ಭಾರತೀಯ ನೆಲೆ ಮೇಲೆ ಕೆಂಡಕಾರಿದ ಪಾಕಿಸ್ತಾನಿ ಪಡೆ
ಜಮ್ಮುಕಾಶ್ಮೀರ, ಜುಲೈ, 18 : ಕದನವಿರಾಮವನ್ನು ಪುನಃ ಉಲ್ಲಂಘಿಸಿದ ಪಾಕಿಸ್ತಾನಿ ಪಡೆಗಳು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ವಿಭಾಗದಲ್ಲಿ ಹಲವಾರು ಕಡೆ ಭಾರತೀಯ ನೆಲೆಗಳ ಮೇಲೆ ಗುಂಡಿನ ದಾಳಿ ನಡೆಸಿವೆ.
ಪಾಕಿಸ್ತಾನಿ ಸೇನೆ ತನ್ನ ಅಪ್ರಚೋದಿತ ಗುಂಡಿನ ದಾಳಿಯನ್ನು ಶನಿವಾರ ರಾತ್ರಿ 9.25 ಕ್ಕೆ ಆರಂಭಿಸಿದ್ದು, ರಾತ್ರಿ 11.45ರವರೆಗೂ ದಾಳಿ ಮುಂದುವರೆದಿದೆ. ಗಡಿಯಾಚೆಯಿಂದ ನಡೆಯುತ್ತಿದ್ದ ಅಪ್ರಚೋದಿತ ಗುಂಡಿನ ದಾಳಿಗೆ ನಮ್ಮ ಪಡೆಗಳು ಪರಿಣಾಮಕಾರಿ ಉತ್ತರ ನೀಡಿವೆ. ಇದುವರೆಗೂ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ರಕ್ಷಣಾ ವಕ್ತಾರರು ತಿಳಿಸಿದರು.[ಸಂಕುಚಿತ ಮನೋಭಾವದ ಪಾಕ್ ಗೆ ಈದ್ ಸಿಹಿಯೂ ಕಹಿ]

ಪಾಕಿಸ್ತಾನದ ಕಡೆಯಿಂದ ಕದನ ವಿರಾಮ ಉಲ್ಲಂಘನೆಗಳು ಈ ತಿಂಗಳಲ್ಲಿ ದಿಢೀರನೆ ಹೆಚ್ಚಾಗಿದ್ದು, ಕಳೆದ ಜುಲೈ 15ರಂದು ಜಮ್ಮುವಿನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ಮಹಿಳೆ ಸಾವನ್ನಪ್ಪಿದ್ದರು. ಜೊತೆಗೆ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಯೋಧ ಸೇರಿದಂತೆ 6 ಮಂದಿ ಗಾಯಗೊಂಡಿದ್ದರು. ಪಾಕಿಸ್ತಾನಿ ಪಡೆಗಳು ಆ ದಿನ ಗುಂಡಿನ ದಾಳಿ ಜೊತೆಗೆ ಫಿರಂಗಿ ದಾಳಿಯನ್ನೂ ನಡೆಸಿದ್ದವು.
ಜುಲೈ 9ರಂದು ಉತ್ತರ ಕಾಶ್ಮೀರದಲ್ಲಿ ಗಡಿ ಹೊರಠಾಣೆಯ ಮೇಲೆ ನಡೆದ ಪಾಕ್ ದಾಳಿ ಮತ್ತು ಜುಲೈ 5ರಂದು ಕಾಶ್ಮೀರ ಕಣಿವೆಯ ನೌಗಾಮ್ ವಿಭಾಗದಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ನಡೆದ ಪಾಕ್ ಗುಂಡಿನ ದಾಳಿಗೆ ಇಬ್ಬರು ಬಿಎಸ್ಎಫ್ ಯೋಧರು ಬಲಿಯಾಗಿದ್ದರು.












Click it and Unblock the Notifications