು ಕ್ಯಾಬಿನೆಟ್ ಸಚಿವರಿಗೇ ಗೊತ್ತಿಲ್ಲ
ನವದೆಹಲಿ, ಸೆಪ್ಟೆಂಬರ್ 16: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಿಶೇಷ ಅಧಿವೇಶನವನ್ನು ಕರೆದಿದೆ. ಈ ಅಧಿವೇಶನವು ಸೆಪ್ಟೆಂಬರ್ 18 ರಿಂದ 22 ರ ವರೆಗೆ ನಡೆಯಲಿದೆ. ಆದರೆ, ಈ ವಿಶೇಷ ಕಲಾಪದಲ್ಲಿ ಏನು ನಡೆಯಲಿದೆ, ಇದರ ಮೂಲಕ ಅಜೆಂಡಾ ಏನು ಎಂಬುದು ಕೇಂದ್ರ ಸರ್ಕಾರ ಸಚಿವರಿಗೇ ತಿಳಿದಿಲ್ಲವೆಂಬ ಮಾಹಿತಿ ಲಭ್ಯವಾಗಿದೆ.
ಭಾನುವಾರ ಅಂದರೆ ಸೆಪ್ಟೆಂಬರ್ 17 ರಂದು ಸರ್ವಪಕ್ಷಗಳ ಸಭೆಯನ್ನು ಪ್ರಧಾನಿ ಮೋದಿ ಕರೆದಿದ್ದಾರೆ. ಈ ಸಮಯದಲ್ಲಿ ಸುಗಮ ಕಲಾಪಕ್ಕೆ ಅವರು ಮನವಿ ಮಾಡಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಈ ವರೆಗಿನ ಮಾಹಿತಿಯ ಪ್ರಕಾರ, ಲೋಕಸಭೆ ಚುನಾವಣೆಗೂ ಮುನ್ನ ನಡೆಯುತ್ತಿರುವ ಈ ವಿಶೇಷ ಅಧಿವೇಶನದ ಮೂಲ ಅಜೆಂಡಾವೇನು ಎಂಬುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

ಒಂದು ರಾಷ್ಟ್ರ, ಒಂದು ಚುನಾವಣೆ, ಮಹಿಳಾ ಮೀಸಲಾತಿ, ವಕೀಲರ ತಿದ್ದುಪಡಿ ಮಸೂದೆಗಳಂತಹ ಮಹತ್ವದ ಮಸೂದೆಗಳ ಕುರಿತು ಚರ್ಚೆಯಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ವಿಶೇಷ ಕಲಾಪದ ಕುರಿತು ಪ್ರಧಾನಿ ಮೋದಿ ಏನನ್ನೂ ಬಹಿರಂಗಪಡಿಸಿಲ್ಲವೆಂದು ತಿಳಿದುಬಂದಿದೆ.
ಭಾನುವಾರ ನಡೆಯುವ ಸರ್ವಪಕ್ಷಗಳ ಸಭೆಗೂ ಮುನ್ನ ಪ್ರಧಾನಿ ಮೋದಿ ( ಶನಿವಾರ ಸಂಜೆ ) ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ. ಈ ಮಾತುಕತೆ ಸಂದರ್ಭ ಕಲಾಪದ ಮೂಲ ಅಜೆಂಡಾ ಕುರಿತು ಪ್ರಧಾನಿ ಮೋದಿ ಪ್ರಸ್ತಾಪಿಸಬಹುದು ಎನ್ನಲಾಗುತ್ತಿದೆ.
ಕುತೂಹಲಕರ ವಿಚಾರವೆಂದರೆ, ಪ್ರಧಾನಿ ಮೋದಿ ಈ ವರೆಗೂ ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಕ್ಯಾಬಿನೆಟ್ ಸಚಿವರ ಸಭೆ ನಡೆಸಿದ್ದರೂ, ಕಲಾಪದ ಮೂಲ ಅಜೆಂಡಾಗಳ ಕುರಿತು ಯಾವುದೇ ಪ್ರಸ್ತಾಪ ಮಾಡಿಲ್ಲ. ಇದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ತಾತ್ಕಾಲಿಕ ಕಾರ್ಯಸೂಚಿಯಲ್ಲಿ ಪಟ್ಟಿ ಮಾಡಲಾದ ಮಸೂದೆಗಳು
ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರು (ನೇಮಕಾತಿ, ಸೇವಾ ಷರತ್ತುಗಳು ಮತ್ತು ಕಛೇರಿಯ ಅವಧಿ) ಮಸೂದೆ- 2023.
ವಕೀಲರ (ತಿದ್ದುಪಡಿ) ಮಸೂದೆ- 2023, ಪೋಸ್ಟ್ ಆಫೀಸ್ ಬಿಲ್- 2023 ಮತ್ತು ದಿ ಪ್ರೆಸ್ ಮತ್ತು ರಿಜಿಸ್ಟ್ರೇಶನ್ ಆಫ್ ಪಿರಿಯಾಡಿಕಲ್ಸ್ ಬಿಲ್- 2023.
ಮುಂಬರುವ ವಿಶೇಷ ಅಧಿವೇಶನದಲ್ಲಿ ಇಂಡಿಯಾವನ್ನು ಭಾರತ ಎಂದು ಮರುನಾಮಕರಣ ಮಾಡಲು ಸರ್ಕಾರ ನಿರ್ಣಯವನ್ನು ತರಬಹುದು. ಈ ಬದಲಾವಣೆಯನ್ನು ಜಾರಿಗೆ ತರಲು ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಮಂಡಿಸಬಹುದು ಎಂದು ಹೇಳಲಾಗುತ್ತಿದೆ.
ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ, ಏಕರೂಪ ನಾಗರಿಕ ಸಂಹಿತೆ ( ಯುಸಿಸಿ ) ಮತ್ತು ಒಂದು ದೇಶ, ಒಂದು ಚುನಾವಣೆ ಕುರಿತು ಚರ್ಚೆ ನಡೆಸಬಹುದು ಎಂದು ವರದಿಯಾಗಿದೆ.












Click it and Unblock the Notifications