35 ವರ್ಷದ ಸ್ಯಾಲರಿ, 30 ಕೋಟಿ ರೂ. ಬಹುಮಾನ ಬಡವರಿಗೆ ದಾನ ಮಾಡಿದ ಭಾರತದ ಅತಿ ಶ್ರೀಮಂತ ಬಡವ!

ಭಾರತದ ಅತಿ ಶ್ರೀಮಂತ ಬಡವ ಎಂಬ ಬಿರುದು ಕೇಳಿದ ತಕ್ಷಣ ಪ್ರತಿಯೊಬ್ಬರಿಗೂ ನೆನಪಾಗುವ ಏಕೈಕ ಮಾದರಿ ವ್ಯಕ್ತಿತ್ವ ಪಾಲಂ ಕಲ್ಯಾಣಸುಂದರಂ ಅವರದ್ದು. ತಮಿಳುನಾಡಿನ ನಿವೃತ್ತ ಗ್ರಂಥಪಾಲಕರಾಗಿರುವ ಇವರು, ತಮ್ಮ ಇಡೀ ಜೀವಮಾನವನ್ನ ಸಮಾಜದ ಒಳಿತಿಗಾಗಿ ಹಾಗೂ ಬಡವರ ಸೇವೆಗಾಗಿಯೇ ಮುಡಿಪಾಗಿಟ್ಟಿದ್ದಾರೆ.

ಹೌದು, ತಾವು ಕಷ್ಟಪಟ್ಟು ದುಡಿದ 35 ವರ್ಷಗಳ ಸಂಪೂರ್ಣ ವೇತನ, ನಿವೃತ್ತಿಯ ನಂತರ ಬಂದ ಪಿಂಚಣಿ, ತಮ್ಮ ಹೆಸರಿನಲ್ಲಿದ್ದ ಪಿತ್ರಾರ್ಜಿತ ಆಸ್ತಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ರೂಪದಲ್ಲಿ ಒಲಿದು ಬಂದ ಬರೋಬ್ಬರಿ 30 ಕೋಟಿ ರೂಪಾಯಿಗಳ ಬೃಹತ್ ಬಹುಮಾನವನ್ನ ಬಡ ಮತ್ತು ಅನಾಥ ಮಕ್ಕಳ ಏಳಿಗೆಗಾಗಿ ದಾನ ಮಾಡುವ ಮೂಲಕ ಕಲ್ಯಾಣಸುಂದರಂ ಅವರು ಇಡೀ ಜಗತ್ತಿಗೆ ಒಂದೊಳ್ಳೆ ಆದರ್ಶವಾಗಿದ್ದಾರೆ.

Palam Kalyanasundaram India s Richest Poor Man Who Donated Rs 30 Crore Award To The Orphans

ಪಾಲಂ ಕಲ್ಯಾಣಸುಂದರಂ ಹಿನ್ನೆಲೆ

1940ರ ಆಗಸ್ಟ್ ತಿಂಗಳಲ್ಲಿ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಮೇಲಕರಿವೇಲಂಕುಲಂ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ಕಲ್ಯಾಣಸುಂದರಂ, ಬಾಲ್ಯದಲ್ಲೇ ತಮ್ಮ ತಂದೆಯನ್ನ ಕಳೆದುಕೊಂಡರು. ಅವರ ತಾಯಿ ತಾಯಮ್ಮಾಳ್ ಅವರು ಹೇಳಿಕೊಟ್ಟ ಸಂಸ್ಕಾರವೇ ಅವರ ಸಮಾಜ ಸೇವೆಯ ಹಾದಿಗೆ ಅತಿ ದೊಡ್ಡ ಪ್ರೇರಣೆಯಾಯಿತು.

ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ವಿಜ್ಞಾನದಲ್ಲಿ ಚಿನ್ನದ ಪದಕ ಹಾಗೂ ಇತಿಹಾಸ ಮತ್ತು ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು, ತೂತ್ತುಕುಡಿ ಜಿಲ್ಲೆಯ ಶ್ರೀ ಕುಮರ ಗುರುಪರ ಸ್ವಾಮಿಗಳ ಕಲಾ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು.

