INDIA VS NDA: ‘ಇಂಡಿಯಾ’ ಮುಂದಿನ ಮೀಟಿಂಗ್ ಯಾವಾಗ ಗೊತ್ತಾ?
ಹೊಸ ಹುಮ್ಮಸ್ಸಿನ ಜೊತೆ ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಜ್ಜಾಗಿರುವ ವಿಪಕ್ಷ ನಾಯಕರ ಒಕ್ಕೂಟ ತೊಡೆತಟ್ಟಿದೆ. ಅದ್ರಲ್ಲೂ ಬೆಂಗಳೂರು ಸಭೆ ಬಳಿಕ ಮತ್ತಷ್ಟು ಹೊಸ ಹುರುಪು ಬಂದಿದೆ. ಇದೇ ಕಾರಣಕ್ಕೆ ಮುಂದಿನ ಸಭೆಯಲ್ಲಿ ಇನ್ನೂ ಮಹತ್ವದ ನಿರ್ಧಾರ ಕೈಗೊಳ್ಳಲು ವಿಪಕ್ಷಗಳು ಸಜ್ಜಾಗಿವೆ. ಮುಂಬೈ ನಗರದಲ್ಲಿ ಮೀಟಿಂಗ್ ನಡೆಯೋದು ಪಕ್ಕಾ ಆಗಿದೆ. ಆದ್ರೆ ಮುಂಬೈ ಸಭೆಯ ಮುಹೂರ್ತ ಯಾವಾಗ ಗೊತ್ತಾ?
ಅಂದಹಾಗೆ 2024ರ ಚುನಾವಣೆ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿರುವ ವಿಪಕ್ಷ ನಾಯಕರು ಮೊನ್ನೆ ಬೆಂಗಳೂರಲ್ಲಿ ಸಭೆ ನಡೆಸಿದ್ದರು. ಈ ಸಭೆಯಲ್ಲಿ 'ಇಂಡಿಯಾ' (INDIA) ಒಕ್ಕೂಟ ಎಂದು ವಿಪಕ್ಷಗಳು ತಮ್ಮ ಒಕ್ಕೂಟಕ್ಕೆ ಮರು ನಾಮಕರಣ ಮಾಡಿದ್ದವು. ಮೀಟಿಂಗ್‌ನ ಬಳಿಕ 'ಇಂಡಿಯಾ' ಒಕ್ಕೂಟ ದೇಶದ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಇದೇ ಸಭೆಯಲ್ಲಿ ನಾಯಕರ ನಡುವೆ ಒಗ್ಗಟ್ಟು ಪ್ರದರ್ಶಿಸಲು ಸಮಿತಿ ರಚನೆಗೂ ಚರ್ಚಿಸಲಾಗಿತ್ತು. ಆದರೆ ಆ ಎಲ್ಲಾ ನಿರ್ಧಾರಗಳನ್ನು ಮುಂಬೈ ಸಭೆಯಲ್ಲಿ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಎಲ್ಲಾ ಅಂದುಕೊಂಡಂತೆ ನಡೆದರೆ ಆಗಸ್ಟ್ 15ರ ಬಳಿಕ ಮುಂಬೈನಲ್ಲಿ ಸಭೆ ಸೇರಬಹುದು ಅಂತಾ ಹೇಳಲಾಗಿದೆ.

ಏನೆಲ್ಲಾ ಮಹತ್ವದ ನಿರ್ಧಾರ?
ವಿರೋಧ ಪಕ್ಷಗಳು ಮೊದಲಿಗೆ ಸೇರಿದ್ದು ಬಿಹಾರ ರಾಜಧಾನಿಯಲ್ಲಿ. ಪಟ್ನಾ ಸಭೆ ನಂತರ ಬೆಂಗಳೂರಿನಲ್ಲಿ ಬೃಹತ್ ಮೀಟಿಂಗ್ ಮಾಡಿವೆ. ಇದೀಗ ಮುಂಬೈ ಸಭೆಯಲ್ಲಿ ಹಲವಾರು ಮಹತ್ವದ ನಿರ್ಧಾರಗಳನ್ನ ಕೈಗೊಳ್ಳಲಿದ್ದಾರೆ. ಅದರಲ್ಲೂ ಪ್ರಮುಖವಾಗಿ 11 ಸದಸ್ಯರನ್ನು ಒಳಗೊಂಡ ಸಮನ್ವಯ ಸಮಿತಿಯನ್ನ ಅಂತಿಮಗೊಳಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಅಲ್ಲದೆ ಮಿತ್ರ ಪಕ್ಷಗಳಲ್ಲಿ ಸ್ಥಾನ ಹಂಚಿಕೆ, ಚುನಾವಣೆ ಸಿದ್ಧತೆ, ಪ್ರಚಾರ ನಿರ್ವಹಣೆ ಸೇರಿದಂತೆ ಮಹತ್ವದ ವಿಷಯ ಚರ್ಚಿಸುವ ಸಾಧ್ಯತೆ ಇದೆ. ಹೀಗಾಗಿಯೇ ಮುಂಬೈ ಸಭೆ ಮೇಲೆ ಭಾರಿ ಕುತೂಹಲ ಮೂಡಿದೆ.
'ಯುಪಿಎ' ದಿಢೀರ್ 'ಇಂಡಿಯಾ' ಆಗಿದ್ದೇಕೆ?
2024ರ ಲೋಕಸಭೆ ಬಿಜೆಪಿ ನೇತೃತ್ವದ ಎನ್‌ಡಿಎಗೆ ಸುಲಭದ ತುತ್ತಾಗಿಲ್ಲ. ಅದರಲ್ಲೂ ಸಾಲು ಸಾಲು ವಿಧಾನಸಭೆ ಚುನಾವಣೆಗಳ ಸೋಲು ಬಿಜೆಪಿಯನ್ನೇ ಕಂಗೆಡಿಸಿದೆ. ಹೀಗಾಗಿ 2019ರಲ್ಲಿ ಬಿಟ್ಟು ಹೋಗಿದ್ದ ದೋಸ್ತಿಗಳನ್ನು ಮತ್ತೆ ಕರೆಸಿಕೊಂಡು ಸ್ನೇಹ ಮಾಡಿಕೊಳ್ಳುತ್ತಿದೆ ಎನ್‌ಡಿಎ. ಆದರೆ ಇದೇ ಸಂದರ್ಭದಲ್ಲಿ ವಿರೋಧ ಪಕ್ಷಗಳಿಂದ ಹೊಸ ಅಸ್ತ್ರ ಪ್ರಯೋಗವಾಗಿದ್ದು ಹಿಂದೆ ಇದ್ದ 'ಯುಪಿಎ' ಒಕ್ಕೂಟದ ಪದವೇ ಬದಲಾಗಿ ಹೋಗಿದೆ. 'ಯುಪಿಎ' ಈಗ 'ಇಂಡಿಯಾ' ಆಗಿ ಬದಲಾಗುವ ಮೂಲಕ ಬಿಜೆಪಿಗೆ ದೊಡ್ಡ ಆಘಾತ ನೀಡಿದೆ. ಆದರೆ ಇದು ಚುನಾವಣೆಯ ವೇಳೆ ಹೇಗೆ ಕೆಲಸ ಮಾಡಬಹುದು ಎಂಬ ಬಗ್ಗೆ ಚರ್ಚೆ ಶುರುವಾಗಿದೆ.