ಶಿಕ್ಷಣದ ಉದ್ದೇಶ ಕೇವಲ ಹಣ ಗಳಿಸುವುದಲ್ಲ, ಸಮಾಜಕ್ಕೆ ಸೇವೆ ಸಲ್ಲಿಸುವುದು ಎಂದು ನಂಬಿದ್ದ ಅವರು ತಮ್ಮ ಮೊದಲ ಸಂಬಳದಿಂದಲೇ ದಾನ ಮಾಡಲು ಶುರು ಮಾಡಿದರು. 1962ರ ಇಂಡೋ-ಚೀನಾ ಯುದ್ಧದ ಸಮಯದಲ್ಲಿ ಅಂದಿನ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರು ದೇಶದ ಜನರಲ್ಲಿ ಆರ್ಥಿಕ ನೆರವಿಗಾಗಿ ಮನವಿ ಮಾಡಿದಾಗ, ಯುವಕರಾಗಿದ್ದ ಕಲ್ಯಾಣಸುಂದರಂ ಅವರು ಅಂದಿನ ಮುಖ್ಯಮಂತ್ರಿ ಕೆ. ಕಾಮರಾಜ್ ಅವರನ್ನ ಭೇಟಿಯಾಗಿ ತಮ್ಮ ಕೊರಳಲ್ಲಿದ್ದ ಚಿನ್ನದ ಸರವನ್ನೇ ರಾಷ್ಟ್ರೀಯ ಭದ್ರತಾ ನಿಧಿಗೆ ದಾನ ಮಾಡಿದ್ದರು.

ಸಂಪೂರ್ಣ ವೇತನ ಹಾಗೂ 30 ಕೋಟಿ ರೂ. ಬಹುಮಾನ ದಾನ ಮಾಡಿದ ಮಹನೀಯ

ತಮ್ಮ 35 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಅವರು ಪ್ರತಿ ತಿಂಗಳ ಸ್ಯಾಲರಿಯನ್ನ ಬಡವರು, ಅನಾಥ ಮಕ್ಕಳು ಹಾಗೂ ನಿರ್ಗತಿಕರ ಶಿಕ್ಷಣ, ಬಟ್ಟೆ ಹಾಗೂ ಕಲ್ಯಾಣಕ್ಕಾಗಿ ದಾನ ಮಾಡುತ್ತಿದ್ದರು. ತಮ್ಮ ಹೊಟ್ಟೆಪಾಡಿಗೆ ಹಾಗೂ ದೈನಂದಿನ ಖರ್ಚುಗಳನ್ನ ನಿಭಾಯಿಸಲು ಅವರು ಕಚೇರಿ ಸಮಯ ಮುಗಿದ ನಂತರ ಹೋಟೆಲ್‌ಗಳಲ್ಲಿ ಸಪ್ಲೈಯರ್ ಆಗಿ ಹಾಗೂ ಇತರೆ ಸಣ್ಣಪುಟ್ಟ ಕೂಲಿ ಕೆಲಸಗಳನ್ನ ಮಾಡಿ ಜೀವನ ಸಾಗಿಸಿದರು.

ಸಮಾಜ ಸೇವೆಗಾಗಿಯೇ ತಮ್ಮ ಜೀವನವನ್ನ ಮುಡಿಪಾಗಿಟ್ಟು, ಮದುವೆಯಾಗದೆ ಬ್ರಹ್ಮಚಾರಿಯಾಗಿ ಉಳಿದ ಇವರಿಗೆ ಅಮೆರಿಕದ ಸಂಸ್ಥೆಯೊಂದು ಇವರ ಸೇವೆಯನ್ನು ಗುರುತಿಸಿ ಮ್ಯಾನ್ ಆಫ್ ದಿ ಮಿಲೇನಿಯಮ್ (Man of the Millennium) ಪ್ರಶಸ್ತಿಯೊಂದಿಗೆ ಸುಮಾರು 30 ಕೋಟಿ ರೂಪಾಯಿಗಳ ಬೃಹತ್ ಮೊತ್ತದ ಬಹುಮಾನ ನೀಡಿತ್ತು.

ಅಚ್ಚರಿಯೆಂದರೆ ಆ ಸಂಪೂರ್ಣ ಹಣವನ್ನೂ ಅವರು ಅನಾಥ ಮಕ್ಕಳ ಏಳಿಗೆಗೆಂದೇ ದಾನ ಮಾಡಿದರು. 1998ರಲ್ಲಿ ನಿವೃತ್ತರಾದ ನಂತರ ತಮಗೆ ಬಂದ 10 ಲಕ್ಷ ರೂಪಾಯಿ ಪಿಂಚಣಿ ಹಣವನ್ನೂ ಅವರು ತಮ್ಮ ಸ್ವಂತಕ್ಕೆ ಉಳಿಸಿಕೊಳ್ಳದೆ ಸಮಾಜಕ್ಕೆ ಒಳಿತಿಗೆ ನೀಡಿದರು.