ಯಾವೆಲ್ಲಾ ಪಕ್ಷಗಳು 'ಇಂಡಿಯಾ' ಒಕ್ಕೂಟಕ್ಕೆ?
ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎಎಪಿ, ಜೆಡಿ(ಯು), ಆರ್‌ಜೆಡಿ, ಎನ್‌ಸಿಪಿ, ರಾಷ್ಟ್ರೀಯ ಲೋಕದಳ, ಜಮ್ಮು ಕಾಶ್ಮೀರ್ ನ್ಯಾಷನಲ್ ಕಾನ್ಫರೆನ್ಸ್, ಅಪ್ನಾ ದಳ್ (ಕಮೆರಾವಾಡಿ), ಎಸ್‌ಪಿ, ಶಿವಸೇನಾ (ಉದ್ಧವ್ ಠಾಕ್ರೆ), ಜೆಎಂಎಂ, ಪಿಡಿಪಿ, ಸಿಪಿಐ, ಸಿಪಿಐ (ಎಂ), ಸಿಪಿಐ (ಎಂಎಲ್), ರೆವೆಲ್ಯುಷನರಿ ಸೋಷಿಯಲಿಸ್ಟ್ ಪಾರ್ಟಿ, ಆಲ್ ಇಂಡಿಯಾ ಫಾರ್ವಡ್ ಬ್ಲಾಕ್, ಎಂಡಿಎಂಕೆ, ವಿಸಿಕೆ (ವಿಡುದಲೈ ಚಿರುತೈಗಳ್ ಕಚ್ಚಿ), ಕೆಎಂಡಿಕೆ (ಕೊಂಗುನಾಡು ಮಕ್ಕಳ್ ದೇಸಿಯಾ ಕಚ್ಚಿ), ಎಂಎಂಕೆ (ಮಣಿತನೆಯ ಮಕ್ಕಳ್ ಕಚ್ಚಿ), ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸೇರಿದಂತೆ ಕೇರಳ ಕಾಂಗ್ರೆಸ್ (ಮಣಿ) ಹಾಗೂ ಕೇರಳ ಕಾಂಗ್ರೆಸ್ (ಜೋಸೆಫ್) ಪಕ್ಷಗಳು 'ಇಂಡಿಯಾ' ಒಕ್ಕೂಟದ ಭಾಗವಾಗಲಿವೆ.
ಒಟ್ನಲ್ಲಿ ಕುತೂಹಲ ಕೆರಳಿಸಿರುವ 2024ರ ಚುನಾವಣೆ ಲೋಕಸಭೆ ಚುನಾವಣೆಗೆ ಈಗಿಂದಲೇ ಸಿದ್ಧತೆ ಆರಂಭವಾಗಿದೆ. ಅತ್ತ ವಿಪಕ್ಷಗಳು ಒಕ್ಕೂಟ ರಚಿಸಿದ್ದರೆ, ಇತ್ತ ಎನ್‌ಡಿಎ ಕೂಡ ತನ್ನ ಹಳೆಯ ದೋಸ್ತಿಗಳ ಜೊತೆ ಮತ್ತೆ ಒಕ್ಕೂಟ ರಚಿಸುತ್ತಿದೆ. ಈ ಮೂಲಕ ಎರಡೂ ಕಡೆ ಫೈಟ್ ಜೋರಾಗಿದೆ. ಹಾಗಾದ್ರೆ ಈ ಯುದ್ಧದಲ್ಲಿ ಗೆಲುವು ಯಾರಿಗೆ? ಸೋಲು ಯಾರ ಪಾಲಿಗೆ? ಎಂಬುದನ್ನ ಮತದಾರ ಪ್ರಭು ನಿರ್ಧರಿಸಲಿದ್ದಾನೆ. ಆದರೆ ಅದಕ್ಕೂ ಮೊದಲೇ ಲೋಕಸಭೆ ಚುನಾವಣೆ ಭಾರಿ ಕುತೂಹಲ ಕೆರಳಿಸಿದೆ.












Click it and Unblock the Notifications