ಪದ್ಮಶ್ರೀ ಪುರಸ್ಕಾರ, ಪಾಲಂ ಸಂಸ್ಥೆ ಹಾಗೂ ರಜನಿಕಾಂತ್ ಮೆಚ್ಚುಗೆ

ಕಲ್ಯಾಣಸುಂದರಂ ಅವರ ಈ ಸೇವೆಯನ್ನು ಗುರುತಿಸಿ, ಭಾರತ ಸರ್ಕಾರವು 1990ರಲ್ಲಿ ಅವರಿಗೆ 'ಉತ್ತಮ ಗ್ರಂಥಪಾಲಕ' ಪ್ರಶಸ್ತಿ ನೀಡಿದ್ದರೆ, 2023ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ 'ಪದ್ಮಶ್ರೀ' ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ನಿವೃತ್ತಿಯ ನಂತರ 1998ರಲ್ಲಿ ಅವರು 'ಪಾಲಂ' ಎಂಬ ಸಂಸ್ಥೆಯನ್ನ ಹುಟ್ಟುಹಾಕಿದರು. ಈ ಸಂಸ್ಥೆಯ ಮೂಲಕ ದಾನಿಗಳು ಹಾಗೂ ನಿರ್ಗತಿಕರ ನಡುವೆ ಸೇತುವೆಯಾಗಿ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ವಿಶ್ವಸಂಸ್ಥೆ ಇವರನ್ನು '20ನೇ ಶತಮಾನದ ಅತ್ಯುತ್ತಮ ವ್ಯಕ್ತಿಗಳಲ್ಲಿ ಒಬ್ಬರು' ಎಂದು ಗುರುತಿಸಿದೆ. ಇವರ ನಿಸ್ವಾರ್ಥ ಸೇವೆ ಹಾಗೂ ತ್ಯಾಗಮಯಿ ಬದುಕನ್ನ ಕಂಡು ಬೆರಗಾದ ದಕ್ಷಿಣ ಭಾರತದ ಖ್ಯಾತ ನಟ ಸೂಪರ್‌ಸ್ಟಾರ್ ರಜನಿಕಾಂತ್ ಅವರು, ಕಲ್ಯಾಣಸುಂದರಂ ಅವರನ್ನು ಭೇಟಿಯಾಗಿ ತಮ್ಮ ಸಾಕು ತಂದೆಯಾಗಿ ಸ್ವೀಕರಿಸಿದರು ಎಂಬುದು ಮತ್ತೊಂದು ವಿಶೇಷ.

ಕೇವಲ ಬದುಕಿದ್ದಾಗ ಮಾತ್ರವಲ್ಲ, ಮರಣಾನಂತರವೂ ಸಮಾಜಕ್ಕೆ ಉಪಯೋಗವಾಗಲಿ ಎಂಬ ಸದಾಶಯದಿಂದ ತಮ್ಮ ದೇಹ ಹಾಗೂ ಕಣ್ಣುಗಳನ್ನು ವೈದ್ಯಕೀಯ ಸಂಶೋಧನೆಗಾಗಿ ದಾನ ಮಾಡಲು ಅವರು ಈಗಾಗಲೇ ನಿರ್ಧರಿಸಿದ್ದಾರೆ.

ನಿಜವಾದ ಸಂಪತ್ತು ಅಡಗಿರುವುದು ನಾವು ಎಷ್ಟು ಉಳಿಸುತ್ತೇವೆ ಎಂಬುದರಲ್ಲಲ್ಲ, ಬದಲಾಗಿ ಸಮಾಜಕ್ಕೆ ನಾವು ಎಷ್ಟು ನೀಡುತ್ತೇವೆ ಎಂಬುದರಲ್ಲಿ ಎಂಬ ಬಹುದೊಡ್ಡ ಜೀವನಪಾಠವನ್ನು ಪಾಲಂ ಕಲ್ಯಾಣಸುಂದರಂ ಅವರ ಬದುಕು ನಮಗೆ ಕಲಿಸುತ್ತದೆ. ಹಣ, ಆಸ್ತಿ, ಅಂತಸ್ತುಗಳೇ ಸರ್ವಸ್ವ ಎಂದುಕೊಳ್ಳುವ ಇಂದಿನ ಸ್ವಾರ್ಥ ಜಗತ್ತಿನಲ್ಲಿ, ತಮ್ಮ ಸರ್ವಸ್ವವನ್ನೂ ಸಮಾಜದ ಒಳಿತಿಗಾಗಿ ಅರ್ಪಿಸಿದ ಈ ಭಾರತದ ಅತಿ ಶ್ರೀಮಂತ ಬಡವ ಇಡೀ ವಿಶ್ವಕ್ಕೇ ಸ್ಫೂರ್ತಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+